ತೈಪೇಯಿ: ಭಾರತ-ಚೀನಾ ನಡುವೆ ಲಡಾಖ್ ಭಾಗದಲ್ಲಿ ಗಡಿ ಸಂಘರ್ಷ ಏರ್ಪಟ್ಟ ಬೆನ್ನಿಗೆ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಸೈನಿಕರು ಅಳ್ತಿರುವ ವಿಡಿಯೋ ಒಂದು ವೈರಲ್ ಆಗಿದೆ! ತೈವಾನ್ನಲ್ಲಿ ಇದು ಭಾರಿ ಸದ್ದು ಮಾಡಿದ್ದು, ಪಿಎಲ್ಎ ಸೈನಿಕರನ್ನು ಲೇವಡಿ ಮಾಡಲು ಬಳಸುತ್ತಿದ್ದಾರೆ. ಚೀನಾದ ಅತಿಕ್ರಮಣಕಾರಿ ಧೋರಣೇಯ ಕಾರಣ ತೈವಾನ್ ಜತೆಗೂ ಸಂಬಂಧ ಹಳಸಿದೆ.
ತೈವಾನ್ ನ್ಯೂಸ್ ವರದಿ ಪ್ರಕಾರ, ಪಾಕಿಸ್ತಾನದ ಕೊಮೆಡಿಯನ್ ಝೈದ್ ಹಮೀದ್ ಎಂಬುವವರು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ ವಿಡಿಯೋ ಅದು. ಅದರಲ್ಲಿ ಪಿಎಲ್ಎ ಸೈನಿಕರು ಬಸ್ನಲ್ಲಿ ಕುಳಿತು ಹೋಗುತ್ತಿರುವಾಗ ಹಾಡು ಕೇಳುತ್ತದೆ ಮತ್ತು ಅದಕ್ಕೆ ಅವರ ಮುಖಭಾವ ಅಳುತ್ತಿರುವಂತೆ ಕಾಣುತ್ತಿದೆ. ಈ ವಿಡಿಯೋದ ಜತೆಗೆ ಇರುವ ಕಿರುಬರಹ ಗಮನಸೆಳೆದಿದೆ. ಬಸ್ನಲ್ಲಿರುವವರನ್ನು ಲಡಾಖ್ ಗಡಿಭಾಗಕ್ಕೆ ವರ್ಗಾವಣೆ ಮಾಡಲಾಗಿದ್ದು, ಅಲ್ಲಿ ಅವರು ಭಾರತೀಯ ಸೇನೆಯನ್ನು ಎದುರಿಸಬೇಕಾಗಿದೆ. ಚೀನಾದ ಒಂದು ಮಗು ನೀತಿ ಗಂಭೀರವಾಗಿ ಹಾನಿ ಎಸಗುತ್ತಿದ್ದು, ಚೀನೀ ಸಹೋದರರ ನೈತಿಕ ಬಲವನ್ನು ಕುಸಿಯುವಂತೆ ಮಾಡಿದೆ. ಅಷ್ಟೇ ಅಲ್ಲ, ನಾವು ಪಾಕಿಸ್ತಾನೀಯರು ಏನಿದ್ದರೂ ಚೀನಾವನ್ನೆ ಬೆಂಬಲಿಸುತ್ತೇವೆ ಎಂದು ಟಾಂಗ್ ನೀಡಿದ್ದಾರೆ.‘
ಇದನ್ನೂ ಓದಿ: ಅಂತರ್ಜಾಲದ ಆಟಗಳು ಮುಂದೊಡ್ಡಿದ ಅಪಾಯ
ಈ ವಿಡಿಯೋ ಮೊದಲು ಫುಯಾಂಗ್ ಸಿಟಿ ವೀಕ್ಲೀಯ ವಿಚ್ಯಾಟ್ ಪೇಜ್ನಲ್ಲಿ ಅಪ್ಲೋಡ್ ಆಗಿತ್ತು. ಚೀನಾದ ಅನ್ಹುಯೀ ಪ್ರಾಂತ್ಯದ ಯಿಂಗ್ಝೋವು ಜಿಲ್ಲೆಯ ಫಿಯಾಂಗ್ ಸಿಟಿಯಿಂದ 10 ಯುವಕರು ಇತ್ತೀಚೆಗಷ್ಟೇ ಪಿಎಲ್ಎ ಸೇರಿದ್ದು, ಅವರು ಸೇನಾ ನಿಯೋಜನೆ ಮೇಲೆ ಪ್ರಯಾಣಿಸುತ್ತಿರುವ ದೃಶ್ಯವದು. ಕೆಲವೇ ಹೊತ್ತಿನಲ್ಲಿ ಈ ವಿಡಿಯೋ ವಿಚ್ಯಾಟ್ ಪೇಜ್ನಿಂದ ಡಿಲೀಟ್ ಆಗಿದೆ. ಲಭ್ಯ ಮಾಹಿತಿ ಪ್ರಕಾರ, ಇವರೆಲ್ಲರೂ ಕಾಲೇಜು ವಿದ್ಯಾರ್ಥಿಗಳಾಗಿದ್ದು, ಐವರು ಟಿಬೆಟ್ನಲ್ಲಿ ಸೇವೆ ಸಲ್ಲಿಸಲು ತೆರಳುತ್ತಿದ್ದಾರೆ. ಇದು ಲಡಾಖ್ ಗಡಿಭಾಗಕ್ಕೆ ಸಮೀಪದಲ್ಲಿದೆ. ಅದಕ್ಕೂ ಮುನ್ನ ತರಬೇತಿಗಾಗಿ ಹೆಬೇಯಿ ಪ್ರಾಂತ್ಯದ ಮಿಲಿಟರಿ ಕ್ಯಾಂಪ್ಗೆ ತೆರಳುವಾಗ ಫುಯಾಂಗ್ ರೈಲ್ವೆ ಸ್ಟೇಷನ್ ಬಳಿ ಇದನ್ನು ಚಿತ್ರೀಕರಿಸಲಾಗಿದೆ. ಅವರು ಹಾಡ್ತಾ ಇದ್ದುದು ಗ್ರೀನ್ ಫ್ಲವರ್ಸ್ ಇನ್ ದ ಆರ್ಮಿ ಎಂಬ ಪಿಎಲ್ಎಯ ಹಾಡು! (ಏಜೆನ್ಸೀಸ್)