ನ್ಯೂಸ್

ಇದು ಪರೀಕ್ಷೆಯಲ್ಲಿ ಕಾಪಿ ಹೊಡೆಯುವ ಹೊಸ ಟೆಕ್ನಿಕ್​ ಅಂತೆ!​ ವಿಡಿಯೋ ನೋಡಿದ್ರೆ ಹುಬ್ಬೇರೋದು ಗ್ಯಾರೆಂಟಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ನವದೆಹಲಿ: ಪರೀಕ್ಷೆಯಲ್ಲಿ ನಕಲು ಮಾಡಲು ಹೊಸ ತಂತ್ರವನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ. ವಿಡಿಯೋ ನೋಡಿದವರು ಕೂಡ ಅರೆಕ್ಷಣ ಬೆರಗಾಗುವ ದೃಶ್ಯ ಅದರಲ್ಲಿದ್ದು, ಈ ರೀತಿಯು ಕಾಪಿ ಮಾಡಬಹುದಾ ಎಂದು ಹುಬ್ಬೇರಿಸುವಂತಿದೆ.

ವಿಡಿಯೋವನ್ನು ಲ್ಯಾನ್ಸ್​ ಹೆಸರಿನ ಟ್ವಿಟರ್​ ಖಾತೆಯಲ್ಲಿ ಅಪ್​ಲೋಡ್​ ಮಾಡಲಾಗಿದ್ದು, "ಇದು ತಜ್ಞರ ಮಟ್ಟದ ವಂಚನೆ" ಎಂದು ಅಡಿಬರಹ ನೀಡಲಾಗಿದೆ.

ಸಣ್ಣ ವಿಡಿಯೋ ತುಣುಕಿನಲ್ಲಿ ಓರ್ವ ವ್ಯಕ್ತಿ ಪೆನ್​ನೊಂದಿಗೆ ಆಟವಾಡುವುದನ್ನು ನೋಡಬಹುದು. ಕೆಲವೇ ಕ್ಷಣಗಳಲ್ಲಿ ಕ್ಯಾಮೆರಾ, ಒಂದು ಪೌಚ್​ ಕಡೆಗೆ ತಿರುಗುತ್ತದೆ. ಮೊದಲು ನೋಡಿದವರಿಗೆ ಅಲ್ಲಿರುವುದು ಬಹು ಬಣ್ಣದ ಪೆನ್ಸಿಲ್ ಮತ್ತು ಪೆನ್​ಗಳು ಎಂದು ಭಾಸವಾಗುತ್ತದೆ. ಅಚ್ಚರಿಯೇನೆಂದರೆ, ಅದು ಪೆನ್ಸಿಲ್​ ಅಥವಾ ಪೆನ್​ ಅಲ್ಲ, ಬದಲಾಗಿ ಅದು ಮೊಬೈಲ್​ ಫೋನ್​. ಪೆನ್ಸಿಲ್​ ಮತ್ತು ಪೆನ್​ಗಳಿರುವ ವಾಲ್​ಪೇಪರ್​ ಅನ್ನು ಮೊಬೈಲ್​ ಫೋನ್​ನಲ್ಲಿ ಅಪ್ಲೈ ಮಾಡಲಾಗಿರುತ್ತದೆ. ವಿಡಿಯೋ ನೋಡಿದವರಿಗೆ ಅದು ನೈಜವಾಗಿಯೇ ಕಾಣುತ್ತದೆ. ಆದರೆ, ಅಲ್ಲಿರುವ ಮೊಬೈಲ್​ ಫೋನ್​ ಎನ್ನುವುದು ಮಾತ್ರ ಸತ್ಯ.

ಇನ್ನು ವ್ಯಕ್ತಿ ಮೊಬೈಲ್​ ಸ್ಕ್ರೀನ್​ ಸ್ಪರ್ಶಿಸುತ್ತಿದ್ದಂತೆ ಪೆನ್​ಗಳ ಫೋಟೋ ಬದಲಾಗಿ ಗ್ಯಾಲರಿ ಕಾಣುತ್ತದೆ. ಅದರಲ್ಲಿ ಪ್ರಶ್ನೆಗಳಿಗೆ ಉತ್ತರ ಇರುವ ಫೋಟೋಗಳು ಗೋಚರಿಸುತ್ತದೆ. ಇದೀಗ ಈ ತಂತ್ರವು ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ. ಈ ವರೆಗೂ 40 ಲಕ್ಷಕ್ಕೂ ಅಧಿಕ ವೀಕ್ಷಣೆ ಹಾಗೂ 10 ಲಕ್ಷಕ್ಕೂ ಅಧಿಕ ಲೈಕ್ಸ್​ ಪಡೆದುಕೊಂಡಿದೆ. ವಿಡಿಯೋ ನೋಡಿದವರು ಬಗೆ ಬಗೆಯ ಕಾಮೆಂಟ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​)