ಬೆಂಗಳೂರು: ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ನಡೆಸಲಾಗಿದೆ ಎಂಬ ಆರೋಪವಿದ್ದು, ಇದು ಸೂಕ್ಷ್ಮ ಪ್ರಕರಣವಾಗಿರುವುದರಿಂದ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಿ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಉಡುಪಿ ಕಾಲೇಜಿನಲ್ಲಿ ನಡೆದ ಘಟನೆಯ ಕುರಿತು ಈಗಾಗಲೇ ಪೊಲೀಸರು ತನಿಖೆ ನಡೆಸಿದ್ದು ಮಾಹಿತಿ ಕಲೆ ಹಾಕಿದ್ದರು. ತನಿಖೆ ವೇಳೆ ಮೌಖಿಕ ಮಾಹಿತಿ ಸಿಕ್ಕಿತ್ತೇ ಹೊರತು ದಾಖಲೆಗಳು ಸಿಕ್ಕಿರಲಿಲ್ಲ. ಹೆಚ್ಚಿನ ತನಿಖೆ ನಡೆಸುವ ಅನಿವಾರ್ಯತೆಯೂ ಸರ್ಕಾರಕ್ಕೆ ಎದುರಾಗಿತ್ತು. ಒಂದು ವೇಳೆ ಪ್ರಕರಣ ತಾತ್ವಿಕ ಅಂತ್ಯವಾಗದಿದ್ದರೆ ದೀರ್ಘಕಾಲೀನವಾಗಿ ರಾಜಕೀಯವಾಗಿ ಒಂದಷ್ಟು ಹಿನ್ನಡೆಯಾಗಬಹುದೆಂಬ ಅಂದಾಜಿನಲ್ಲಿ ಸರ್ಕಾರ ಸಿಐಡಿ ತನಿಖೆಗೊಪ್ಪಿಸಿದೆ.