ನ್ಯೂಸ್

ತರಗತಿ ಬಂಕ್​ ಮಾಡಿ ಶಾಲೆಯಲ್ಲೇ ಫೇಶಿಯಲ್​; ಪ್ರಶ್ನಿಸಿದವರ ಕೈ ಕಚ್ಚಿದ ಮುಖ್ಯ ಶಿಕ್ಷಕಿ

ಲಖನೌ: ತರಗತಿ ನಡೆಸುವ ಬದಲು ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ಚಕ್ಕರ್ ಹಾಕಿ ಸ್ಕೂಲಿನ ಆವರಣದಲ್ಲೇ ಫೇಶಿಯಲ್​ ಮಾಡಿಸಿಕೊಂಡು ಪೇಚಿಗೆ ಸಿಲುಕಿರುವ ಘಟನೆ ಉತ್ತರಪ್ರದೇಶದ ಉನ್ನಾವೋದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ.

ಮುಖ್ಯ ಶಿಕ್ಷಕಿ ಶಾಲೆಯ ಆವರಣದಲ್ಲೇ ಫೇಶಿಯಲ್​ ಮಾಡಿಸಿಕೊಳ್ಳುತ್ತಿರುವುದನ್ನು ವಿಡಿಯೋ ಮಾಡಿದ ಸಹವರ್ತಿ ಮೇಲೆ ಇಟ್ಟಿಗೆಯಿಂದ ಹೊಡೆದು, ಕೈ ಕಚ್ಚಿ ಹಲ್ಲೆ ನಡೆಸಲಾಗಿದೆ. ಇತ್ತ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಈ ಬಗ್ಗೆ ತನಿಖೆ ಕೈಗೊಂಡಿದ್ದು, ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಉನ್ನಾವೋದಲ್ಲಿರುವ ದಾದಾಮೌ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಗೀತಾ ಸಿಂಗ್ ಅವರು ತರಗತಿಯನ್ನು ತೆಗೆದುಕೊಳ್ಳುವ ಬದಲು ಶಾಲೆಯ ಅಡುಗೆಮನೆಯೊಳಗೆ ಫೇಶಿಯಲ್ ಮಾಡಿಸಿಕೊಳ್ಳುತ್ತಿದ್ದರು. ಇದನ್ನು ನೋಡಿದ ಮತ್ತೋರ್ವ ಶಿಕ್ಷಕಿ ಅನಮ್​ ಖಾನ್​ ಇದನ್ನು ವಿಡಿಯೋ ಮಾಡಿಕೊಂಡಿದ್ದಾರೆ.

ವಿಡಿಯೋ ಮಾಡುತ್ತಿರುವುದನ್ನು ಕಂಡ ಸಂಗೀತಾ ಸಿಂಗ್  ನಾನು ಏನಾದರೂ ಮಾಡುತ್ತೇನೆ ಅದನ್ನು ಕೇಳಲು ನೀನ್ಯಾರು ಎಂದು ಬಾಯಿಗೆ ಬಂದಂತೆ ಮಾತನಾಡಲು ಶುರು ಮಾಡಿದ್ದಾರೆ. ಬಳಿಕ ಅನಮ್​ ಖಾನ್​ ಮೇಲೆ ಇಟ್ಟಿಗೆಯಿಂದ ಹೆಲ್ಲೆಗೆ ಮುಂದಾಗಿದ್ದು, ಅವರ ಕೈಕಚ್ಚಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.