ಭೋಪಾಲ್: ಮುಸ್ಲಿಂ ಮಹಿಳೆಗೆ ಡ್ರಾಪ್ ನೀಡುತ್ತಿದ್ದ ಹಿಂದೂ ಪುರುಷನ ಬೈಕು ನಿಲ್ಲಿಸಿ ಹಲ್ಲೆ ಮಾಡಿದ್ದ ಪ್ರಕರಣ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿತ್ತು. ಅದೇ ಮಾದರಿಯಲ್ಲಿ ಹಿಂದೂ ಯುವಕನೊಂದಿಗೆ ಹೋಗುತ್ತಿದ್ದ ಯುವತಿಯೊಬ್ಬಳ ಬುರ್ಖಾ ತೆಗೆಸಿರುವ ನೈತಿಕ ಗೂಂಡಾಗಿರಿಯ ಪ್ರಸಂಗ ಮಧ್ಯಪ್ರದೇಶದಿಂದ ವರದಿಯಾಗಿದೆ.
ರಾಜ್ಯದ ರಾಜಧಾನಿ ಭೋಪಾಲ್ನ ಇಸ್ಲಾಮ್ ನಗರದಲ್ಲಿ ಸ್ಕೂಟರಿನಲ್ಲಿ ಹೋಗುತ್ತಿದ್ದ ಯುವಕ-ಯುವತಿಯನ್ನು ಕೆಲವು ಮಂದಿ ಅಡ್ಡಗಟ್ಟಿದ್ದಾರೆ. ಹಿಂದೂ ಯುವಕನೊಂದಿಗೆ ಮುಸ್ಲಿಂ ಯುವತಿ ಹೋಗುತ್ತಿದ್ದಾಳೆಂಬ ಅನುಮಾನದಲ್ಲಿ ಆಕೆಗೆ ಬುರ್ಖಾ ತೆಗೆಯಿರಿ ಎಂದು ಗದರಿಸಿದ್ದಾರೆ. ಗುಂಪಿನಲ್ಲಿ ಒಬ್ಬ ನಮ್ಮ ಕೋಮಿಗೆ ನೀವು ಕೆಟ್ಟ ಹೆಸರು ತರುತ್ತಿದ್ದೀರಿ ಎಂದು ಹಿಂದಿಯಲ್ಲಿ ಹೇಳುತ್ತಿರುವಂತೇ ಯುವತಿಯು ಅಳುತ್ತಾ ಬುರ್ಖಾ ಬಿಚ್ಚಿಕೊಡುವುದು ವಿಡಿಯೋದಲ್ಲಿ ದಾಖಲಾಗಿದೆ.
ಆಕೆಯ ಮುಖಕ್ಕೆ ಸುತ್ತಿದ ಹಿಜಾಬ್ಅನ್ನೂ ತೆಗೆಯಿರಿ, ಎಲ್ಲರಿಗೂ ನೀವ್ಯಾರು ಎಂದು ಗೊತ್ತಾಗಲಿ ಎಂದು ನೈತಿಕ ಪೊಲೀಸ್ಗಿರಿ ಮಾಡುವ ಆ ಜನರಿಗೆ ಬಿಟ್ಟುಬಿಡಿ ಎಂದು ಯುವಕ ಕೇಳಿಕೊಳ್ಳುತ್ತಿರುವುದೂ ದಾಖಲಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ವರ್ತನೆಯನ್ನು ಖಂಡಿಸಿದ್ದಾರೆ.
ಸ್ಕೂಟರು ನಿಲ್ಲಿಸಿ ಗೂಂಡಾಗಿರಿ ಮಾಡಿದ ಇಬ್ಬರು ಪುರುಷರನ್ನು ಬಂಧಿಸಲಾಯಿತು. ಆದರೆ, ಯುವತಿಯು ದೂರು ನೀಡಲು ನಿರಾಕರಿಸಿದ ಕಾರಣ, ಯಾವುದೇ ಪ್ರಕರಣ ದಾಖಲಾಗಿಲ್ಲ. ಆದ್ದರಿಂದ ಮತ್ತೊಮ್ಮೆ ಈ ರೀತಿಯ ಕೃತ್ಯಗಳನ್ನು ಎಸಗದಂತೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಹೇಳಿದೆ. (ಏಜೆನ್ಸೀಸ್)