ನ್ಯೂಸ್

VIDEO| ಡ್ಯಾನ್ಸ್​ ಮೂಲಕ ಉದ್ಯೋಗಿಗಳನ್ನು ಹುರಿದುಂಬಿಸಿದ ವೆಲ್ಸಪನ್​ ಇಂಡಿಯಾ ಸಿಇಒ: ಜಾಲತಾಣದಲ್ಲಿ ಪ್ರಶಂಸೆಯ ಸುರಿಮಳೆ!

ನವದೆಹಲಿ: ವೆಲ್ಸಪನ್​ ಇಂಡಿಯಾ ಸಿಇಒ ದೀಪಾಲಿ ಗೊಯೆಂಕಾ ಅವರು ತನ್ನ ಕಂಪನಿಯ ಉದ್ಯೋಗಿಗಳೊಂದಿಗೆ ಹೆಜ್ಜೆ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಕಾಣಿಸಿಕೊಂಡಿದೆ. ವಿಡಿಯೋದಲ್ಲಿ ವೆಲ್ಸ್​ಪನ್​ ಇಂಡಿಯಾ ಸಿಇಒ ಮತ್ತು ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕರು ಬಾಲಿವುಡ್​ನ ಸ್ಟ್ರೀಟ್​ ಡ್ಯಾನ್ಸರ್​ 3ಡಿ ಚಿತ್ರದ ಮುಕಾಬುಲ್ಲಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಉದ್ಯೋಗಿಗಳು ಕೂಡ ತಮ್ಮ ಕೆಲಸವನ್ನು ಬಿಟ್ಟು ಸಿಇಒ ಜತೆಗೆ ಹೆಜ್ಜೆ ಹಾಕಿದ್ದಾರೆ. ಕೊನೆಯಲ್ಲಿ ಒಬ್ಬರಿಗೊಬ್ಬರು ಚಪ್ಪಾಳೆ ತಟ್ಟುವ ಮೂಲಕ ವಿಡಿಯೋ ಕೊನೆಗೊಳ್ಳುತ್ತದೆ.

ದೀಪಾಲಿ ಗೊಯೆಂಕಾ ಅವರ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದು, ಆರೋಗ್ಯಯುತ ಕೆಲಸದ ಸಂಸ್ಕೃತಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಆರ್​ಪಿಜಿ ಎಂಟರ್ಪ್ರೈಸಸ್​ ಚೇರ್ಮನ್​ ಹರ್ಷ್​ ಗೊಯೆಂಕ ಅವರು ಕೂಡ "ಕರ್ತವ್ಯ ಸ್ಥಳದಲ್ಲಿ ಒಳ್ಳೆಯ ಸಂಸ್ಕೃತಿ" ಹಾಗೂ ಸಿಇಒ ಡ್ಯಾನ್ಸ್​ ಮಾಡುವಂತಹದು ಅಪರೂಪದ ಕ್ಷಣವೆಂದು ಹೊಗಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ದೀಪಾಲಿ ಗೊಯೆಂಕಾ ಅವರು ಧನ್ಯವಾದ ತಿಳಿಸಿ, ನಿಮ್ಮ ಕಚೇರಿಯಲ್ಲಿಯೂ ಇಂಥದ್ದೇ ಕ್ಷಣವನ್ನು ನೋಡಲು ಇಚ್ಛಿಸಿರುವುದಾಗಿ ತಿಳಿಸಿದ್ದಾರೆ.

ದೀಪಾಲಿ ಗೊಯೆಂಕಾ ಅವರು ಕೂಡು ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದು, ಬಿಸಿನೆಸ್​ ಟೈಕೂನ್​ಗಳಾದ ಆನಂದ್​ ಮಹೀಂದ್ರಾ, ಗೌತಮ್​ ಅದಾನಿ ಮತ್ತು ಕಿರಣ್​ ಮಜೂಂದರ್​ ಶಾಗೆ ಟ್ಯಾಗ್​ ಮಾಡಿ, ಇದು ನನ್ನ ಕೆಲಸದ ಸ್ಥಳ. ನಿಮ್ಮ ಸ್ಥಳ ಹೇಗಿದೆ? ಎಂದು ಕೇಳಿದ್ದಾರೆ.

ಸದ್ಯ ದೀಪಾಲಿ ಗೊಯೆಂಕಾ ಅವರ ವಿಡಿಯೋ ಮಾತ್ರ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದ್ದು, ಅನೇಕ ನೆಟ್ಟಿಗರು ಕಾಮೆಂಟ್​ಗಳ ಸುರಿಮಳೆಗೈದಿದ್ದಾರೆ. (ಏಜೆನ್ಸೀಸ್​)