ನ್ಯೂಸ್

ಮುನಿರತ್ನ ನಿವಾಸದ ಮೇಲೆ ಎಸ್‌ಐಟಿ ದಾಳಿ: ರಾಜಕಾರಣಿಗಳ ಖಾಸಗಿ ಕ್ಷಣದ ವಿಡಿಯೋ ಪತ್ತೆ

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಮುನಿರತ್ನ ಅವರ ಮನೆ ಮೇಲೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಲ್ಯಾಪ್‌ಟಾಪ್ ಮತ್ತು ಪೆನ್‌ಡ್ರೈವ್‌ಗಳಲ್ಲಿ ಕೆಲ ರಾಜಕೀಯ ನಾಯಕರ ಖಾಸಗಿ ಕ್ಷಣದ ವಿಡಿಯೋಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಮುನಿರತ್ನ ವಿರುದ್ಧ ದಾಖಲಾಗಿರುವ ಅತ್ಯಾಚಾರ, ಸುಲಿಗೆ, ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣಗಳ ತನಿಖೆಯನ್ನು ಎಸ್‌ಐಟಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ತನಿಖೆಯ ಭಾಗವಾಗಿ ಸೆ.೨೮ರಂದು ಅಧಿಕಾರಿಗಳು ಮುನಿರತ್ನ ಅವರ ನಿವಾಸ, ಕಚೇರಿ ಸೇರಿದಂತೆ ೧೨ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಿಢೀರ್ ದಾಳಿ ನಡೆಸಿದ್ದರು.
ವೈಯಾಲಿಕಾವಲ್‌ನಲ್ಲಿರುವ ಮುನಿರತ್ನರ ಮನೆಯಲ್ಲಿ ಶೋಧ ಕಾರ್ಯಾಚರಣೆ ವೇಳೆ ಕಂಪ್ಯೂಟರ್, ಲ್ಯಾಪ್‌ಟಾಪ್, ಹಾರ್ಡ್‌ಡಿಸ್ಕ್, ಪೆನ್‌ಡ್ರೈವ್‌ಗಳು ಸೇರಿದಂತೆ ಕೆಲ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಜಪ್ತಿ ಮಾಡಲಾಗಿತ್ತು. ಈ ಪೈಕಿ ಲ್ಯಾಪ್‌ಟಾಪ್ ಮತ್ತು ಪೆನ್‌ಡ್ರೈವ್‌ಗಳಲ್ಲಿ ಕೆಲ ರಾಜಕೀಯ ನಾಯಕರ ಹಾಗೂ ಸರಕಾರಿ ಅಧಿಕಾರಿಗಳ ಖಾಸಗಿ ವಿಡಿಯೋಗಳು ಪತ್ತೆಯಾಗಿವೆ. ಮಹಿಳೆಯರ ಅಶ್ಲೀಲ ದೃಶ್ಯಗಳು ವಿಡಿಯೊದಲ್ಲಿವೆ. ಹನಿಟ್ರ್ಯಾಪ್ ಮೂಲಕ ಈ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿರುವ ಶಂಕೆಯಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಮುನಿರತ್ನರ ಮೊಬೈಲ್‌ನಲ್ಲಿ ಹನಿಟ್ರ್ಯಾಪ್‌ನ ಸಾಕಷ್ಟು ವಿಡಿಯೋ ಮತ್ತು ಆಡಿಯೋಗಳಿರುವ ಬಗ್ಗೆ ಸುಳಿವು ಸಿಕ್ಕಿದೆ. ಹೀಗಾಗಿ, ಮುನಿರತ್ನರ ಮೊಬೈಲ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದೆ. ಆದರೆ, ಆ ಮೊಬೈಲ್ ಕೋಲಾರದಲ್ಲಿ ಕಳೆದು ಹೋಗಿರುವುದಾಗಿ ಮುನಿರತ್ನ ಹೇಳಿದ್ದಾರೆ. ಮೊಬೈಲ್‌ನ ಐಎಂಇಐ ನಂಬರ್ ವಿವರ ಆಧರಿಸಿ ಪತ್ತೆ ಕಾರ್ಯ ಮುಂದುವರಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎ್ಎಸ್‌ಎಲ್‌ಗೆ ರವಾನೆ:
ಹನಿಟ್ರ್ಯಾಪ್ ಆರೋಪಕ್ಕೆ ಸಂಬಂಧಪಟ್ಟಂತೆ ವಿಡಿಯೋಗಳು ಪ್ರಮುಖ ಪುರಾವೆಗಳಾಗುತ್ತವೆ. ಹೀಗಾಗಿ, ಲ್ಯಾಪ್‌ಟಾಪ್ ಮತ್ತು ಪೆನ್‌ಡ್ರೈವ್‌ಗಳಲ್ಲಿ ಸಿಕ್ಕಿರುವ ವಿಡಿಯೋಗಳು ಅಸಲಿಯೇ ಅಥವಾ ನಕಲಿಯೇ ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಹೆಚ್ಚಿನ ಪರಿಶೀಲನೆಗಾಗಿ ಲ್ಯಾಪ್‌ಟಾಪ್, ಪೆನ್‌ಡ್ರೈವ್‌ಗಳನ್ನು ಎ್ಎಸ್‌ಎಲ್ ಕಳುಹಿಸಲಾಗಿದೆ. ಮುನಿರತ್ನರ ಪೊಲೀಸ್ ಕಸ್ಟಡಿ ಅವಧಿ ಅ.೫ಕ್ಕೆ ಅಂತ್ಯಗೊಳ್ಳಲಿದೆ. ಮುನಿರತ್ನ ಅವರು ತನಿಖೆಗೆ ಸಹಕರಿಸುತ್ತಿಲ್ಲ. ಸಾಕ್ಷ್ಯಾಧಾರಗಳನ್ನು ಮುಂದಿಟ್ಟು ವಿಚಾರಣೆ ನಡೆಸಿದರೂ ತಮ್ಮ ವಿರುದ್ಧದ ಎಲ್ಲಾ ಆರೋಪಿಗಳನ್ನು ನಿರಾಕರಿಸುತ್ತಿದ್ದಾರೆ. ಅವರು ತನಿಖೆಗೆ ಸಹಕರಿಸದ ಸಂಗತಿಯನ್ನು ಕೋರ್ಟ್‌ನ ಗಮನಕ್ಕೆ ತರಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.