ತುಮಕೂರು: ‘ನೀವೆಲ್ಲ ದೊಡ್ಡ ಮನಸು ಮಾಡಿ ಒಂದೇ ಮಾತಲ್ಲಿ ಹೇಳಿಬಿಟ್ಟರೆ, ನಾಳೆನೇ ರಾಜೀನಾಮೆ ಕೊಟ್ಟುಬಿಡ್ತೀನಿ’ ಹೀಗೆಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ನೀಡಿರುವ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ, ರಾಜಕೀಯವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸೋಮವಾರ (ಫೆ.17) ಕೊರಟಗೆರೆಯ ರಾಜೀವ ಭವನದಲ್ಲಿ ಪರಮೇಶ್ವರ ಕ್ಷೇತ್ರದ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಮಾತನಾಡಿ, ಸಮಯ ನನ್ನ ಕೈಲಿ ಇಲ್ಲ. ಗೃಹ ಇಲಾಖೆ ಒತ್ತಡದಿಂದಾಗಿ ಸ್ವಕ್ಷೇತ್ರಕ್ಕೆ ಭೇಟಿ ನೀಡಲಾಗುತ್ತಿಲ್ಲ, ನಾಟಕಕ್ಕೆ ಹೋಗಬೇಕಿತ್ತು. ಹಾಡು ಹೇಳಬೇಕಿತ್ತು. ಅಲ್ಲದೆ, ನಿಮ್ಮ ಜತೆಗಿರಲು ಸಾಧ್ಯವಾಗುತ್ತಿಲ್ಲ. ನಮ್ಮ ಕೈಗೆ ಸಿಗುತ್ತಿಲ್ಲ ಅಂತ ನಿಮಗೂ ನಿರಾಸೆ ಆಗಿರಬಹುದು. ಅದೇ ರೀತಿ ನನಗೂ ನಿರಾಸೆ ಆಗಿದೆ. ನಿಮಗೆ ಸ್ಪಂದಿಸಲು ಸಾಧ್ಯವಾಗದಿದ್ದಕ್ಕೆ ಕ್ಷಮೆಯಾಚಿಸುವೆ, ನೀವು ದೊಡ್ಡ ಮನಸು ಮಾಡಿ ಒಂದೇ ಮಾತಲ್ಲಿ ಹೇಳಿಬಿಟ್ಟರೆ ರಾಜೀನಾಮೆ ಕೊಟ್ಟು ಶಾಸಕನಾಗಿ ನಿಮ್ಮ ಜತೆಗಿರುವೆ ಎಂದಿದ್ದಾರೆ. ಈ ವೇಳೆ ಅಲ್ಲಿದ್ದವರು ‘ಬೇಡ, ಬೇಡ...’ ಅಂದರಲ್ಲದೆ ‘ನೀವು ಸಿಎಂ ಆಗಬೇಕು’ ಎಂದು ಕೂಗುತ್ತಿದ್ದಂತೆ, ‘ಹೇ ತಡಿರೋ ಯಾರ್ಯಾರು ಎಷ್ಟೆಷ್ಟು ಮೀಸೆ ತಿರಿವಿದ್ದೀರಾ ಅಂತ ನನಗೆ ಗೊತ್ತಿಲ್ಲವಾ?’ ಎಂದಿರುವುದು ವಿಡಿಯೋದಲ್ಲಿದೆ.
ಕಾನೂನು, ಸುವ್ಯವಸ್ಥೆ ವಿಫಲವಾಗಿದ್ದರತ್ತ ಗಮನಸೆಳೆದರೆ, ಗೃಹ ಸಚಿವರು ರಾಜೀನಾಮೆ ಕೊಡಬೇಕೇ? ಎಂದು ಕೇಳಿದ್ದಾರೆ. ಇದು, ಅವಿವೇತಕನದ ಪರಮಾವಧಿ. ಕಾನೂನು ಮತ್ತು ಸುವ್ಯವಸ್ಥೆ ಬಿಗಿಯಾದರೆ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಇದಕ್ಕಾಗಿ ಜನರು ಆಶೀರ್ವಾದ ಮಾಡಿ ಅಧಿಕಾರ ನೀಡಿದ್ದಾರೆ. ಜವಾಬ್ದಾರಿ ಮರೆತು ಹೇಳಿಕೆ ನೀಡಿದರೆ ಕೊಲೆಗಡುಕರು, ದೇಶದ್ರೋಹಿಗಳಿಗೆ ಬಲ ನೀಡಿದಂತಾಗುತ್ತದೆ. | ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ