ಕರೊನಾ ವೈರಸ್ ಶುರುವಾದಾಗಿನಿಂದಲೂ ಮಾಸ್ಕ್ ಮತ್ತು ಸ್ಯಾನಿಟೈಸರ್ಗಳು ಪ್ರತಿಯೊಬ್ಬರ ಬೇಡಿಕೆಯಾಗಿಬಿಟ್ಟಿದೆ. ಆದರೆ ಈ ವಸ್ತುಗಳ ಪೂರೈಕೆಯೂ ಕಡಿಮೆಯಾಗಿದೆ.
ಕರೊನಾ ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆಗಾಗ ಕೈಗಳನ್ನು ಸೋಪು ಹಾಕಿ ನೀರಿನಿಂದ ತೊಳೆದುಕೊಳ್ಳುವುದು ಅಥವಾ ಸ್ಯಾನಿಟೈಸರ್ನಿಂದ ಸ್ವಚ್ಛಗೊಳಿಸಿಕೊಳ್ಳುವುದು ಸದ್ಯ ಬಹುತೇಕರ ಮೊದಲ ಆದ್ಯತೆ ಆಗಿದೆ.
ಆದರೆ ಸ್ಯಾನಿಟೈಸರ್ಗಳ ಕೊರತೆಯಿಂದ ಎಲ್ಲರಿಗೂ ದೊರೆಯುತ್ತಿಲ್ಲ. ಅದನ್ನು ಖರೀದಿಸಲು ಹರಸಾಹಸ ಪಡುವಂತಾಗಿದೆ. ಈ ಮಧ್ಯೆ ಸ್ಯಾನಿಟೈಸರ್ ಕಳ್ಳತನದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಪಾಕಿಸ್ತಾನದ ಪತ್ರಕರ್ತೆಯೋರ್ವರು ವಿಡಿಯೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
32 ಸೆಕೆಂಡ್ಗಳ ಸಿಸಿಟಿವಿ ಫೂಟೇಜ್ನ ವಿಡಿಯೋ ಕ್ಲಿಪ್ ಇದು. ವ್ಯಕ್ತಿಯೋರ್ವ ಎಟಿಎಂಗೆ ಹೋಗಿ ಹಣ ತೆಗೆಯುತ್ತಾನೆ. ಮಷಿನ್ನಿಂದ ಹೊರಬಂದ ಹಣವನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡ ಆತ, ಎಟಿಎಂ ಮಷಿನ್ ಪಕ್ಕದಲ್ಲಿ ಸಾರ್ವಜನಿಕರಿಗಾಗಿ ಇಟ್ಟಿದ್ದ ಸ್ಯಾನಿಟೈಸರ್ ಬಾಟಲಿಯನ್ನೂ ಎತ್ತಿ ತನ್ನ ಕೋಟಿನ ಜೇಬಿನಲ್ಲಿ ಇಡುತ್ತಾನೆ. ಅದನ್ನು ಯಾರಿಗೂ ಕಾಣದಂತೆ ಮುಚ್ಚಿಕೊಂಡು ಅಲ್ಲಿಂದ ತೆರಳುತ್ತಾನೆ. ಸಿಸಿಟಿವಿಯಲ್ಲಿ ಸೆರೆಯಾದ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಟ್ವಿಟರ್ನಲ್ಲಿ ಪೋಸ್ಟ್ ಹಾಕಿದ ಪತ್ರಕರ್ತೆ, ಯಾರೂ ನಮ್ಮನ್ನು ನೋಡುತ್ತಿಲ್ಲ ಎಂದು ಅಂದುಕೊಂಡರೆ ಹೀಗೆಲ್ಲ ಆಗುತ್ತದೆ ಎಂದು ಫನ್ನಿಯಾಗಿ ಕ್ಯಾಪ್ಷನ್ ಬರೆದಿದ್ದಾರೆ.
ನೆಟ್ಟಿಗರಂತೂ ವಿಧವಿಧದ ಕಾಮೆಂಟ್ಗಳನ್ನು ಬರೆದಿದ್ದಾರೆ.