ನ್ಯೂಸ್

VIDEO| ಪ್ರಯಾಣದ ವೇಳೆ ತೂಕಡಿಸಿದ್ದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ

ನ್ಯೂಯಾರ್ಕ್​​: ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಸುವ ವೇಳೆ ಕೆಲವರು ತೂಕಡಿಸುತ್ತ ನಿದ್ದೆಗೆ ಜಾರುವುದು ಸಹಜ. ಕೆಲವೊಮ್ಮೆ ನಿದ್ದೆ ಮಂಪರಿನಲ್ಲಿ ಸಹ ಪ್ರಯಾಣಿಕರ ಭುಜದ ಮೇಲೆ ನಮ್ಮ ತಲೆಯನ್ನು ಗೊತ್ತಿಲ್ಲದೆ ಒರಗಿಸುತ್ತೇವೆ. ಇದೇನು ಬೇಕೆಂದು ಮಾಡಿಲ್ಲವೆಂದು ಜನರು ಸುಮ್ಮನಾಗಿಬಿಡುತ್ತಾರೆ.

ಇದೀಗ ಘಟನೆಯೊಂದಲ್ಲಿ ಸಬ್​ಅರ್ಬನ್​ ರೈಲಿನಲ್ಲಿ ಸಹಪ್ರಯಾಣಿಕನೋರ್ವ ತನ್ನ ಭುಜದ ಮೇಲೆ ತಲೆ ಒರಗಿಸಿದ್ದಕ್ಕೆ ಕುಪಿತಗೊಂಡ ವ್ಯಕ್ತಿ ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ನ್ಯೂಯಾರ್ಕ್​ನಲ್ಲಿ ನಡೆದಿದೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವೈರಲ್​ ವಿಡಿಯೋದಲ್ಲೇನಿದೆ?

ವೈರಲ್​ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೋರ್ವ ತನ್ನ ಎದುರುಬದಿಯಲ್ಲಿ ಕುಳಿತಿರುವ ಪ್ರಯಾಣಿಕನನ್ನು ಶಪಿಸುತ್ತಿರುವುದು ಕಂಡು ಬರುತ್ತದೆ. ಇದಾದ ಕೆಲವೇ ನಿಮಿಷಗಳಲ್ಲಿ ತನ್ನ ಪಕ್ಕದಲ್ಲಿ ಕುಳಿತಿರುವ ಪ್ರಯಾಣಿಕ ನಿದ್ದೆ ಮಂಪರಿನಲ್ಲಿ ತಲೆ ಒರಗಿಸಿದ ಎಂಬ ಕಾರಣಕ್ಕೆ ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೇರೆಡೆಗೆ ಹೋಗಿ ಮಲಗುವಂತೆ ಹೇಳುತ್ತಾನೆ.

ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಸಹ ಪ್ರಯಾಣಿಕ ತನ್ನ ಪಾಡಿಗೆ ತಾನು ನಿದ್ದೆ ಮಾಡುತ್ತಿರುತ್ತಾನೆ. ಇದರಿಂದ ತೀವ್ರವಾಗಿ ಕುಪಿತಗೊಂಡ ಆ ವ್ಯಕ್ತಿ ಕೂಡಲೇ ಸಹ ಪ್ರಯಾಣಿಕನ ಮೇಲೆ ಹಲ್ಲೆ ನಡೆಸುತ್ತಾನೆ. ಇದನ್ನು ಕಂಡ ಆತನ ಸ್ನೇಹಿತ ವ್ಯಕ್ತಿಯ ಜೊತೆ ಜಗಳಕ್ಕಿಳಿಯುತ್ತಾನೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಇಬ್ಬರು ಹೊಡೆದಾಡಿಕೊಳ್ಳುತ್ತಾರೆ.

ರೈಲಿನಲ್ಲಿರುವ ಪ್ರಯಾಣಿಕರು ಜಗಳವನ್ನು ಬಿಡಿಸಲು ಹರಸಾಹಸ ಪಟ್ಟಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಹಲ್ಲೆ ನಡೆಸಿದ ವ್ಯಕ್ತಿ ಮೇಲೆ ನೆಟ್ಟಿಗರು ಕಿಡಿಕಾರಿದ್ದಾರೆ. ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ನ್ಯೂಯಾರ್ಕ್​ ಪೊಲೀಸರು ತಿಳಿಸಿದ್ದಾರೆ.