ನ್ಯೂಸ್

ಚೈಲಿಸುವ ಬೈಕ್​ ಮೇಲೆ ಮೈಮರೆತ ಯುವಜೋಡಿಗೆ ಕಾದಿತ್ತು ಆಘಾತ! ವಿಡಿಯೋ ವೈರಲ್​

ಜೈಪುರ: ಯುವಜೋಡಿಯೊಂದು ಚಲಿಸುತ್ತಿರುವ ಬೈಕ್​ ಮೇಲೆ ಕುಳಿತು ಚುಂಬಿಸುವ ಮೂಲಕ ಸಾರ್ವಜನಿಕ ಪ್ರದೇಶದಲ್ಲಿ ಅಸಭ್ಯ ವರ್ತನೆ ತೋರಿದ್ದಲ್ಲದೆ, ಸಂಚಾರ ನಿಯಮಗಳನ್ನು ಗಾಳಿಗೆ ತೂರಿರುವ ಘಟನೆ ರಾಜಸ್ಥಾನ ರಾಜಧಾನಿ ಜೈಪುರದಲ್ಲಿ ನಡೆದಿದೆ.

ಯುವಜೋಡಿಯ ಅಶ್ಲೀಲ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮುಂದೆ ರಸ್ತೆ ನೋಡಿಕೊಂಡು ಬೈಕ್ ಚಲಾಯಿಸದೇ ಹಿಂಬದಿಯಲ್ಲಿ ಕುಳಿತಿರುವ ತನ್ನ ಪ್ರೇಯಸಿಯನ್ನು ಚುಂಬಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಇಬ್ಬರು ಕೂಡ ಹೆಲ್ಮೆಟ್​ ಧರಿಸಿಲ್ಲ. ಇಬ್ಬರ ಈ ಅನುಚಿತ ವರ್ತನೆಯನ್ನು ಹಿಂದೆ ಬರುತ್ತಿದ್ದ ಸ್ಥಳೀಯರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ.

ವೈರಲ್ ವಿಡಿಯೋ ಕುರಿತು ಮಾಹಿತಿ ಪಡೆದ ನಂತರ ಹಿರಿಯ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ ಮತ್ತು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಚಾಲಕನಿಗೆ ದಂಡ ವಿಧಿಸಲಾಗಿದೆ.

ವ್ಯಕ್ತಿಯೊಬ್ಬರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಇತರ ಚಟುವಟಿಕೆಗಳಲ್ಲಿ ತೊಡಗಿರುವ ವಿಡಿಯೋವನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ಸ್ವೀಕರಿಸಿದ್ದೇವೆ. ವಿಡಿಯೋದಲ್ಲಿ ಪತ್ತೆಯಾಗಿರುವ ನೋಂದಣಿ ಸಂಖ್ಯೆಯ ಆಧಾರದ ಮೇಲೆ ನಾವು ವಾಹನ ಮಾಲೀಕರ ಹೆಸರು ಮತ್ತು ವಿಳಾಸವನ್ನು ಪಡೆದುಕೊಂಡಿದ್ದೇವೆ ಮತ್ತು ಮೋಟಾರು ವಾಹನ ಕಾಯ್ದೆ (ಎಂವಿ) ಅಡಿಯಲ್ಲಿ ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಜೈಪುರ ಸಂಚಾರ ಅಧಿಕಾರಿ ತಿಳಿಸಿದರು.

ಕಳೆದ ಹೋಳಿ ಹಬ್ಬದಂದು ಜೈಪುರದಲ್ಲಿ ಇದೇ ರೀತಿಯ ಘಟನೆ ವರದಿಯಾಗಿತ್ತು. ಜೋಡಿಯೊಂದು ಚಲಿಸುವ ಬೈಕ್‌ನಲ್ಲಿ ರೋಮ್ಯಾನ್ಸ್ ಮಾಡುತ್ತಿರುವುದು ಕಂಡುಬಂದಿತ್ತು. ಜೋಡಿಯು ರಾಯಲ್ ಎನ್‌ಫೀಲ್ಡ್ ಬುಲೆಟ್‌ನಲ್ಲಿ ಚಾಲನೆಯಲ್ಲಿರುವಾಗಲೇ ಸರಸ ಸಲ್ಲಾಪದಲ್ಲಿ ತೊಡಗಿದ್ದರು. ಈ ಪ್ರಕರಣದಲ್ಲೂ ಕ್ರಮ ಜರುಗಿಸಲಾಗಿದೆ. (ಏಜೆನ್ಸೀಸ್​)