ನವದೆಹಲಿ: ಅಮೆರಿಕ ಸೇನೆ ನಡೆಸಿದ ಡ್ರೋನ್ ದಾಳಿಯಲ್ಲಿ ಇರಾನಿಯನ್ ಸೇನಾ ನಾಯಕ ಜನರಲ್ ಖಾಸಿಮ್ ಸುಲೈಮಾನಿ ಹತರಾಗಿದ್ದು, ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ಕದನ ಕಾರ್ಮೋಡ ಆವರಿಸಿದೆ. ಇದರ ಬೆನ್ನಲ್ಲೇ ಸಾಕಷ್ಟು ನಕಲಿ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಅದರ ಭಾಗವಾಗಿ ಅಮೆರಿಕ ನಡೆಸಿದ ಡ್ರೋನ್ ದಾಳಿ ವಿಡಿಯೋ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನಕಲಿ ಎಂಬುದು ಫ್ಯಾಕ್ಟ್ಚೆಕ್ನಲ್ಲಿ ಪತ್ತೆಯಾಗಿದೆ.
ಜಾಲತಾಣದಲ್ಲಿ ಹರಿದಾಡುತ್ತಿರುವ ಡ್ರೋನ್ ದಾಳಿಯ ವಿಡಿಯೋ ನಕಲಿಯಾಗಿದ್ದು, ಎಸಿ-130 ಗನ್ಶಿಪ್ ಸಿಮುಲೇಟರ್: ಸ್ಪೆಷಲ್ ಆಪರೇಷನ್ ಸ್ಕ್ವಾಡ್ರನ್( AC-130 Gunship Simulator: Special Ops Squadron) ಎಂಬುದು ಗೇಮ್ನ ಹೆಸರಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಫುಟೇಜ್ ಅನ್ನು ಗೇಮ್ ಡೆವಲಪರ್ ಬೈಟ್ ಕನ್ವೇಯರ್ ಸ್ಟುಡಿಯೋ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದು, ಇದನ್ನು ಅಮೆರಿಕ ಡ್ರೋನ್ ದಾಳಿಗೆ ತಳುಕು ಹಾಕಲಾಗಿದೆ.
ನಕಲಿ ವಿಡಿಯೋದಲ್ಲಿ ಬೆಂಗಾವಲು ವಾಹನಗಳ ಮೇಲೆ ಗುಂಡಿನ ದಾಳಿ ನಡೆಸುವ ಏರಿಯಲ್ ದೃಶ್ಯ ಕಾಣುತ್ತದೆ. ಒಂದರ ಹಿಂದೆ ಒಂದು ಕಾರು ಗುಂಡಿನ ದಾಳಿಯಿಂದ ಸ್ಫೋಟಗೊಳ್ಳುವುದನ್ನು ನೋಡಬಹುದಾಗಿದೆ. ಅಲ್ಲದೆ, ರೆಡಿಯೋ ಮೂಲಕ ನಿರ್ದೇಶನ ನೀಡುತ್ತಿರುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ. ಇದೇ ವಿಡಿಯೋವನ್ನು ಹಲವರು ತಮ್ಮ ಟ್ವಿಟರ್ ಖಾತೆಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.
ಇದೇ ವಿಡಿಯೋವನ್ನು ಫ್ಯಾಕ್ಟ್ಚೆಕ್ ವೆಬ್ಸೈಟ್ ಬೂಮ್ ವಾಟ್ಸ್ಆ್ಯಪ್ಗೆ ಕಳುಹಿಸಲಾಗಿತ್ತು. ವಿಡಿಯೋಗೆ ಸುಲೈಮಾನಿ ಮೇಲೆ ಡ್ರೋನ್ ದಾಳಿ ಎಂಬ ಅಡಿಬರಹವನ್ನು ನೀಡಲಾಗಿತ್ತು. ಅಲ್ಲದೆ ಇದೇ ವಿಡಿಯೋ ಫೇಸ್ಬುಕ್ ಮತ್ತು ಟ್ವಿಟರ್ನಲ್ಲಿ ಹರಿದಾಡಿರುವುದು ಬೂಮ್ ಗಮನಕ್ಕೆ ಬಂದ ತಕ್ಷಣ ಎಷ್ಟು ಸತ್ಯವೆಂದು ತಿಳಿಯಲು ಫ್ಯಾಕ್ಟ್ಚೆಕ್ ನಡೆಸಿದಾಗ ಅಸಲಿಯತ್ತು ಬಯಲಾಗಿದೆ.
ಗೂಗಲ್ ರಿವರ್ಸ್ ಇಮೇಜ್ನಲ್ಲಿ ನೋಡಿದಾಗ ಬೈಟ್ ಕನ್ವೇಯರ್ ಸ್ಟುಡಿಯೋ ಯೂಟ್ಯೂಬ್ನಲ್ಲಿ ಈ ಸಂಬಂಧ ವಿಡಿಯೋ ಅಪ್ಲೋಡ್ ಆಗಿರುವುದು ಗಮನಕ್ಕೆ ಬಂತು. ಈ ವಿಡಿಯೋವನ್ನು 2015 ಮೇ 25ರಂದು ಅಪ್ಲೋಡ್ ಮಾಡಲಾಗಿದ್ದು, ಸುಲೈಮಾನ್ ಹತ್ಯೆಗೂ 4 ನಾಲ್ಕು ವರ್ಷ ಹಳೆಯದಾಗಿದೆ. ಇದೊಂದು ಗೇಮ್ ದೃಷ್ಟಿಯಿಂದ ಮಾಡಿರುವ ವಿಡಿಯೋ ಆಗಿದೆ. ಗೇಮ್ ಬಗ್ಗೆ ತಿಳಿಸಲು ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಅಲ್ಲದೆ, ಇನ್ನು ಕಾರ್ಯರೂಪದಲ್ಲಿದೆ. ಎಲ್ಲ ವಿಷಯಗಳು ಬದಲಾಗಲಿದೆ ಎಂದು ವಿಡಿಯೋ ಕಂಟೆಂಟ್ನಲ್ಲಿ ಬರೆಯಲಾಗಿತ್ತು.
ಈ ಹಿಂದೆ ರಷ್ಯಾ ರಕ್ಷಣಾ ಪಡೆ ಮಾಡಿದ ದೊಡ್ಡ ಪ್ರಮಾದಿಂದಲೂ ಈ ವಿಡಿಯೋ ಬೆಳಕಿಗೆ ಬಂದಿತ್ತು. ಅಮೆರಿಕವು ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ಗೆ ಬೆಂಬಲ ನೀಡುತ್ತಿದೆ ಎಂದು ಹೇಳಿ ವಿಡಿಯೋವನ್ನು ಸಾಕ್ಷಿಯನ್ನಾಗಿ ಶೇರ್ ಮಾಡಿ 2017ರಲ್ಲಿ ರಷ್ಯಾ ಮುಖಭಂಗ ಅನುಭವಿಸಿತ್ತು. ಹೀಗಾಗಿ ಸುಲೆಮಾನ್ ಹತ್ಯೆ ಹೆಸರಿನಲ್ಲಿ ಓಡಾಡುತ್ತಿರುವ ವಿಡಿಯೋ ನಕಲಿಯಾಗಿದೆ ಎಂದು ಫ್ಯಾಕ್ಟ್ಚೆಕ್ನಲ್ಲಿ ತಿಳಿದುಬಂದಿದೆ.
ಅಂದಹಾಗೆ ಇರಾನ್ನ ಬಾಗ್ದಾದ್ ಏರ್ಪೋರ್ಟ್ನಲ್ಲಿ ಕಳೆದ ಶುಕ್ರವಾರ ಅಮೆರಿಕ ಸೇನಾ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ನ ಪ್ರಮುಖ ಕ್ಯೂಡ್ಸ್ ಪೋರ್ಸ್ನ ಮುಖ್ಯಸ್ಥ ಜನರಲ್ ಕಾಸಿಂ ಸುಲೆಮಾನ್ ಹತ್ಯೆಯಾಗಿದ್ದಾರೆ. ಇದರ ಬೆನ್ನಲ್ಲೇ ಬೆನ್ನಲ್ಲೇ ಇರಾನ್ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅಮೆರಿಕಗೆ ಪ್ರತೀಕಾರದ ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆಯು ಜಗತ್ತನ್ನು ಆತಂಕಕ್ಕೆ ದೂಡಿದ್ದು, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕದನ ಭೀತಿ ಶುರುವಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ತಿಕ್ಕಾಟ ಭಾರತದ ಮೇಲೂ ಪರಿಣಾಮ ಬೀರಿದೆ. ಈಗಾಗಲೇ ಇರಾನ್ನಿಂದ ಅಮೆರಿಕ ಸೇನೆಯನ್ನು ಗುರಿಯಾಗಿರಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ. (ಏಜೆನ್ಸೀಸ್)