ಶ್ರೀನಗರ: "2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 300 ಸೀಟುಗಳನ್ನು ಗೆಲ್ಲಬೇಕು ಎಂದು ಪ್ರಾರ್ಥನೆ ಮಾಡುತ್ತೇನೆ. ಆದರೆ, ಅದು ಸಾಧ್ಯವಾಗುವಂತೆ ಕಾಣುವುದಿಲ್ಲ" ಎಂದು ಜಮ್ಮು ಕಾಶ್ಮೀರದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ. ಬುಧವಾರದಂದು ಕಾಶ್ಮೀರದ ಗಡಿ ಜಿಲ್ಲೆ ಪೂಂಚ್ನಲ್ಲಿ ನಡೆದ ಪಕ್ಷದ ಸಭೆಯೊಂದರಲ್ಲಿ ಭಾಷಣ ಮಾಡುತ್ತಾ ಅವರು ಈ ಮಾತು ಹೇಳಿದ್ದಾರೆ.
ಕಾಂಗ್ರೆಸ್ನಲ್ಲಿ ಸಂಘಟನಾತ್ಮಕ ಬದಲಾವಣೆಗಳಾಗುವವರೆಗೆ ಅದರ ಭವಿಷ್ಯ ಸುಧಾರಿಸುವುದಿಲ್ಲ ಎಂದು ಹೇಳುತ್ತಾ ಬಂದಿರುವ ಜಿ-23 ನಾಯಕರಲ್ಲಿ ಆಜಾದ್ ಕೂಡ ಒಬ್ಬರು. ಬಿಜೆಪಿ ಸರ್ಕಾರ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವುದು ಪೂಂಚ್ ಪ್ರದೇಶದಲ್ಲಿ ಪ್ರಮುಖ ರಾಜಕೀಯ ವಿಚಾರವಾಗಿದೆ. ಆದರೆ, ತಾವು ಈ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ ಎಂದು ಆಜಾದ್ ವಿವರಿಸಿದರು.
"ಚಂದ್ರನನ್ನು, ನಕ್ಷತ್ರಗಳನ್ನು ತಂದುಕೊಡುತ್ತೇನೆ ಅಂತ ಹೇಳೋಕಾಗುತ್ತಾ? ಏಕೆಂದರೆ ಅದು ನನ್ನ ಕೈಯಲ್ಲಾಗುವ ಕೆಲಸವಲ್ಲ. ಅದೇ ಕಾರಣಕ್ಕೆ ಆರ್ಟಿಕಲ್ 370 ಅನ್ನು ವಾಪಸ್ ತರುವ ಬಗ್ಗೆ ನಾನು ಮಾತಾಡೋಲ್ಲ. ಇದನ್ನು ಕೇಂದ್ರ ಸರ್ಕಾರ ಮಾಡಬೇಕು ಇಲ್ಲ ಸುಪ್ರೀಂ ಕೋರ್ಟ್ ಮಾಡಬೇಕು. ಕೇಂದ್ರದಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಿದರೆ ಅದು ಸಾಧ್ಯವಾಗಬಹುದು. ಆದರೆ, ನಾವು(ಕಾಂಗ್ರೆಸ್) 300 ಸಂಸದರನ್ನು ಗೆಲ್ಲಿಸಬಲ್ಲೆವು ಎಂದು ಹೇಳೋಕಾಗುತ್ತಾ? ನಾನದನ್ನು ಅಪೇಕ್ಷಿಸುತ್ತೇನೆ. ಆದರೆ ಅದು ಸಾಧ್ಯವೆನಿಸುತ್ತಿಲ್ಲ" ಎಂದು ಆಜಾದ್ ಹೇಳಿದರು. (ಏಜೆನ್ಸೀಸ್)