ನ್ಯೂಸ್

VIDEO: ವೈರಲ್ ಆಗ್ತಿದೆ ಬೆಳಗಾವಿಯ "Click" ಮನೆ !

ಬೆಂಗಳೂರು: ಬೆಳಗಾವಿಯ "Click" ಎಂಬ ಹೆಸರಿನ ಮನೆ ವೈರಲ್ ಆಗ್ತಿದೆ. ಸಾಮಾಜಿಕ ತಾಣದಲ್ಲಿ ಈಗ ಕ್ಲಿಕ್​ನದ್ದೇ ಸದ್ದು. ವಿರಳ ಆಕಾರದ ಮನೆಯಾದ ಕಾರಣ ಬಹುಬೇಗ ಜಗತ್ತಿನ ಗಮನಸೆಳೆದಿದೆ ಈ ಮನೆ. ಇದು ಕ್ಯಾಮೆರಾ ಆಕಾರದಲ್ಲಿದೆ. ಅಂದ ಹಾಗೆ ಮನೆಯ ಮಾಲೀಕ ಫೋಟೋಗ್ರಾಫರ್​!

ಬೆಳಗಾವಿಯ ಶಾಸ್ತ್ರಿನಗರದಲ್ಲಿರುವ ರವಿ ಮತ್ತು ಕೃಪಾ ಹೊಂಗಲ್ ಅವರ ಮೂರು ಮಹಡಿಯ ಮನೆ ಇದು. ರವಿ ಹೊಂಗಲ್​ ವೃತ್ತಿಪರ ಫೋಟೋಗ್ರಾಫರ್​. ಫೋಟೋಗ್ರಫಿಯನ್ನೇ ಉಸಿರನ್ನಾಗಿಸಿಕೊಂಡ ಅವರಿಗೆ ಮೂವರು ಮಕ್ಕಳು. ಅವರ ಹೆಸರು 'Canon', 'Epson', 'Nikon' ! ಕನ್​ಫ್ಯೂಸ್ ಆಗಬೇಡಿ. ಕ್ಯಾಮೆರಾ ಕಂಪನಿಗಳ ಹೆಸರುಗಳಲ್ಲ. ಅವರ ಮಕ್ಕಳಿಗೆ ಇಟ್ಟಿರುವ ಹೆಸರು. ಫೋಟೋಗ್ರಫಿಯ ಮೇಲಿನ ಪ್ರೀತಿ ಈ ಮಟ್ಟಿಗೆ ಅವರನ್ನು ಹಾಸುಹೊಕ್ಕಿದೆ.

ಅವರು ಮನೆಯನ್ನು ಡಿಎಸ್​ಎಲ್​ಆರ್ ಕ್ಯಾಮೆರಾ ರೂಪದಲ್ಲಿ ಕಟ್ಟಿಸಿದ್ದಾರೆ. ಅಷ್ಟೇ ಅಲ್ಲ, ಅದಕ್ಕೆ ಅಳವಡಿಸಿರುವ ಗಾಜಿನ ಕಿಟಕಿ ವ್ಯೂಫೈಂಡರ್ ನಂತೆ ಇದೆ. ಇನ್ನೊಂದು ಲೆನ್ಸ್​ ಆಕಾರದಲ್ಲಿದೆ. ಫಿಲಂ ಸ್ಟ್ರಿಪ್​ ಕೂಡಾ ಇದ್ದು, ಒಂದು ಫ್ಲ್ಯಾಷ್ ಲೈಟ್​, ಮೆಮೋರಿ ಕಾರ್ಡ್​ ರೂಪವೂ ಇದೆ.

ಈ ಮನೆಯೊಂದಿಗೆ ನನ್ನ ಕನಸು ನನಸಾಗಿದೆ. 1986ರಿಂದ ನಾನು ಫೋಟೋಗ್ರಫಿ ಮಾಡ್ತಾ ಇದ್ದೇನೆ. ನನಗೆ ಕ್ಯಾಮೆರಾ ಅಂದ್ರೂ ಹುಚ್ಚು. ಹೀಗಾಗಿ ಮನೆ, ಮಕ್ಕಳಿಗೆ ಎಲ್ಲರಿಗೂ ಕ್ಯಾಮೆರಾ ಕಂಪನಿಗಳ ಹೆಸರನ್ನೇ ಇಟ್ಟೆ. ನಮ್ಮ ಮನೆಯವರೆಲ್ಲ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದಾಗ್ಯೂ ನನ್ನ ನಿರ್ಧಾರ ಬದಲಿಸಲಿಲ್ಲ ಎಂದು ರವಿ ಎಎನ್​ಐಗೆ ತಿಳಿಸಿದ್ದಾರೆ.

"ನನ್ನ ಪತಿ ಫೋಟೋಗ್ರಾಫರ್​. ಕ್ಯಾಮೆರಾ ಮಾದರಿಯಲ್ಲಿ ಮನೆ ನಿರ್ಮಿಸಬೇಕು ಎಂಬುದು ನಮ್ಮ ಕನಸಾಗಿತ್ತು. ನಾವು ಅದರಂತೆ ಮನೆ ಕಟ್ಟಿಸಿಕೊಂಡಿದ್ದೇವೆ. ಅದರೊಳಗೆ ಇದ್ದರೆ ಬೇರೆಯೇ ಪ್ರಪಂಚದಲ್ಲಿ ಇರುವಂತೆ ಭಾಸವಾಗುತ್ತದೆ. ನನ್ನ ಪತಿಯ ಬಗ್ಗೆ ಹೆಮ್ಮೆ ಇದೆ ಎಂದು ಕೃಪಾ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)