ನ್ಯೂಸ್

ಮೂರು ವಿಧಾನಸಭಾ ಕ್ಷೇತ್ರಗಳ ಗೆಲುವು ನಿಶ್ಚಿತ: ಬಿ.ವೈ.ವಿಜಯೇಂದ್ರ ವಿಶ್ವಾಸ

ಬೆಂಗಳೂರು: ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು  ಈ ಚುನಾವಣೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಮೂರು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದ್ದು, ಅವುಗಳ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಲಹೆ ನೀಡಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯ ಒಬಿಸಿ ಮೋರ್ಚಾ ವತಿಯಿಂದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ವಾಲ್ಮೀಕಿ ನಿಗಮದ 187 ಕೋಟಿ ರೂ ದುರ್ಬಳಕೆ, ಮುಡಾದ 5000 ಕೋಟಿ ರೂ.ಗಳ ಹಗರಣವು ರಾಜ್ಯ ಸರ್ಕಾರದ ನಿಜಬಣ್ಣ ಬಯಲು ಮಾಡಿದೆ ಎಂದರು.

ಮುಡಾದ 14 ಸೈಟುಗಳನ್ನು ವಾಪಸ್ ನೀಡಿ ತಪ್ಪಿತಸ್ಥರೆಂದು ರುಜುವಾತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಒಂದೂವರೆ ವರ್ಷದಲ್ಲಿ ಸರ್ಕಾರ ಹಗರಣಗಳಲ್ಲಿ ಮುಳುಗಿ ಹೋಗಿದೆ, ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ರಾಜ್ಯದ ಯಾವ ಮೂಲೆಯಲ್ಲಿಯೂ ನಡೆಯುತ್ತಿಲ್ಲವೆಂದು ಹೇಳಿದರು. ರಾಜಿನಾಮೆ ನೀಡದೆ ತಿರುಗಾಡುತ್ತಿರುವ ಮುಖ್ಯಮಂತ್ರಿಗಳ ನಡೆಯ ಕುರಿತು ರಾಜ್ಯದ ಜನ ಹಾದಿ ಬೀದಿಗಳಲ್ಲಿ ಮಾತನಾಡುತ್ತಿದ್ದಾರೆ ಎಂದರು.

ಇತಿಹಾಸ ಸೃಷ್ಟಿಸಬೇಕು

ಸಂಡೂರಿನಲ್ಲಿ ಇಲ್ಲಿಯ ತನಕ ಬಿಜೆಪಿ ಗೆದ್ದಿಲ್ಲ, ಆದರೆ ಈ ಬಾರಿ ಸಂಡೂರು ಕ್ಷೇತ್ರವನ್ನು ಬಿಜೆಪಿ ಗೆಲ್ಲುವ ಎಲ್ಲಾ ರೀತಿಯ ಅನುಕೂಲಕರ ವಾತಾವರಣ ಸೃಷ್ಟಿಯಾಗಿದ್ದು, ಗೆಲ್ಲುವ ಎಲ್ಲಾ ಸಾಧ್ಯತೆಗಳಿವೆ. ಹಾಗಾಗಿ ಈ ಕ್ಷೇತ್ರದಲ್ಲಿ ನಾವು ಹೆಚ್ಚು ಕೆಲಸ ಮಾಡಿ ಹೊಸ ಇತಿಹಾಸ ಸೃಷ್ಟಿಸಬೇಕಿದೆ. ಈ ವಿಧಾನಸಭಾ ಕ್ಷೇತ್ರವು ಎಸ್‍ಟಿ ಮೀಸಲು ಕ್ಷೇತ್ರವಾಗಿದ್ದು ನಮಗೆ ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದರು.

ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಅಲೆ ಇದ್ದು, ಇಂತಹ ಸಂದರ್ಭವನ್ನು ನಾವು ಸೂಕ್ಷ್ಮತೆಯಿಂದ ಅರಿತು ಚುನಾವಣೆ ಗೆಲ್ಲಬೇಕಿದೆ ಎಂದು ಎಲ್ಲರಿಗೂ ಹುರಿದುಂಬಿಸಿ ನೂತನವಾಗಿ ರಚನೆಯಾದ ತಂಡಗಳಿಗೆ ತಾಕೀತು ಮಾಡಿದರು. ಸಂದೂರಿನಲ್ಲಿ ಒಬಿಸಿ ಮತಗಳು ಎರಡನೇ ಹೆಚ್ಚಿನ ಸಂಖ್ಯೆಯಲ್ಲಿದೆ.

ಎಲ್ಲ ಒಬಿಸಿ ಸಮುದಾಯಗಳನ್ನು, ಅವುಗಳ ಮುಖಂಡರನ್ನು ಭೇಟಿ ಮಾಡಿ, ಸಭೆಗಳನ್ನು ನಡೆಸಿ, ಈ ರಾಜ್ಯಕ್ಕೆ, ದೇಶಕ್ಕೆ ಬಿಜೆಪಿ ನೀಡಿರುವ ಕೊಡುಗೆಗಳು, ಯೋಜನೆಗಳು ಕುರಿತು ಮತದಾರರಲ್ಲಿ ಅರಿವು ಮೂಡಿಸಬೇಕೆಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರಕ್ಕೆ ತರಾಟೆ

ಕೇಂದ್ರದ ನರೇಂದ್ರ ಮೋದಿಯವರ ಯೋಜನೆಗಳು ಮನೆಮನೆ ತಲುಪುತ್ತಿವೆ ಆದರೆ ಕಾಂಗ್ರೆಸ್ ಗ್ಯಾರೆಂಟಿಗಳು ರಾಜ್ಯದಲ್ಲಿ ನೆಲ ಕಚ್ಚಿವೆ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಚನ್ನಪಟ್ಟಣ ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ನಿಶ್ಚಿತವಾಗಿದ್ದು, ಸಂದೂರಿನಲ್ಲಿ ಈ ಬಾರಿ ಇತಿಹಾಸ ಸೃಷ್ಟಿ ಮಾಡಲಿದ್ದೇವೆ ಎಂದ ಬಿ.ವೈ.ವಿಜಯೇಂದ್ರ ಎಲ್ಲರಲ್ಲೂ ಭರವಸೆ ಮೂಡಿಸಿದರು.

ಮುಂಬರುವ ಸಂಡೂರು, ಚನ್ನಪಟ್ಟಣ ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ತಯಾರಿಯ ಕುರಿತಾಗಿ ಎಲ್ಲಾ ರೂಪು ರೇಷೆಗಳನ್ನು ಚರ್ಚಿಸಿ ವಿವಿಧ ಒಬಿಸಿ ಸಮುದಾಯಗಳಿಗೆ ಸೇರಿದ ರಾಜ್ಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ತಂಡಗಳನ್ನು ರಚನೆ ಮಾಡಲಾಯಿತು. ಆನಂತರ ಬಿಜೆಪಿ ಸದಸ್ಯತ್ವ ಅಭಿಯಾನದ ಜಿಲ್ಲಾವಾರು ವರದಿ ತೆಗೆದುಕೊಳ್ಳಲಾಯಿತು.

ಒಬಿಸಿ ಮೋರ್ಚಾದ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಅಧ್ಯಕ್ಷತೆ ವಹಿಸಿದ್ದರು. ಮೋರ್ಚಾ ಪದಾಧಿಕಾರಿಗಳಾದ ಶರಣು ತಳ್ಳಿಕೇರಿ, ಸೋಮಶೇಖರ್, ಅವ್ವನ್ನ ಮ್ಯಾಕೇರಿ, ಅಯ್ಯಾಳಿ ತಿಮ್ಮಪ್ಪ, ಗೋವಿಂದರಾಜು, ಅಶ್ವಿನಿ ಶಂಕರ್ ವೇದಿಕೆಯಲ್ಲಿದ್ದರು.