ನ್ಯೂಸ್

ಉಪರಾಷ್ಟ್ರಪತಿ ಚುನಾವಣೆಗೆ INDIA ಕೂಟದಿಂದ ಸುದರ್ಶನ ರೆಡ್ಡಿ ಕಣಕ್ಕೆ! ಯಾರಿವರು? ರಾಜಕೀಯ ಹಿನ್ನೆಲೆ ಏನು? | Vice Presidential Polls

Vice Presidential Polls: ಇತ್ತೀಚೆಗಷ್ಟೇ ಉಪರಾಷ್ಟ್ರಪತಿ ಚುನಾವಣೆಗೆ ಮಹಾರಾಷ್ಟ್ರ ರಾಜ್ಯಪಾಲರಾದ ಪಿಸಿ ರಾಧಾಕೃಷ್ಣನ್​ರನ್ನು ಬಿಜೆಪಿ, ಎನ್​ಡಿಎ ಅಭ್ಯರ್ಥಿಯಾಗಿ ಘೋಷಿಸಿತು. ಇದೀಗ ಅದರ ಬೆನ್ನಲ್ಲೇ, ಇಂಡಿಯಾ ಮೈತ್ರಿಕೂಟವು ತನ್ನ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಿದೆ. ಈ ನಿಟ್ಟಿನಲ್ಲಿ, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಅವರ ಹೆಸರನ್ನು ತಮ್ಮ ಪಕ್ಷದ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಿದೆ.

ಇಂದು ಬೆಳಗ್ಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಮೈತ್ರಿಕೂಟದ ಸಂಸದೀಯ ಸದನ ನಾಯಕರ ಸಭೆ ನಡೆಯಿತು. ಈ ಸಭೆಯ ಬಳಿಕ ಉಪರಾಷ್ಟ್ರಪತಿ ಚುನಾವಣೆಗೆ ಕೂಟದ ಅಭ್ಯರ್ಥಿಯಾಗಿ ಸುಂದರ್‌ಶನ್ ರೆಡ್ಡಿ ಅವರ ಹೆಸರನ್ನು ಪಕ್ಷವು ಅಂತಿಮಗೊಳಿಸಿತು. ಈ ಚುನಾವಣೆಗೆ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಪಿಸಿ ರಾಧಾಕೃಷ್ಣನ್ ಕಣಕ್ಕೆ ಇಳಿದಿದ್ದಾರೆ ಎಂಬ ವಿಷಯ ಈಗಾಗಲೇ ಹಲವರಿಗೆ ತಿಳಿದಿದೆ.

ಯಾರಿವರು? ಇವರ ಹಿನ್ನೆಲೆ ಏನು?

ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಅವರು ಜುಲೈ 8, 1946ರಂದು ಅಂದಿನ ಸಂಯುಕ್ತ ಆಂಧ್ರಪ್ರದೇಶ ರಾಜ್ಯದ, ಇಂದಿನ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಕುಲಾ ಮೈಲಾರಾಮ್ ಗ್ರಾಮದಲ್ಲಿ ಜನಿಸಿದರು. ಮೂಲತಃ ಕೃಷಿ ಕುಟುಂಬದಲ್ಲಿ ಜನಿಸಿದ ಇವರು, ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದರು. ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದ ನಂತರ, 1971ರಲ್ಲಿ ಆಂಧ್ರಪ್ರದೇಶ ಬಾರ್ ಕೌನ್ಸಿಲ್‌ನ ವಕೀಲರಾಗಿ ಸೇರ್ಪಡೆಗೊಂಡರು.

ಕೆ. ಪ್ರತಾಪ್ ರೆಡ್ಡಿ ಅವರ ಅಡಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಸುದರ್ಶನ ರೆಡ್ಡಿ, ಸಾಂವಿಧಾನಿಕ, ನಾಗರಿಕ ಮತ್ತು ಕಂದಾಯ ಕಾನೂನುಗಳಲ್ಲಿ ಪರಿಣತಿಯನ್ನು ಪಡೆದರು. 1995ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಮತ್ತು 2005ರಲ್ಲಿ ಗುವಾಹಟಿ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. 2007ರಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡರು. 2011ರಲ್ಲಿ ನಿವೃತ್ತಿ ಹೊಂದಿದರು.

ನಿವೃತ್ತಿ ನಂತರ....

ನಿವೃತ್ತಿಯ ನಂತರ, ಅವರು ಗೋವಾ ಲೋಕಾಯುಕ್ತರಾಗಿ ಮತ್ತು ಕರ್ನಾಟಕ ಗಣಿಗಾರಿಕೆ ಪರಿಸರ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ತಮ್ಮ ಅಧಿಕಾರಾವಧಿಯಲ್ಲಿ, ಅವರು ಸಂವಿಧಾನ, ಮಾನವ ಹಕ್ಕುಗಳು ಮತ್ತು ಕಪ್ಪು ಹಣದ ಪ್ರಕರಣಗಳ ಕುರಿತು ಪ್ರಮುಖ ತೀರ್ಪುಗಳನ್ನು ನೀಡಿದ್ದಾರೆ,(ಏಜೆನ್ಸೀಸ್).