ನ್ಯೂಸ್

ಉಪರಾಷ್ಟ್ರಪತಿ ಚುನಾವಣೆ; ಸಿ.ಪಿ.ರಾಧಕೃಷ್ಣನ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡುವಂತೆ ಪ್ರಧಾನಿ ಮನವಿ| PM Modi

PM Modi: ಮುಂದಿನ ತಿಂಗಳು ನಡೆಯುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿ ರಾಜ್ಯಪಾಲ ಸಿ.ಪಿ.ರಾಧಕೃಷ್ಣನ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡುವಂತೆ ತಮ್ಮ ಮಿತ್ರ ಪಕ್ಷಗಳು ಮತ್ತು ವಿರೋಧ ಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.

ಇಂದು (ಆಗಸ್ಟ್ 19) ನಡೆದ ಎನ್​ಡಿಎ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, ಸಂಸದರಿಗೆ ಸಿ.ಪಿ.ರಾಧಕೃಷ್ಣನ್ ಅವರನ್ನು ಪರಿಚಯಿಸಿ, ಅವರ ಸಾರ್ವಜನಿಕ ಸೇವೆಯನ್ನು ಶ್ಲಾಘಿಸಿದರು. ಇದೇ ಸಿಂಧೂ ನದಿ ನೀರಿನ ಒಪ್ಪಂದ ಕುರಿತು ಪ್ರಸ್ತಾಪಿಸಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರನ್ನು ಟೀಕಿಸಿದರು. ಸಂಸತ್ತು ಮತ್ತು ಸಚಿವ ಸಂಪುಟವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ದೇಶದ ಹಿತಾಸಕ್ತಿ ಬಲಿಕೊಟ್ಟು, ಪಾಕ್​ ಜೊತೆ ಒಪ್ಪಂದ ಮಾಡಿಕೊಂಡರು. ಇದರಿಂದ ತಮ್ಮ ಇಮೇಜ್​ಗೆ ಹಾನಿ ಮಾಡಿಕೊಂಡರು ಎಂದರು.

ಒಪ್ಪಂದದಲ್ಲಿ ಶೇ.80 ರಷ್ಟು ನೀರನ್ನು ಪಾಕಿಸ್ತಾನ ಬಳಸಲು ಅನುಮತಿಸಲಾಗಿದೆ. ಇಂತಹ ಒಪ್ಪಂದವನ್ನು ಪಹಲ್ಗಾಮ್ ದಾಳಿ ಬಳಿಕ ನಮ್ಮ ಸರ್ಕಾರ ರದ್ದುಪಡಿಸಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಎಸ್ & ಪಿ ಗ್ಲೋಬಲ್ ರೇಟಿಂಗ್ಸ್ ಇತ್ತೀಚೆಗೆ ಭಾರತದ ದೀರ್ಘಕಾಲೀನ ಸಾರ್ವಭೌಮ ಕ್ರೆಡಿಟ್ ರೇಟಿಂಗ್ ಅನ್ನು ಮೇಲ್ದರ್ಜೆಗೇರಿಸುವ ನಿರ್ಧಾರದ ಬಗ್ಗೆಯೂ ಮಾತನಾಡಿದರು. ಇದು ದೇಶದ ಉತ್ತಮ ಆರ್ಥಿಕತೆಯನ್ನು ಎತ್ತಿ ತೋರಿಸುತ್ತದೆ ಮತ್ತು ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸುತ್ತದೆ ಎಂದು ಹೇಳಿದರು.

ಬಿಜೆಪಿ ನೇತೃತ್ವದ ಎನ್‌ಡಿಎ ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರನ್ನು ಒಳಗೊಂಡ ಚುನಾವಣಾ ಪ್ರಕ್ರಿಯೆಯಲ್ಲಿ ಆರಾಮದಾಯಕ ಬಹುಮತವನ್ನು ಹೊಂದಿದೆ ಎನ್ನಲಾಗಿದೆ. ವಿರೋಧ ಪಕ್ಷವಾದ ಇಂಡಿಯಾ ಮೈತ್ರಿಕೂಟ ತನ್ನದೇ ಆದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಸ್ಪರ್ಧೆಯೊಡ್ಡಲು ಬಯಸುತ್ತಿದೆ. ರಾಧಾಕೃಷ್ಣನ್ ನಾಳೆ(ಆಗಸ್ಟ್ 20) ಬುಧವಾರ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.(ಏಜೆನ್ಸೀಸ್)