ನ್ಯೂಸ್

ಮೋದಿಯನ್ನು ಗಾಂಧೀಜಿಯವರಿಗೆ ಹೋಲಿಸಿದ ಉಪರಾಷ್ಟ್ರಪತಿ ಜಗದೀಪ್ ಧನಕರ್; ಕೆರಳಿದ ವಿರೋಧ ಪಕ್ಷಗಳು

ನವದೆಹಲಿ: ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಪ್ರಧಾನಿ ಮೋದಿ ಅವರನ್ನು ಮಹಾತ್ಮ ಗಾಂಧಿ ಅವರಿಗೆ ಹೋಲಿಸಿದ್ದಕ್ಕೆ ಪ್ರತಿಪಕ್ಷಗಳು ಪ್ರಶ್ನೆಗಳನ್ನು ಎತ್ತಿದ್ದು, ಟೀಕೆ ಮಾಡಿವೆ. ಜಗದೀಪ್ ಅವರು ಸೋಮವಾರ ಮಹಾರಾಷ್ಟ್ರದ ಮುಂಬೈನಲ್ಲಿರುವ ಒಪೇರಾ ಹೌಸ್‌ಗೆ ಶ್ರೀಮದ್ ರಾಜಚಂದ್ರ ಅವರ ಜನ್ಮ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಆಗಮಿಸಿದ್ದರು.

ಈ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆಯ ಮೂಲಕ ಬ್ರಿಟಿಷರ ದಾಸ್ಯದಿಂದ ನಮ್ಮನ್ನು ಮುಕ್ತಗೊಳಿಸಿದ್ದಾರೆ. ನಾವು ಯಾವಾಗಲೂ ನೋಡಬಯಸುವ ಪ್ರಗತಿಯ ಪಥದಲ್ಲಿ ಪ್ರಧಾನಿ ಮೋದಿ ನಮ್ಮನ್ನು ಮುನ್ನಡೆಸಿದರು. ಮಹಾತ್ಮ ಗಾಂಧಿ ಮತ್ತು ಪಿಎಂ ಮೋದಿ ಇಬ್ಬರೂ ಶ್ರೀಮದ್ ರಾಜಚಂದ್ರಜಿಯವರ ಬೋಧನೆಗಳನ್ನು ಪ್ರತಿಬಿಂಬಿಸಿದ್ದಾರೆ ಎಂದು ಉಪರಾಷ್ಟ್ರಪತಿಗಳು ಹೇಳಿದರು.  

ಆದರೆ, ಉಪರಾಷ್ಟ್ರಪತಿಗಳ ಈ ಹೇಳಿಕೆಗೆ ಕಾಂಗ್ರೆಸ್ ಸಂಸದ ಮಾಣಿಕ್ಕಂ ಠಾಗೋರ್ ತಿರುಗೇಟು ನೀಡಿದ್ದಾರೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ "ನೀವು ಮಹಾತ್ಮರೊಂದಿಗೆ ಹೋಲಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಸರ್, ಮುಖಸ್ತುತಿಗೆ ಒಂದು ಮಿತಿ ಇದೆ ಎಂದು ನಮಗೆಲ್ಲರಿಗೂ ತಿಳಿದಿದೆ ಮತ್ತು ನೀವು ಆ ಮಿತಿಯನ್ನು ದಾಟಿದ್ದೀರಿ'' ಎಂದು ಟ್ಯಾಗೋರ್ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ. ಬಹುಜನ ಸಮಾಜ ಪಕ್ಷದ ಸಂಸದ ಡ್ಯಾನಿಶ್ ಅಲಿ ಕೂಡ ಧಂಖರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.