ನ್ಯೂಸ್

ಮಕ್ಕಳಲ್ಲಿ ವ್ಯವಹಾರ ಜ್ಞಾನ ಬಿತ್ತಿದ ‘ವೈಬ್ರಂಟ್ ವಿದ್ಯಾಂಜಲಿ’

ಭಟ್ಕಳ: ಕಲಿಕೆಯ ಜತೆಗೆ ಶಾಲಾ ಮಕ್ಕಳಿಗೆ ವ್ಯಾವಹಾರಿಕ ಜ್ಞಾನ ಮತ್ತು ಸಂವಹನ ಕೌಶಲವನ್ನು ಬೆಳೆಸುವ ಉದ್ದೇಶದಿಂದ ಪಟ್ಟಣದ ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ವೈಬ್ರಂಟ್ ವಿದ್ಯಾಂಜಲಿ-2025 ಮಕ್ಕಳ ಸಂತೆ ಹಾಗೂ ವಿಜ್ಞಾನ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು.

ಇಷ್ಟು ದಿನ ಶಾಲೆಯ ತರಗತಿ ಕೋಣೆಯಲ್ಲಿ ವಿಷಯಗಳನ್ನು ಕಲಿತು ಪರೀಕ್ಷೆ ಎದುರಿಸುತ್ತಿದ್ದ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ವಿವಿಧ ವಸ್ತುಗಳನ್ನು ಮಾರಾಟ ಮಾಡಿ ವ್ಯಾವಹಾರಿಕ ಜ್ಞಾನವನ್ನು ಪಡೆದರು.

ಪ್ರಾಂಶುಪಾಲ ರಾಘವೇಂದ್ರ ಕಾಮತ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು, ತರಕಾರಿ, ಕಿರಾಣಿ, ಆಟಿಕೆ ಸಾಮಾನುಗಳು, ಫ್ಯಾನ್ಸಿ , ಬೇಕರಿ, ತಂಪು ಪಾನೀಯ, ವಿವಿಧ ತಿಂಡಿ ತಿನಿಸುಗಳ ಮಳಿಗೆಗಳನ್ನು ತೆರೆದಿದ್ದರು.

7ರಿಂದ 9ನೇಯ ತರಗತಿಯ ವಿದ್ಯಾರ್ಥಿನಿಯರ ಮೆಹಂದಿ ಸ್ಟಾಲಿಗೆ ಮಹಿಳೆಯರು ಸರದಿಯಲ್ಲಿ ನಿಂತು ಮೆಹಂದಿ ಹಾಕಿಸಿಕೊಂಡಿದ್ದು ವಿಶೇಷವಾಗಿತ್ತು.

ಮಕ್ಕಳ ಪಾಲಕರು, ಕ್ಯಾಂಪಸ್​ನ ಶಿಕ್ಷಕರು, ಟ್ರಸ್ಟ್​ನ ಸದಸ್ಯರು ಸಂತೆಗೆ ಆಗಮಿಸಿ ಮಕ್ಕಳಿಂದ ವಸ್ತುಗಳನ್ನು ಖರೀದಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು.

ವಿಜ್ಞಾನ ವಸ್ತುಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಸೈನ್ಯಯದಲ್ಲಿ ಬಳಸುವ ರೇಡಾರ್ ವಿನ್ಯಾಸ, ವಾಹನ ಅಪಘಾತಗಳ ತಡೆಯುವಿಕೆ, ಹೃದಯಘಾತ ತಡೆಯುವ ಉಪಾಯ, ಸ್ಮಾರ್ಟ್ ಸಿಟಿ, ದೇಹದಲ್ಲಿ ರಕ್ತ ಸಂಚಲನೆ ಸೇರಿದಂತೆ ಕಂಪ್ಯೂಟರ್​ಗೆ ಸಂಬಂಧಿಸಿದ ವಿವಿಧ ವಿಷಯದ ಮಾಹಿತಿ ನೀಡಿದರು.

ಚಿಣ್ಣರಿಗಾಗಿ ನಡೆದ ಛದ್ಮವೇಷ ಸ್ಪರ್ಧೆ ನೋಡುಗರ ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ನ ಚೇರ್ಮನ್ ಡಾ. ಸುರೇಶ ನಾಯಕ, ಟ್ರಸ್ಟಿಗಳಾದ ರಾಜೇಶ ನಾಯಕ, ರವೀಂದ್ರ ಕೊಲ್ಲೆ, ನಾಗೇಶ ಭಟ್ ಹಾಗೂ ಪಾಲಕರು ಭಾಗವಹಿಸಿದ್ದರು.