ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ 2020 ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಮತ್ತು ಜಿಲ್ಲೆಯಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಗೋ ಸಾಗಾಟ ಹಾಗೂ ಗೋಹತ್ಯೆಯನ್ನು ತಕ್ಷಣವೇ ತಡೆಗಟ್ಟಬೇಕು ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಮಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ 2020 ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಮತ್ತು ಜಿಲ್ಲೆಯಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಗೋ ಸಾಗಾಟ ಹಾಗೂ ಗೋಹತ್ಯೆಯನ್ನು ತಕ್ಷಣವೇ ತಡೆಗಟ್ಟಬೇಕು ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಹೆಚ್‌ಪಿ ಕಾರ್ಯಕಾರಿ ಸಮಿತಿ ಸದಸ್ಯ ಕಟೀಲು ದಿನೇಶ್ ಪೈ, ಕಳೆದ ಎರಡು ತಿಂಗಳುಗಳಿಂದ ಜಿಲ್ಲೆಯಲ್ಲಿ ಅಕ್ರಮ ಜಾನುವಾರು ಸಾಗಾಟ ಪ್ರಕರಣಗಳು ಹೆಚ್ಚಾಗುತ್ತಿವೆ. ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿಲ್ಲ. ಗೋಹತ್ಯೆಗೆ ಬಳಸಲಾಗುವ ಅಕ್ರಮ ಕಸಾಯಿಖಾನೆಗಳು ಹಾಗೂ ಆಸ್ತಿಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದರು.
ಮುಂಬರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚುವರಿ ಪಡೆಗಳನ್ನು ನಿಯೋಜಿಸಬೇಕು, ಆಯಕಟ್ಟಿನ ಸ್ಥಳಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಬೇಕು ಮತ್ತು ಮುಚ್ಚಿದ ಟ್ಯಾಂಕರ್ ಸೇರಿದಂತೆ ಸಂಶಯಾಸ್ಪದ ವಾಹನಗಳನ್ನು ಸೂಕ್ಷ್ಮವಾಗಿ ತಪಾಸಣೆ ನಡೆಸಬೇಕು. ಅಕ್ರಮ ಸಾಗಾಟದಲ್ಲಿ ತೊಡಗಿರುವ ವಾಹನ ಮಾಲೀಕರನ್ನು ಬಂಧಿಸಬೇಕು. ಗೋಹತ್ಯೆ ಎಂಬುದು ದೊಡ್ಡ ಜಾಲವಾಗಿದ್ದು, ನಿರಂತರವಾಗಿ ಈ ಕೃತ್ಯದಲ್ಲಿ ತೊಡಗಿರುವ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಮತ್ತು ಅವರಿಗೆ ಜಾಮೀನು ಸಿಗದಂತೆ ಕ್ರಮ ವಹಿಸಬೇಕು ಎಂದರು.
ಇದೇ ವೇಳೆ ಮಾತನಾಡಿದ ವಿಹೆಚ್‌ಪಿ ಪ್ರಾಂತ್ಯ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಮಂಗಳೂರಿನಲ್ಲಿ ಹಲವಾರು ಅಕ್ರಮ ಮಾಂಸದ ಅಂಗಡಿಗಳು ಕಾರ್ಯಾಚರಿಸುತ್ತಿದ್ದು, ಪೊಲೀಸರು ಇವುಗಳ ಮೂಲವನ್ನು ಪತ್ತೆ ಹಚ್ಚಿ ತನಿಖೆ ನಡೆಸಬೇಕು. ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧವನ್ನು ಹಿಂಪಡೆಯಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ. ಸರ್ಕಾರವು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಿದೆ. ಸರ್ಕಾರದ ಈ ನಿರ್ಧಾರದ ವಿರುದ್ಧ ಯುವಜನರು ಪ್ರತಿಭಟನೆ ನಡೆಸಬೇಕು. ಹಿಜಾಬ್‌ಗೆ ಪ್ರತಿಯಾಗಿ ಈಗಾಗಲೇ ಕೆಲವರು ಕೇಸರಿ ಶಾಲು ಧರಿಸಿ ಪ್ರತಿಭಟಿಸಲು ಮುಂದಾಗಿದ್ದು, ಅಂತವರಿಗೆ ವಿಹೆಚ್‌ಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ವಿಹೆಚ್‌ಪಿ ಸಹ ಸಂಯೋಜಕ್ ಭುಜಂಗ ಕುಲಾಲ್, ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ, ಜಿಲ್ಲಾ ಗೋರಕ್ಷಾ ಪ್ರಮುಖ್ ಹರೀಶ್ ಶೇಟ್ ಸಹಿತ ಹಲವರಿದ್ದರು.