ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಸಾಹಿತ್ಯ ಕಮ್ಮಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ. ಎನ್.ಬಿ.ಶ್ರೀಧರ ಅವರ ಪಶುವೈದ್ಯನ ಪಯಣ: ಪಶುವೈದ್ಯಕೀಯ ವೃತ್ತಿಯ ಅನುಭವಗಳು ಕೃತಿಯನ್ನು ಟಿ.ಪಿ.ಅಶೋಕ ಬಿಡುಗಡೆ ಮಾಡಿದರು. ಡಾ. ತಿರುಮಲೇಶ್, ಡಾ. ರಮಾನಂದ, ಡಾ. ಬಾಬುರತ್ನ ಇತರರಿದ್ದರು. 
ನ್ಯೂಸ್

ಪಶುವೈದ್ಯರು ಸಾಹಿತ್ಯಕ್ಕೆ ಕೊಡುಗೆ ನೀಡಿ

ಶಿವಮೊಗ್ಗ: ಪಶುವೈದ್ಯರು ಹೆಚ್ಚಿನ ಅಧ್ಯಯನ ಮಾಡಿ ಸಾಹಿತ್ಯ ಲೋಕಕ್ಕೆ ಹತ್ತಿರವಾದರೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಹುದು ಎಂದು ವಿಮರ್ಶಕ ಟಿ.ಪಿ.ಅಶೋಕ ಅಭಿಪ್ರಾಯಪಟ್ಟರು.

ಕನ್ನಡ ಪಶುವೈದ್ಯಕೀಯ ಸಾಹಿತ್ಯ ಪರಿಷತ್, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿವಿ, ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದಿಂದ ಏರ್ಪಡಿಸಿದ್ದ ಎರಡು ದಿನಗಳ ಸಾಹಿತ್ಯ ಕಮ್ಮಟ ಉದ್ಘಾಟಿಸಿ ಮಾತನಾಡಿ, ಉತ್ತಮ ಸಾಹಿತ್ಯ ರಚಿಸಲು ಇಂತಹ ಕಾರ್ಯಕ್ರಮಗಳು ಪೂರಕವಾಗುತ್ತವೆ ಎಂದು ತಿಳಿಸಿದರು.

ಕನ್ನಡ ಪಶುವೈದ್ಯಕೀಯ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಸ್.ಬಿ.ರವಿಕುಮಾರ್ ಮಾತನಾಡಿ, ಪಶುವೈದ್ಯರಿಗೆ ವೃತ್ತಿ ಜೀವನದಲ್ಲಿ ಜನ ಮತ್ತು ಪಶುಗಳ ನಿಕಟ ಸಂಪರ್ಕ ಇರುವುದರಿಂದ ಸಾಹಿತ್ಯಕ್ಕೆ ವಸ್ತುಗಳ ಲಭ್ಯತೆ ಸುಲಭ. ಹೆಚ್ಚಿನ ಪಶುವೈದ್ಯರು ಬರವಣಿಗೆಯಲ್ಲಿ ತೊಡಗಿಸಿಕೊಂಡು ವೃತ್ತಿಯ ಕುರಿತು ಜನಮಾನಸ ತಲುಪಬೇಕು ಎಂದರು.

ರಾಜ್ಯದ ವಿವಿಧ ಭಾಗಗಳ 48 ಪಶುವೈದ್ಯಾಧಿಕಾರಿಗಳು, ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಮ್ಮಟದಲ್ಲಿ 11 ವಿವಿಧ ವಿಚಾರಗೋಷ್ಠಿ ಆಯೋಜಿಸಲಾಗಿತ್ತು. ಡಾ. ಅರುಣ್ ಖರಾಟೆ ಅವರ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಗಿತ್ತು. ಡಾ. ಎನ್.ಬಿ.ಶ್ರೀಧರ ಅವರ ಪಶುವೈದ್ಯನ ಪಯಣ: ಪಶುವೈದ್ಯಕೀಯ ವೃತ್ತಿಯ ಅನುಭವಗಳು ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಭಾರ ಡೀನ್ ಡಾ. ತಿರುಮಲೇಶ್, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಬಾಬುರತ್ನ, ಪಶುವೈದ್ಯಕೀಯ ಸಾಹಿತಿ ಡಾ. ರಮಾನಂದ, ಕಾರ್ಯಕ್ರಮದ ಸಂಘಟಕ ಡಾ. ಎನ್.ಬಿ.ಶ್ರೀಧರ, ಡಾ. ಪಿ.ರವಿಕುಮಾರ್ ಇತರರಿದ್ದರು.