ಸೋಮವಾರ ಬೆಂಗಳೂರಿನಲ್ಲಿ ನಿಧನರಾದ ಕಾಂಗ್ರೆಸ್ ನಾಯಕ ಎಂ.ವಿ ರಾಜಶೇಖರನ್, ವಯಸ್ಸು 90 ಸಮೀಪಿಸಿದಾಗಲೂ ರಾಜ್ಯ ರಾಜಕಾರಣದಲ್ಲಿ ಉತ್ಸಾಹದ ಚಿಲುಮೆಯಂತಿದ್ದವರು. ಅವರ ಉತ್ಸಾಹ ಅವರದೇ ಪಕ್ಷದ ಕಿರಿಯ ನಾಯಕರನ್ನು ನಾಚಿಸುವಂತಿತ್ತು. ಸರಳತೆ, ಸಜ್ಜನಿಕೆಯ ಪ್ರತಿರೂಪದಂತಿದ್ದ ಈ ಹಿರಿಯ ಜೀವ ಒಮ್ಮೊಮ್ಮೆ ನಿಷ್ಠುರ ಅಭಿಪ್ರಾಯ ವ್ಯಕ್ತಪಡಿಸಿ, ವ್ಯವಸ್ಥೆಯ ಲೋಪದೋಷಗಳ ಬಗ್ಗೆ ಸಾತ್ವಿಕ ಸಿಟ್ಟು ತೋರ್ಪಡಿಸಿದ್ದಿದೆ. ಆದರೆ, ಬಳಸುವ ಭಾಷೆ ಎಲ್ಲೂ ಹದ್ದು ಮೀರಲಿಲ್ಲ, ತಾವೇ ಹಾಕಿಕೊಂಡ ಲಕ್ಷ್ಮಣರೇಖೆಯನ್ನು ಯಾವತ್ತೂ ದಾಟಿದವರಲ್ಲ.
ರಾಜಕೀಯದಲ್ಲಿ ಶಿಸ್ತು ಹೇಗಿರಬೇಕೆಂಬುದಕ್ಕೂ ಅವರೊಂದು ಉದಾಹರಣೆಯಾಗಿ ಕಾಣಿಸಿದ್ದಿದೆ. ಪಕ್ಷದ ಆಹ್ವಾನದ ಕಾರ್ಯಕ್ರಮಕ್ಕೆ ಚಾಚೂ ತಪ್ಪದೆ ಆಗಮಿಸುತ್ತಿದ್ದರು. ವೇದಿಕೆಯ ಮೇಲೆ ತಮ್ಮನ್ನು ಕರೆಯಬೇಕೆಂದು ಇನಿತೂ ಆಸೆಪಟ್ಟವರಲ್ಲ. ಕಿರಿಯರು ಬೆಳೆಯಬೇಕು, ಪಕ್ಷ ಮುನ್ನಡೆಯಬೇಕೆಂದು ಆಸೆ ಇಟ್ಟುಕೊಂಡವರು. ಆರೋಪ ಮಾಡುವಾಗಲೂ ಸಜ್ಜನಿಕೆ, ಶಿಸ್ತು ಮರೆತವರಲ್ಲ. ಬಾಯಿ ಚಪಲಕ್ಕೆ ಹೇಳಿಕೆ ಜಾಯಮಾನವೇ ಅವರದಲ್ಲ.
ರಾಜಕೀಯ ನಾಯಕರ ನಡುವೆ ವೃತ್ತಿ ಮಾತ್ಸರ್ಯ, ಪ್ರತಿಷ್ಠೆ ಸಾಮಾನ್ಯ. ಆದರೆ, ರಾಜಶೇಖರನ್ಗೆ ಸ್ವಪಕ್ಷದಲ್ಲಿರುವಷ್ಟೇ ಸ್ನೇಹಿತರು ವಿರೋಧಪಕ್ಷದಲ್ಲಿಯೂ ಇದ್ದರು. ಹೀಗಾಗಿಯೇ ವಿರೋಧಪಕ್ಷಗಳಲ್ಲಿನ ಅವರ ಸಮಕಾಲೀನ ನಾಯಕರು ಅತಿಯಾಗಿ ಮೆಚ್ಚಿಕೊಂಡಿದ್ದರು.
ದಲಿತ ಸಿಎಂ ಆಸೆ: ಕಾಂಗ್ರೆಸ್ನಿಂದ ದಲಿತರೊಬ್ಬರು ಮುಖ್ಯಮಂತ್ರಿ ಆಗಬೇಕೆಂದು ಪದೇಪದೆ ದನಿ ಎತ್ತಿದವರಲ್ಲಿ ರಾಜಶೇಖರನ್ ಕೂಡ ಒಬ್ಬರು. ಕೆಪಿಸಿಸಿ ಕಚೇರಿಯಲ್ಲಿ ರಾಜೀವ್ ಗಾಂಧಿಯವರ 25ನೇ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತ್ತು. ಈ ವೇಳೆ ಮಾತನಾಡಿದ್ದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದ ಜನತೆಗೆ ಸಾಕಷ್ಟು ರೀತಿಯ ಭಾಗ್ಯಗಳನ್ನು ನೀಡಿದ್ದಾರೆ. ಡಾ.ಜಿ.ಪರಮೇಶ್ವರ ಅವರಿಗೆ ತಮ್ಮ ಕುರ್ಚಿ ಬಿಟ್ಟು ಕೊಟ್ಟು ದಲಿತ ಸಿಎಂ ಭಾಗ್ಯವನ್ನು ನೀಡಲಿ’ ಎಂದು ನಿಷ್ಠುರವಾಗಿ ಹೇಳಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ನಾಯಕತ್ವಕ್ಕಾಗಿ ಗದ್ದಲವೊಂದು ನಡೆದಿತ್ತು. ಇತರ ನಾಯಕರನ್ನು, ಹಿರಿಯರನ್ನು ಕಡೆಗಣಿಸಲಾಗುತ್ತಿದೆ ಎಂಬ ಅಸಮಾಧಾನ ಸೃಷ್ಟಿಯಾಗಿತ್ತು. ಈ ವೇಳೆ ರಾಜಶೇಖರನ್, ‘ಇಂತಹ ಬೆಳವಣಿಗೆ ಸರಿಯಲ್ಲ’ ಎಂದು ಸಿದ್ದರಾಮಯ್ಯ ಅವರಿಗೆ ಬುದ್ಧಿವಾದ ಹೇಳಿದ್ದರು.
ರಾಜಶೇಖರನ್ ಅವರ ಅಗಲಿಕೆಯಿಂದ ತೀವ್ರ ದುಃಖವಾಗಿದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ವಲಯಗಳಲ್ಲಿ ಅವರ ಸೇವೆ ಗಣನೀಯ. | ವೆಂಕಯ್ಯ ನಾಯ್ಡು ಉಪ ರಾಷ್ಟ್ರಪತಿ
ಸಂಕೇಶ್ವರರ ಕಂಬನಿ
ರಾಜಕೀಯದಲ್ಲಿ ವಿಪಕ್ಷದವರೂ ಮೆಚ್ಚುವಂತಹ ವ್ಯಕ್ತಿತ್ವ ಎಂ.ವಿ. ರಾಜಶೇಖರನ್ ಅವರದು. ಅವರೆಂದೂ ವಿರೋಧ ಪಕ್ಷದವರನ್ನೂ ಧ್ವನಿ ಎತ್ತರಿಸಿ ಮಾತನಾಡಿದವರಲ್ಲ. ವಿನಯತೆ, ಸರಳತೆಯ ಸಾಕಾರ ಮೂರ್ತಿಯಂತಿದ್ದ ಅವರು ರಾಜಕಾರಣದಲ್ಲಿ ಅಜಾತಶತ್ರುವೇ ಸರಿ. ಅವರ ಅಗಲಿಕೆ ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ಕರುಣಿಸಲಿ.
ಡಾ.ವಿಜಯ ಸಂಕೇಶ್ವರ, ಚೇರ್ಮನ್
ಆನಂದ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕರು
ವಿಆರ್ಎಲ್ ಸಮೂಹ ಸಂಸ್ಥೆಗಳು
ಕೃಷಿ ಮೇಲೆ ಅಪಾರ ಪ್ರೀತಿ
1953ರಲ್ಲಿ ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದಾಗ ವಿದ್ಯಾರ್ಥಿ ಕಾಂಗ್ರೆಸ್ನ ಸದಸ್ಯರಾಗಿದ್ದರು. ಇದೇ ವೇಳೆ ತಮ್ಮ ತಂದೆಯವರ ಅಕಾಲ ಮರಣದಿಂದ ಮರಳವಾಡಿಗೆ ಮರಳಿ ವ್ಯವಸಾಯಕ್ಕೆ ಸಂಪೂರ್ಣ ಸಮಯ ಮೀಸಲಿಟ್ಟಿದ್ದರು. ವಿದೇಶದಲ್ಲೂ ಕೃಷಿ ಕುರಿತ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಪಿತ್ರಾರ್ಜಿತ ಆಸ್ತಿಯನ್ನು ಕೃಷಿ ಪ್ರಯೋಗ ಶಾಲೆ ಮಾಡಿಕೊಂಡಿದ್ದರು. ರೈತ ಬೆಳೆದ ಹಣ್ಣುಗಳನ್ನು ಸಂಗ್ರಹಿಸಲು ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ 1200 ಟನ್ನ ಶೈತ್ಯಾ ಗಾರವನ್ನು ಕೃಷಿಕ ಸಮಾಜದ ಆಶ್ರಯದಲ್ಲಿ ಸ್ಥಾಪಿಸಿದ ಕೀರ್ತಿ ಇವರದು.
ರಾಜಶೇಖರನ್ ನಿಧನದಿಂದ ನಾವು ಒಬ್ಬ ಅನುಭವಿ ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇವೆ. ಅವರ ಸೇವೆ ಸದಾ ಸ್ಮರಣೀಯ. | ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ
ನಿಜಲಿಂಗಪ್ಪನವರ ಅಳಿಯ
ಮುಖ್ಯಮಂತ್ರಿಯಾಗಿದ್ದ ಎಸ್.ನಿಜಲಿಂಗಪ್ಪ ನವರ ನಾಲ್ಕನೆಯ ಮಗಳು ಗಿರಿಜಾ ಅವರನ್ನು 1959ರಲ್ಲಿ ರಾಜಶೇಖರನ್ ವಿವಾಹವಾಗಿದ್ದರು. ಅವರ ರಾಜಕೀಯ ನಂಟು ಬಲಗೊಳ್ಳುವುದಕ್ಕೂ ಈ ಸಂಬಂಧ ಪೂರಕವಾಯಿತು. ಡಾ. ಜಿ.ಪರಮೇಶ್ವರ್ ಅವರನ್ನು ಸಿಎಂ ಸ್ಥಾನದಲ್ಲಿ ನೋಡುವ ರಾಜಶೇಖರನ್ ಅವರ ಒಂದು ಆಸೆ ಕೊನೆಗೂ ಕೈಗೂಡಲೇ ಇಲ್ಲ.
ಪತ್ನಿಯ ಆದರ್ಶವೇ ಬೆನ್ನೆಲುಬು
ನನ್ನ ಮಡದಿ ಗಿರಿಜಾ, ನಾನು ಭ್ರಷ್ಟನಾಗದಂತೆ ಅಥವಾ ಅಪಖ್ಯಾತಿ ಪಡೆಯದಂತೆ ನನ್ನನ್ನು ರಕ್ಷಿಸುತ್ತಿದ್ದಾಳೆ ಎಂದು ರಾಜಶೇಖರನ್ ಸಾರ್ವಜನಿಕವಾಗಿ ಹಲವು ಬಾರಿ ಹೇಳಿಕೊಂಡಿದ್ದುಂಟು. ಸಾಂಸಾರಿಕ ಜೀವನದಲ್ಲಿ ಆಕೆ ಎಂದೂ ನನಗೆ ಅದು ಬೇಕು, ಇದು ಬೇಕು ಎಂದು ಕೇಳಿಲ್ಲ. ತಂದೆಯ ಮನೆಯಲ್ಲಿ ಕಲಿತ ಸರಳ ಜೀವನ ಪಾಠವನ್ನು ಇಲ್ಲಿ ಅನುಸರಿಸುತ್ತಿದ್ದಾಳೆ ಎಂದು ತಮ್ಮ ಹಿಂದಿನ ಶಕ್ತಿಯನ್ನು ನೆನಪಿಸಿಕೊಂಡಿದ್ದಿದೆ.
ಮೋದಿಯನ್ನು ಹೊಗಳಿ ಇಂದಿರಾಗೆ ಹೋಲಿಸಿದ್ದರು!
ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದಲ್ಲದೆ ಅವರನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಹೋಲಿಸಿದ್ದರು ರಾಜಶೇಖರನ್. ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದಾಗ ರಾಜಶೇಖರನ್ ಮೋದಿಗೆ ಪತ್ರ ಬರೆದು ಅಭಿನಂದಿಸಿದ್ದರು. ‘ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಮೊದಲ ಬಾರಿಗೆ ಗರೀಬಿ ಹಠಾವೋ ಘೊಷಣೆ ನೀಡಿ, ಊಹಿಸಲಾರದಷ್ಟು ಜನಬೆಂಬಲ ಪಡೆದಿದ್ದರು. ನೀವೂ ದೇಶದ ಅಭಿವೃದ್ಧಿಯಲ್ಲಿ ಮಧ್ಯಮ ವರ್ಗದ ಜನರನ್ನು ಭಾಗಿಯಾಗಿಸಿಕೊಂಡಿರೋದನ್ನ ಕಾಣಬಹುದು. ನಿಮಗೆ ತಿಳಿದಿರುವಂತೆ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆಗಾಗಿ ಕ್ರಾಂತಿಗಳು ನಡೆದಾಗ, ಮಧ್ಯಮ ವರ್ಗದ ಜನ ಸರ್ಕಾರದ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದರು.
ಫಲಿಸದ ಸಂಧಾನ
ಕಾಂಗ್ರೆಸ್ ವಿಭಜನೆ (1969-70) ಸಮಯ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಸಂಧಾನಕ್ಕೆ ಅವತ್ತಿನ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಎಸ್.ನಿಜಲಿಂಗಪ್ಪ ಬಳಿಗೆ ಕಳಿಸಿದ್ದು ಎಂ.ವಿ.ರಾಜಶೇಖರನ್ರನ್ನು. ಇಂಧಿರಾ ಸಂದೇಶ ಕೇಳಿಸಿಕೊಂಡ ನಿಜಲಿಂಗಪ್ಪ, ‘ಟೆಲ್ ಹರ್, ಶಿ ಕೆನಾಟ್ ಬೈ ಮಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರಂತೆ. ರಾಜೀ ಫಲಿಸದೆ ಕಾಂಗ್ರೆಸ್ ಇಬ್ಭಾಗವಾಯಿತು. ಆಗ ಮಾವನೊಂದಿಗೆ ಗುರುತಿಸಿಕೊಂಡ ರಾಜಶೇಖರನ್, ಇಂದಿರಾ ಕಾಂಗ್ರೆಸ್ ಅಭ್ಯ ರ್ಥಿ, 1971ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಜಾಫರ್ ಷರೀಫ್ ಇವರ ಎದುರಾಳಿ.
ಕೈ ಹಿಡಿದ ಕನಕಪುರ
1967ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರಾಜಶೇಖರನ್, 50 ಸಾವಿರಕ್ಕೂ ಹೆಚ್ಚಿನ ಮತಗಳಿಂದ ಆಯ್ಕೆಯಾಗಿದ್ದರು. ಮಂಚನಬೆಲೆ ನೀರಾವರಿ ಯೋಜನೆ, ಇಗ್ಗಲೂರು, ತೊರೆಬೇಕುಪ್ಪೆ ಏತನೀರಾವರಿ ಅನುಷ್ಠಾನದಲ್ಲಿ ಅವರ ಪಾತ್ರವಿದೆ. 1978ರಲ್ಲಿ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಜನತಾಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದರು. 1999ರಲ್ಲಿ ವಿಧಾನಪರಿಷತ್ತಿನ ಸದಸ್ಯತ್ವ, 2002ರಲ್ಲಿ ರಾಜ್ಯಸಭಾ ಸದಸ್ಯತ್ವ ಸ್ಥಾನ ಅವರನ್ನು ಅರಸಿ ಬಂತು. ಭಾರತ ಸರ್ಕಾರದಲ್ಲಿ ಯೋಜನಾ ರಾಜ್ಯ ಮಂತ್ರಿಯಾಗಿ ಕರ್ತವ್ಯ ನಿರ್ವಹಿಸಿದರು.
ರಾಜಕೀಯ ಕ್ಷೇತ್ರದಲ್ಲಿ ಅಜಾತ ಶತ್ರು ಎಂದೇ ಗುರುತಿಸಿಕೊಂಡಿರುವ ರಾಜಶೇಖರನ್ ಎಲ್ಲರೊಂದಿಗೂ ಆತ್ಮೀಯ ಸಂಬಂಧ ಹೊಂದಿದ್ದರು. ಮಹಾತ್ಮ ಗಾಂಧೀಜಿಯ ಆದರ್ಶ ವಿಚಾರಧಾರೆ ಅನುಸರಿಸಿ ರಾಜ್ಯ ಮತ್ತು ಕೇಂದ್ರದಲ್ಲಿ ಜವಾಬ್ದಾರಿಯ ಸ್ಥಾನಗಳನ್ನು ಅಲಂಕರಿಸಿ ಜನಸೇವೆ ಮಾಡಿದ್ದನ್ನು ಮರೆಯಲಾಗದು. | ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು
ಸ್ವಾತಂತ್ರ್ಯ ಚಳವಳಿಯ ನಂಟು
ರಾಜಶೇಖರನ್ ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡಿದ್ದರು. ವಿದ್ಯಾರ್ಥಿ ಕಾಂಗ್ರೆಸ್ ಮೂಲಕ ಹಲವು ಚಳವಳಿಗಳಲ್ಲಿ ಪಾಲ್ಗೊಂಡಿದ್ದರು. 1947-48ರ ಮೈಸೂರು ಚಲೋ ಚಳವಳಿಯಲ್ಲಿ ಕೂಡ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಸಹಕಾರ ರಂಗದ ಸ್ಪರ್ಶ
ಸಹಕಾರಿ ಪ್ರಕಾಶನ ಆರಂಭಿಸುವ ಮೂಲಕ ಆ ಕ್ಷೇತ್ರದಲ್ಲೂ ರಾಜಶೇಖರನ್ ಕೈಯಾಡಿಸಿದ್ದರು. ಅಂದು ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ, ಶಿಕ್ಷಣ ಸಚಿವರಾಗಿದ್ದ ಕೆ.ವಿ.ಶಂಕರಗೌಡ ಮೂಲ ರೂವಾರಿಗಳು. ಸಹಕಾರಿ ಪ್ರಕಾಶನಕ್ಕೆ ವ್ಯಾಪಕವಾದ ಅರ್ಥ ಕೊಟ್ಟವರು ಅಂದಿನ ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದ ಡಾ.ದೇ.ಜವರೇಗೌಡರು. ರಾಜಶೇಖರನ್ ಟ್ರಸ್ಟಿಯಾಗಿ ಪ್ರಮುಖ ಜವಾಬ್ದಾರಿ ನಿಭಾಯಿಸಿದ್ದರು. ಜತೆಗೆ ಕನ್ನಡದಲ್ಲಿ ಶ್ರೇಷ್ಠ ದಿನಪತ್ರಿಕೆಯೊಂದನ್ನು ಪ್ರಕಟಿಸುವ ಉದ್ದೇಶ ಇತ್ತು. ಇದಕ್ಕೆ ಸಂಬಂಧಪಟ್ಟಂತೆ ಮುದ್ರಣ ಯಂತ್ರಗಳನ್ನೂ ಆಮದು ಮಾಡಿಕೊಳ್ಳಲಾಗಿತ್ತು. 1972ರ ರಾಜಕೀಯ ಬೆಳವಣಿಗೆಯ ಬದಲಾವಣೆಯಿಂದ ಆ ಸಂಸ್ಥೆ ತೆರೆಮರೆಗೆ ಸರಿಯಿತು.
ಮೌಲ್ಯಾಧಾರಿತ ರಾಜಕಾರಣ ದಿಂದಾಗಿಯೇ ಗುರುತಿಸಿಕೊಂಡಿದ್ದರು. ಅವರ ನಿಧನ ಅತ್ಯಂತ ದುಃಖದ ಸಂಗತಿ. | ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ