- ವಾದ-ವಿವಾದ ಕೇಳಲು ಕುಳಿತ ನಟಿ ತಾರಾ ಅನುರಾಧ
- ಉತ್ತರ ಚಿತ್ರದ ಟ್ರೇಲರ್ ನಲ್ಲಿ ಜಡ್ಜ್ ಆಗಿ ಮಿಂಚಿದ ನಟಿ
- ಇದೇ ಜೂನ್ 12ಕ್ಕೆ ಸಿನಿಮಾ ತೆರೆಗೆ
ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ನಿರ್ದೇಶಕ ದಿನೇಶ್ ಬಾಬು ಆ್ಯಕ್ಷನ್-ಕಟ್ ಹೇಳಿರುವ ಸಿನಿಮಾ ‘ಉತ್ತರ’. ‘ಕಸ್ತೂರಿ ಮಹಲ್’ ತೆರೆಕಂಡು ಮೂರು ವರ್ಷಗಳ ಬಳಿಕ ಅವರು ಮತ್ತೆ ಡೈರೆಕ್ಟರ್ ಕ್ಯಾಪ್ ಧರಿಸಿದ್ದು, ಈ ಹಿನ್ನೆಲೆಯಲ್ಲಿ ‘ಉತ್ತರ’ ಸಿನಿಮಾ ವಿಶೇಷತೆ ಪಡೆದುಕೊಂಡಿದೆ. ಚಿತ್ರದ ಎಲ್ಲ ಕಾರ್ಯಗಳು ಪೂರ್ಣಗೊಂಡಿದ್ದು, ಇದೇ 12ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರತಂಡವು ಟ್ರೇಲರ್ ರಿಲೀಸ್ ಮಾಡಲಾಗಿದೆ. 2.47 ನಿಮಿಷದ ಟ್ರೇಲರ್‌ನಲ್ಲಿ ಹಲವು ಸಾಮಾಜಿಕ ವಿಚಾರಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಹೆಣ್ಣೊಬ್ಬಳು ಮೈಮರೆತು ಪರಪುರುಷನ ಜತೆ ಸಂಪರ್ಕ ಹೊಂದುವುದನ್ನು ಸ್ವತಃ ಆಕೆಯೇ ಪತಿಯೇ ವಿಡಿಯೋ ಮಾಡಿ ಹಂಚುತ್ತಾನೆ. ಬಳಿಕ ನಡೆಯುವ ಸಂಘರ್ಷ ಕೋರ್ಟ್ ಮೆಟ್ಟಿಲೇರುತ್ತದೆ. ನ್ಯಾಯಲಯದಲ್ಲಿ ನಡೆಯುವ ಗಂಭೀರ ವಾದ-ವಿವಾದವೇ ‘ಉತ್ತರ’ ಟ್ರೇಲರ್‌ನ ಹೈಲೈಟ್. ಈ ಚಿತ್ರದಲ್ಲಿ ನ್ಯಾಯಾಧೀಶರಾಗಿ ಹಿರಿಯ ನಟಿ ತಾರಾ ಅನುರಾಧಾ ಕಾಣಿಸಿಕೊಂಡಿದ್ದಾರೆ. ‘ಬಿಗ್‌ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿ ಅಶ್ವಿನಿ ಗೌಡ ವಕೀಲರಾಗಿ ಪಾಟೀಸವಾಲಿಗಿಳಿದಿದ್ದಾರೆ. ನಾರಾಯಣ್ ಸ್ವಾಮಿ, ಸಂಪುತ್ರ ಆಳ್ವ ಕಲಾಬಳಗದಲ್ಲಿದ್ದಾರೆ. ನಾಗೇಶ್ವರ ರಾವ್ ಚಿತ್ರಕ್ಕೆ ಬಂಡವಾಳ ಹೂಡುವ ಜತೆಗೆ ಪ್ರಮುಖ ಪಾತ್ರದಲ್ಲಿದ್ದಾರೆ. ಮುಂದಿನ ಶುಕ್ರವಾರಕ್ಕೆ (ಜೂ.12) ಪ್ರೇಕ್ಷಕರಿಗೆ ‘ಉತ್ತರ’ ಸಿಗಲಿದೆ.
"
ಹಿರಿಯ ನಿರ್ದೇಶಕ ದಿನೇಶ್ ಬಾಬು ಹೊಸ ಕಲಾವಿದರನ್ನು ಸೇರಿಸಿಕೊಂಡು ಈ ಸಿನಿಮಾ ಮಾಡಿದ್ದಾರೆ. ಕಡಿಮೆ ಬಜೆಟ್ ಮತ್ತು ಕಡಿಮೆ ಅವಧಿಯಲ್ಲಿ ಮೂಡಿಬಂದ ಚಿತ್ರವಿದು. ಇನ್ನು ಈ ಸಿನಿಮಾ ಮೂಲಕ ನಾನು ಮೊದಲ ಬಾರಿಗೆ ನ್ಯಾಯಾಧೀಶರಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಬಗ್ಗೆ ತುಂಬಾ ಖುಷಿಯಿದೆ. ಪ್ರಸ್ತುತ ಕೌಟುಂಬಿಕ ವಿಘಟನೆಯ ಸುತ್ತ ಈ ಕಥೆ ಸುತ್ತುತ್ತದೆ. ಅದರಲ್ಲಿ ಹೆಣ್ಣೊಬ್ಬಳು ಹೇಗೆ ಸಂಕಷ್ಟಗಳನ್ನು ಎದುರಿಸುತ್ತಾಳೆ ಎಂಬುದನ್ನು ಇಲ್ಲಿ ತೋರಿಸಲಾಗಿದೆ. ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಎಷ್ಟೋ ಘಟನೆಗಳಿಗೆ ಇದು ‘ಉತ್ತರ’ವಾಗಲಿದೆ. ಕೋರ್ಟ್ ಈ ಚಿತ್ರದಲ್ಲಿ ಪ್ರಮುಖ ಪಾತ್ರವಾಗಿದ್ದು, ನಾನು ಮೂರು ದಿನಗಳಲ್ಲಿ ಶೂಟಿಂಗ್ ಮುಗಿಸಿದೆ. ಕನ್ನಡ ಚಿತ್ರರಂಗದಲ್ಲಿ ವಿಗ್ ಮೇಕರ್ ಆಗಿ ಕಾರ್ಯನಿರ್ವಹಿಸಿದ್ದ ನಾಗೇಶ್ವರ ರಾವ್ ಈ ಚಿತ್ರದ ನಿರ್ಮಾಪಕರು.
— | ತಾರಾ ಅನುರಾಧಾ, ನಟಿ,