ಬೆಂಗಳೂರು: ಹೆಚ್ಚುತ್ತಿರುವ ಕರೊನಾ ವೈರಸ್ ಸೋಂಕು ನಿಯಂತ್ರಿಸುವುದಕ್ಕಾಗಿ ರಾಜ್ಯಾದ್ಯಂತ ನಿರ್ಬಂಧಿತ ವಲಯಗಳಿಗೂ (ಕಂಟೇನ್ಮೆಂಟ್ ಜೋನ್) ಲಾಕ್ಡೌನ್ ವಿಸ್ತರಿಸಲಾಗಿದೆ. ಈಗಾಗಲೇ ಘೊಷಿಸಿರುವ ಪ್ರಕಾರ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಜು.14 ರಿಂದ ಒಂದು ವಾರ ಲಾಕ್ಡೌನ್ ಜತೆಗೆ, ಬೆಂಗಳೂರು ನಗರ ಪ್ರದೇಶ ಸೀಮಿತವಾಗಿ ಹೆಚ್ಚಿನ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಆದರೆ, ಮಾರಕ ಪಿಡುಗಿಗೆ ರಾಜ್ಯವ್ಯಾಪಿ ಲಾಕ್ಡೌನ್ ಪರಿಹಾರವಲ್ಲವೆಂಬ ನಿಲುವಿಗೆ ಅಂಟಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿ ಇದನ್ನು ದೃಢಪಡಿಸಿದರು. ಕರೊನಾ ಕಟ್ಟಿಹಾಕುವುದಕ್ಕೆ ತಳಮಟ್ಟದ ಕಾರ್ಯತಂತ್ರವೇ ಪರಿಣಾಮಕಾರಿ ಕ್ರಮವೆಂದು ಮನಗಂಡಿರುವ ಸಿಎಂ, ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುವ ಹೊಣೆಯನ್ನು ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟರು. ಈ ಸಂವಾದದಲ್ಲಿ ಬಹಳಷ್ಟು ಕಡೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಪಾಲ್ಗೊಂಡಿದ್ದರು. ಕರೊನಾ ನಿಯಂತ್ರಿಸುವ ಕ್ರಮಗಳಿಗೆ ಬಹುತೇಕ ಜಿಲ್ಲಾಧಿಕಾರಿಗಳು ಉತ್ಸಾಹ ತೋರಿಸಿ, ಲಾಕ್ಡೌನ್ಗೆ ನಿರುತ್ಸಾಹ ವ್ಯಕ್ತಪಡಿಸಿದರು. 2 ಹಂತದ ಸುದೀರ್ಘ ಸಮಾಲೋಚನೆಯಲ್ಲಿ ಸಂಗ್ರಹಿಸಿದ ಅಭಿಪ್ರಾಯ ಸಂಗ್ರಹಿಸಿ ಸಿಎಂ ಸಲಹೆಯಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಆದೇಶ ಹೊರಡಿಸಿದ್ದಾರೆ.
ಮಾರ್ಗಸೂಚಿ ಪ್ರಕಾರ ರಾಜ್ಯಾದ್ಯಂತ ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಲಾಕ್ಡೌನ್ ವಿಸ್ತರಣೆಯಾಗಿದ್ದು, ಉಳಿದೆಡೆ ನಿಷೇಧಿತ ಕಾರ್ಯಚಟುವಟಿಕೆಗಳನ್ನು ಕ್ರಮೇಣ ಪುನರಾರಂಭಿಸಲು ಅನುಮತಿ ನೀಡಲಾಗಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಜು.14ರ ರಾತ್ರಿ 8 ರಿಂದ ಜು.22ರ ಬೆಳಗ್ಗೆ 5ರವರೆಗೆ ಲಾಕ್ಡೌನ್ ಜಾರಿಯಲ್ಲಿರಲಿದ್ದರೆ, ಬೆಂಗಳೂರು ನಗರಕ್ಕೆ ಸೀಮಿತವಾಗಿ ಒಂದು ವಾರ ಕಾಲ ಬೆಳಗ್ಗೆ 5 ರಿಂದ ಮಧ್ಯಾಹ್ನ 12ರವರೆಗೆ ಮಾತ್ರ ದಿನಸಿ, ಪಡಿತರ ಅಂಗಡಿಗಳು ತೆರೆದಿರಲಿವೆ. ಇದೂ ಸೇರಿದಂತೆ ಇನ್ನೂ ಹಲವು ಕಠಿಣ ಕ್ರಮಗಳನ್ನು ವಿಧಿಸಲಾಗಿದೆ.
ಪಾಸ್ ಕಟ್ಟುನಿಟ್ಟು: ಹೊರ ಜಿಲ್ಲೆ ಅಥವಾ ರಾಜ್ಯಗಳಿಂದ ಬೆಂಗಳೂರು ಪ್ರವೇಶಿಸುವವರು ಅಥವಾ ಬೆಂಗಳೂರಿನಿಂದ ಹೊರ ಜಿಲ್ಲೆ, ರಾಜ್ಯಗಳಿಗೆ ತೆರಳುವವರು ಸೇವಾ ಸಿಂಧು ಪೋರ್ಟಲ್ ಮೂಲಕ ಪಾಸ್ ಪಡೆಯುವುದು ಕಡ್ಡಾಯವಾಗಿದೆ.
ಯಾವುದಕ್ಕೆಲ್ಲ ವಿನಾಯಿತಿ:
ಮಾರಾಟಕ್ಕೆ ಸಮಯಮಿತಿ ನಿಗದಿ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 12.00 ಗಂಟೆವರೆಗೆ ಪಡಿತರ ಅಂಗಡಿ, ದಿನಸಿ ಅಂಗಡಿಗಳೀಗೆ ಆಹಾರ, ದವಸ ಧಾನ್ಯ, ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಈ ಮುನ್ನ ದಿನ ಇಡೀ ಅವಕಾಶವಿತ್ತು. ರಾಜಧಾನಿಯಲ್ಲಿ ಮಧ್ಯಾಹ್ನ 12ರ ನಂತರ ಓಡಾಟವನ್ನು ಸಂಪೂರ್ಣ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಇಂದು ಜಿಲ್ಲೆಗಳ ನಿರ್ಧಾರ: ಸೋಂಕು ನಿಯಂತ್ರಣಕ್ಕೆ ಸಿಗದ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಗಳೇ ಲಾಕ್ಡೌನ್ ನಿರ್ಧಾರ ತೆಗೆದುಕೊಳ್ಳಬೇಕೆಂದು ಸರ್ಕಾರ ಸೂಚಿಸಿರುವುದರಿಂದ ಮಂಗಳವಾರ ಹಾಸನ, ಉಡುಪಿ, ಬೀದರ್ ಜಿಲ್ಲೆಗಳಲ್ಲಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಉಳಿದ ಜಿಲ್ಲೆಗಳಲ್ಲಿ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ಹೊರಬೀಳಲಿದೆ.
ಎಲ್ಲೆಲ್ಲಿ ದಿಗ್ಬಂಧನ?: ಬೆಂಗಳೂರು ನಗರ, ಗ್ರಾಮಾಂತರ, ದಕ್ಷಿಣ ಕನ್ನಡ, ಧಾರವಾಡ, ಕಲಬುರಗಿ, ರಾಯಚೂರು ಜಿಲ್ಲೆಯ ರಾಯಚೂರು ನಗರ ಮತ್ತು ಸಿಂಧನೂರು ಪಟ್ಟಣ, ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ, ಕಾಗವಾಡ, ಅಥಣಿ, ನಿಪ್ಪಾಣಿ ತಾಲೂಕುಗಳು, ಮೈಸೂರು ಜಿಲ್ಲೆಯಲ್ಲಿ ನರಸಿಂಹರಾಜ ಕ್ಷೇತ್ರದ ಕೆಲವು ಭಾಗಗಳನ್ನು ಮಾತ್ರ ಲಾಕ್ಡೌನ್ ಮಾಡಲಾಗುತ್ತಿದೆ.
ಟ್ರಕ್ ಓಡಾಟಕ್ಕಿಲ್ಲ ತಡೆ: ಕಂಟೈನ್ವೆುಂಟ್ ವಲಯ ಹೊರತುಪಡಿಸಿ ಉಳಿದ ಕಡೆ ಟ್ರಕ್ಗಳ ಮೂಲಕ (ಖಾಲಿ ಟ್ರಕ್ಗಳು) ಸರಕು ವಾಹನಗಳು ಸೇರಿದಂತೆ ರೈಲು ಮತ್ತು ವಿಮಾನದ ಮೂಲಕ ಎಲ್ಲ ಬಗೆಯ ಸರಕುಗಳ ಸಾಗಾಟಕ್ಕೂ ಅವಕಾಶ ನೀಡಲಾಗಿದೆ. ಅಗತ್ಯ ವಸ್ತು ಸೇವೆ ನೀಡುವ ಲಾರಿ ಓಡಾಟ ಹೊರತು ಉಳಿದವಕ್ಕೆ ಅವಕಾಶ ಇರುವುದಿಲ್ಲ.
ಸಾರ್ವಜನಿಕ ಸಾರಿಗೆಗೆ ಬ್ರೇಕ್: ಈಗಾಗಲೇ ವೇಳಾಪಟ್ಟಿ ನಿಗದಿಯಾಗಿರುವ ವಿಮಾನ ಹಾಗೂ ರೈಲುಗಳು ಲಾಕ್ಡೌನ್ ಅವಧಿಯಲ್ಲೂ ಸಂಚರಿಸಲಿವೆ. ವಿಮಾನ ಮತ್ತು ರೈಲು ಟಿಕೆಟ್ಗಳನ್ನೇ ಪ್ರಯಾಣಿಕರ ಪಾಸುಗಳೆಂದು ಪರಿಗಣಿಸಲಾಗುವುದು. ಅಲ್ಲದ ಟ್ಯಾಕ್ಸಿ ಮತ್ತು ಆಟೋ ರಿಕ್ಷಾಗಳ ಮೂಲಕ ನಿಲ್ದಾಣಕ್ಕೆ ಪ್ರಯಾಣಿಸಲು ಅನುಮತಿಸಲಾಗಿದೆ ಆದರೆ ಯಾವುದೇ ಹೊಸ ವಿಮಾನ ಮತ್ತು ರೈಲು ಸಂಚಾರಕ್ಕೆ ಅವಕಾಶವಿಲ್ಲ.
ಪೊಲೀಸರಿಗೆ ಹೊಣೆ: ಈ ಆದೇಶದ ಅನುಬಂಧದಲ್ಲಿ ನೀಡಲಾಗಿರುವ ಲಾಕ್ಡೌನ್ನ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶಿಸಿದೆ. ಅದೇ ರೀತಿ ಗೃಹ ಸಚಿವರು ಎರಡು ದಿನಗಳಿಂದ ಸಭೆಗಳನ್ನು ನಡೆಸಿ, ಕಳೆದ ಬಾರಿಯ ಲೋಪಗಳು ಮರುಕಳಿಸದಂತೆ ಸೂಚನೆ ನೀಡಿದ್ದಾರೆ.
ಕಟ್ಟಡ ನಿರ್ವಣಕ್ಕೆ ಅವಕಾಶ: ಬೆಂಗಳೂರು ಪ್ರದೇಶದ ವ್ಯಾಪ್ತಿಯೊಳಗೆ ಹೊರಗಿನಿಂದ ಕಾರ್ವಿುಕರನ್ನು ಕರೆತರದೇ ಸ್ಥಳೀಯವಾಗಿಯೇ ಇರುವ ಕಾರ್ವಿುಕರನ್ನು ಬಳಸಿಕೊಂಡು ನಿರ್ಮಾಣ ಯೋಜನೆಗಳ ಕಾಮಗಾರಿ ಮುಂದುವರಿಕೆ.