ನ್ಯೂಸ್

ಪತ್ನಿಯನ್ನು ಕೊಲೆ ಮಾಡಿದ ಪತಿ: ಹಲ್ಲೆ ನಡೆಸಿ ನೇಣಿಗೇರಿಸಲು ಮುಂದಾಗಿದ್ದ ಪತಿ

kumarvrl

ಮೈಸೂರು: ಪತಿಯಿಂದ ತೀವ್ರ ಹಲ್ಲೆಗೊಳಗಾಗಿದ್ದ ಪತ್ನಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.

ನಾಗವೇಣಿ ಅಲಿಯಾಸ್​ ಮಣಿ (41) ಮೃತಪಟ್ಟ ಗೃಹಿಣಿ. ವಾರದ ಹಿಂದೆ ಪತಿ ವೆಂಕಟಪ್ಪ ಹಲ್ಲೆ ನಡೆಸಿ ನೇಣು ಬಿಗಿದು ಕೊಲೆ ಮಾಡಲು ಮುಂದಾಗಿದ್ದ ಎಂದು ತಿಳಿದು ಬಂದಿದೆ.

ವೆಂಕಟಪ್ಪ ಮೂಲತಃ ಸೋಮನಾಥಪುರ ಗ್ರಾಮದವರು. ತಿ.ನರಸೀಪುರದಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ. 1997ರಲ್ಲಿ ನಾಗವೇಣಿ ಅವರನ್ನು ವೆಂಕಟಪ್ಪ ವಿವಾಹವಾಗಿದ್ದರು. ದಂಪತಿ ಸೋಮನಾಥಪುರದಲ್ಲಿ ವಾಸವಾಗಿದ್ದರು. ವೆಂಕಟಪ್ಪ ಪತ್ನಿಗೆ ನಿತ್ಯ ಕಿರುಕುಳ ನೀಡುತ್ತಿದ್ದರು. ಅಲ್ಲದೆ ಪತ್ನಿ ಮೇಲೆ ದೈಹಿಕವಾಗಿ ಹಲ್ಲೆ ಕೂಡ ನಡೆಸುತ್ತಿದ್ದರು.

ಮಾ.3ರಂದು ವೆಂಕಟಪ್ಪ ಪತ್ನಿ ಮಣಿ ಅವರ ಮೇಲೆ ಹಲ್ಲೆ ನಡೆಸಿ ನೇಣು ಹಾಕಲು ಮುಂದಾಗಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸೋಮವಾರ ಮೃತಪಟ್ಟಿದ್ದಾರೆ.

ಪತಿ ವೆಂಕಟಪ್ಪ ವಿರುದ್ಧ ಜಯಪುರ ಪೊಲೀಸರು ಕೇಸು ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)