ಬೆಂಗಳೂರು: ವೇಮನರು ರಾಜಕವಿಯಲ್ಲ, ಭಕ್ತಿ ಕವಿಯಲ್ಲ, ಜನಸಾಮಾನ್ಯರ ಕವಿಯಾಗಿ ತಮ್ಮ ಕಾವ್ಯಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದ ಅಪರೂಪದ ಸಮಾಜ ಸುಧಾರಕ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡದಲ್ಲಿ ಸರ್ವಜ್ಞ, ತಮಿಳಿನಲ್ಲಿ ತಿರುವಳ್ಳವರಂತೆ ತೆಲುಗಿನಲ್ಲಿ ವೇಮನರು ಜನಸಾಮಾನ್ಯರ ಕವಿಯಾಗಿದ್ದಾರೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಂಡವೀಡು ಗ್ರಾಮದಲ್ಲಿ ಜನಿಸಿ ಆ ಪ್ರಾಂತ್ಯದ ಆಳರಸರ ಅಹಮಿಕೆಯನ್ನು ತಲೆಗೇರಿಸಿಕೊಳ್ಳದೆ, ತನ್ನ ಎಲ್ಲ ಸುಖ- ಸಂಪತ್ತನ್ನು ತ್ಯಜಿಸಿ ಸಮಾಜ ಸೇವೆಗೆ ಧಾವಿಸಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.
ಇಂತಹ ಜನಸಾಮಾನ್ಯರಂತೆ ಬಾಳಿದ ನಿಜವಾದ ಜನಪರ ಮತ್ತು ಶ್ರೇಷ್ಠ ವ್ಯಕ್ತಿಯ ಜಯಂತಿಯನ್ನು ನಾವು ಸರ್ಕಾರದ ವತಿಯಿಂದ ಆಚರಣೆ ಮಾಡುತ್ತಿರುವುದು ನಮ್ಮ ಹೆಮ್ಮೆ ಎಂದರು.
ಹಾಗೆಯೇ ರೆಡ್ಡಿ ಸಮುದಾಯವು ಬಹಳ ಉದಾರ ಮನಸಿನ ಜನಾಂಗವಾಗಿದೆ. ಸಮಾಜವನ್ನು ನಿಯಂತ್ರಿಸುವ ಹಾಗೂ ಒಟ್ಟಿಗೆ ಕೊಂಡೊಯ್ಯುವ ಶಕ್ತಿ ಅವರಲ್ಲಿದೆ. ಕಷ್ಟ ಎಂದು ಹೇಳಿಕೊಂಡು ಯಾರಾದರೂ ಹೋದರೆ ಅವರನ್ನು ಹಾಗೆಯೇ ಕಳುಹಿಸದೆ ಸಹಾಯದ ಮನೋಭಾವ ಹೊಂದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯಸಭಾ ಮಾಜಿ ಸದಸ್ಯ ಕೆ.ಸಿ. ರಾಮಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ. ಧರಣೀದೇವಿ ಮಾಲಗತ್ತಿ, ಜಂಟಿ ನಿರ್ದೇಶಕ ಬಲವಂತರಾಯ ಪಾಟೀಲ್, ಸಮುದಾಯದ ಅಧ್ಯಕ್ಷ ಜಯರಾಮ ರೆಡ್ಡಿ ಸೇರಿ ಹಲವರು ಉಪಸ್ಥಿತರಿದ್ದರು.
ನಾರಾಯಣಗುರು, ವೇಮನ ಮತ್ತು ಹೇಮರೆಡ್ಡಿ ಮಲ್ಲಮ್ಮ ಕನ್ನಡೇತರ ಕವಿಯಾಗಿದ್ದಾರೆ. ಆದರೂ ಕರ್ನಾಟಕ ಸರ್ಕಾರ ಅವರ ಜಯಂತಿಯನ್ನೂ ಆಚರಿಸುತ್ತಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. - ವೇಮನಾನಂದ ಸ್ವಾಮೀಜಿ, ರೆಡ್ಡಿ ಗುರುಪೀಠ