ನ್ಯೂಸ್

ನೋ ಪಾರ್ಕಿಂಗ್​ ಜಾಗದಲ್ಲಿ ವಾಹನ ನಿಲ್ಸಿದ್ದಾರ? ಹಾಗಾದ್ರೆ ಫೋಟೋ ಕಳ್ಸಿ ಬಹುಮಾನ ಗೆಲ್ಲಿ

ನವದೆಹಲಿ: ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಿ ಸಮಸ್ಯೆ ಉಂಟುಮಾಡುವ ವಾಹನ ಸವಾರರೆ ಎಚ್ಚರ, ಇನ್ಮೇಲೆ ಬೇಕಾಬಿಟ್ಟಿ ಪಾರ್ಕಿಂಗ್​ಗೆ ಕಡಿವಾಣದ ಹಾಕಲು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ.

ಯಾರಾದರೂ ವಾಹನ ಸವಾರರು ನೋ ಪಾರ್ಕಿಂಗ್​ ಅಥವಾ ಜನನಿಬಿಡ ಸ್ಥಳದಲ್ಲಿ ಯರ್ರಾಬಿರ್ರಿಯಾಗಿ ವಾಹನ ನಿಲ್ಲಿಸಿದ್ದರೆ, ಅಂತಹದ್ದನ್ನು ಜನರು ಫೋಟೋ ತೆಗೆದು ಅದನ್ನು ಟ್ರಾಫಿಕ್​ ಪೊಲೀಸ್​ ಇಲಾಖೆಗೆ ಕಳುಹಿಸಬೇಕು. ಆಗ ಆ ವಾಹನ ಮಾಲೀಕರಿಗೆ 1 ಸಾವಿರ ರೂ ದಂಡ ಬೀಳಲಿದೆ. ಅದನ್ನು ಕಳುಹಿಸಿದವರಿಗೆ 500 ರೂಪಾಯಿ ಬಹುಮಾನವೂ ಸಿಗಲಿದೆ.

ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಕೇಂದ್ರ ಸಚಿವ ನಿತಿನ್​ ಗಡ್ಕರಿ, ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರ ವಿನೂತನ ಉಪಾಯ ಮಾಡಿದೆ ಎಂದು ವಿವರಿಸಿದರು. ಈ ರೀತಿಯ ನಿಯಮವನ್ನು ಜಾರಿ ಮಾಡಲು ಸರ್ಕಾರ ಕಾನೂನು ತರಲಿದೆ. ಆಗ ಮಾತ್ರ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ. ಕೆಲ ಸವಾರರು ತಮ್ಮ ವಾಹನವನ್ನು ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸುವ ಬದಲು ರಸ್ತೆ ಪಕ್ಕದಲ್ಲೇ ನಿಲ್ಲಿಸುವ ಚಾಳಿ ಹೊಂದಿದ್ದಾರೆ ಎಂದು ಗಡ್ಕರಿ ಹೇಳಿದರು.