ನ್ಯೂಸ್

ರಸ್ತೆಗಿಳಿದ್ರೆ ವಾಹನ ಜಪ್ತಿ, ಬೀಳುತ್ತೆ ಕೇಸ್

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಕರೊನಾ ಸೋಂಕು ಹರಡದಂತೆ ರಾಜ್ಯಾದ್ಯಂತ ಕರ್ಫ್ಯೂ ವಿಧಿಸಿದ್ದರೂ ಸ್ಪಂದಿಸದ ಜನರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ. ಎಲ್ಲೆಡೆ ನಾಕಬಂದಿ ಹಾಕಿ ವಾಹನ ತಪಾಸಣೆ ನಡೆಸುತ್ತಿರುವ ಪೊಲೀಸರು ರಸ್ತೆಯಲ್ಲಿ ಓಡಾಡುವ ಬೈಕ್ ಮತ್ತು ವಾಹನ ಚಾಲಕ/ಸವಾರರನ್ನು ಯಾವ ಉದ್ದೇಶಕ್ಕೆ, ಎಲ್ಲಿಗೆ ಹೋಗುತ್ತಿದ್ದಾರೆ ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ಅನಗತ್ಯವಾಗಿ ರಸ್ತೆಗೆ ಇಳಿದಿದ್ದಾರೆ ಎಂಬುದು ಖಚಿತವಾದರೆ ಅಂಥವರ ಬೈಕ್, ಕಾರು ಜಪ್ತಿ ಮಾಡುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಭಾನುವಾರ ಒಂದೇ ದಿನ 1400ಕ್ಕೂ ಅಧಿಕ ಬೈಕ್, ಕಾರು ಜಪ್ತಿ ಮಾಡಿದ್ದಾರೆ. ಇವರ ವಿರುದ್ಧ ಸರ್ಕಾರದ ಆದೇಶ ಉಲ್ಲಂಘನೆ ಆರೋಪದ ಮೇಲೆ ಕೇಸ್ ದಾಖಲಿಸಿದ್ದಾರೆ. ಇದೇ ರೀತಿ ಆಯಾ ಜಿಲ್ಲಾ ಎಸ್​ಪಿ ಮತ್ತು ಕಮಿಷನರ್​ಗಳಿಗೆ ಕರ್ಫ್ಯೂ ಆದೇಶವನ್ನು ಸೋಮವಾರದಿಂದ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸರ್ಕಾರ ಸೂಚನೆ ನೀಡಿದೆ.

ಸದ್ಯಕ್ಕೆ ವಾಹನ ಸಿಗಲ್ಲ: ಪೊಲೀಸರು ಜಪ್ತಿ ಮಾಡಿದ ವಾಹನ ಮತ್ತು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದರೆ ಆ ನಂತರ ಕೋರ್ಟ್​ನಲ್ಲಿಯೇ ದಂಡ ಪಾವತಿ ಮಾಡಿ ವಾಪಸ್ ಪಡೆಯಬೇಕು. ಆದರೆ, ತುರ್ತು ಪ್ರಕರಣಗಳ ವಿಚಾರಣೆ ಹೊರತುಪಡಿಸಿ ಕೋರ್ಟ್ ಕಲಾಪಗಳನ್ನೂ ಮುಂದೂಡ ಲಾಗಿದೆ. ಕರ್ಫ್ಯೂ ನಿಯಮ ಉಲ್ಲಂಘನೆ ಎಂದಾದರೇ ಕೋರ್ಟ್​ನಲ್ಲಿಯೂ ವಾಹನ ಬಿಡುಗಡೆ ಕಷ್ಟವಾಗುತ್ತದೆ.

301 ಬೈಕ್ ಸೀಜ್: 4 ದಿನದಲ್ಲಿ ಬೆಳಗಾವಿ ಜಿಲ್ಲಾದ್ಯಂತ 301 ಬೈಕ್ ಸೀಜ್ ಮಾಡಿ, ನೋಟಿಸ್ ನೀಡಲಾಗಿದೆ. 41 ಜನರ ವಿರುದ್ಧ ಕೇಸ್ ದಾಖಲಿಸಿ ದಂಡ ಹಾಕಲಾಗಿದೆ. ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಭಾನುವಾರ 200ಕ್ಕೂ ಹೆಚ್ಚು ಬೈಕ್ ಜಪ್ತಿ ಮಾಡಲಾಗಿದೆ.

ಶಿಸ್ತುಕ್ರಮ

ರಾಜ್ಯದಲ್ಲಿ ಕರ್ಫ್ಯೂ ಜಾರಿಯಾದ ಮೇಲೆ ಜನರಿಗೆ ಅರ್ಥ ಆಗದೆ ಓಡಾಡಿರಬಹುದು. ಪೊಲೀಸರೂ ಆರಂಭದಲ್ಲಿ ಲಾಠಿ ಪ್ರಹಾರ ನಡೆಸಿದ್ದಾರೆ. ನಮ್ಮ ಸಿಬ್ಬಂದಿ ಮೇಲೆಯೂ ಹಲ್ಲೆಯಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ವಿಷಾದ ವ್ಯಕ್ತಪಡಿಸಿದ್ದಾರೆ. ಇದು ಪೊಲೀಸರ ಕೆಲಸವಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ, ಗಲಭೆ ಸೃಷ್ಟಿಯಾಗಿಲ್ಲ. ಇದೊಂದು ಆರೋಗ್ಯ ಇಲಾಖೆ ಕೆಲಸ. ಪೊಲೀಸರು ಸೇವಾ ಮನೋಭಾವನೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿಯೊಬ್ಬರು ಕೈ ಜೋಡಿಸಿ ಸರ್ಕಾರದ ಆದೇಶಗಳನ್ನು ಪಾಲನೆ ಮಾಡಿ ಎಂದು ಮನವಿ ಮಾಡಿದ್ದಾರೆ.

ನಿಯಮ ಮೀರಿದರೆ ಹಣೆಗೆ ಸೀಲ್

ಸುಖಾಸುಮ್ಮನೆ ರಸ್ತೆಯಲ್ಲಿ ಸಂಚರಿಸುತ್ತಿದ್ದವರಿಗೆ ಬುದ್ಧಿ ಹೇಳಿ ಸಾಕಾದ ವಿಜಯಪುರ ಗಾಂಧಿಚೌಕ್ ಪೊಲೀಸರು ವಿಶೇಷ ರೀತಿಯ ಶಿಕ್ಷೆ ವಿಧಿಸುವ ಮೂಲಕ ಗಮನಸೆಳೆದಿದ್ದಾರೆ. ಲಾಕ್​ಡೌನ್ ಉಲ್ಲಂಘಿಸಿದವರನ್ನು ಹಿಡಿದು, ಅವರ ಹಣೆಗೆ ‘ನಾನು ಸಮಾಜದ ವಿರೋಧಿ ಇದ್ದೇನೆ. ಲಾಕ್ ಡೌನ್ ಉಲ್ಲಂಘಿಸಿದ್ದೇನೆ’ ಎನ್ನುವ ಬರಹವಿರುವ ಮುದ್ರೆ ಒತ್ತುತ್ತಿದ್ದಾರೆ. ಜತೆಗೆ ಮತ್ತೊಮ್ಮೆ ನಿಯಮ ಉಲ್ಲಂಘಿಸದಂತೆ ಖಡಕ್ ಎಚ್ಚರಿಕೆ ಕೊಟ್ಟು ಕಳಿಸುತ್ತಿದ್ದಾರೆ.

ಭಾನುವಾರದ ಹೈಲೈಟ್ಸ್

  • ಶಿವಮೊಗ್ಗ ಜಿಲ್ಲೆ ಸಾಗರದ ಶ್ರೀಗಂಧ ಕಾಂಪ್ಲೆಕ್ಸ್ ಬಳಿ ಲಾಕ್​ಡೌನ್ ಉಲ್ಲಂಘಿಸಿ ಬೈಕ್​ನಲ್ಲಿ ಅನಗತ್ಯ ಸುತ್ತಾಡುತ್ತಿದ್ದ ಯುವಕನಿಗೆ ಎಚ್ಚರಿಕೆ ನೀಡಿದರೂ ಉಡಾಫೆಯಿಂದ ವರ್ತಿಸಿದ್ದಕ್ಕೆ ಎಎಸ್​ಐ ಮೀರಾಬಾಯಿ 50 ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದು, ವಿಡಿಯೋ ವೈರಲ್ ಆಗಿದೆ.
  • ಬೆಳಗಾವಿ ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಬಸವರಾಜ ಡೊಳ್ಳಿನ ಮೇಲೆ ಹಲ್ಲೆ ನಡೆಸಿದ್ದ ಪೋಲಿಸ್ ಪೇದೆಯನ್ನು ವಜಾಗೊಳಿಸದಿದ್ದರೆ ಏ.1ರಿಂದ ತುರ್ತು ಸೇವೆ ನಿಲ್ಲಿಸಲಾಗುವುದು ಎಂದು ರಾಜ್ಯ ಆರೋಗ್ಯ ಇಲಾಖೆ ಸಹಾಯಕರ ಹಾಗೂ ಮೇಲ್ವಿಚಾರಕ ಸಂಘದ ಅಧ್ಯಕ್ಷ ಬಿ.ಎ. ಕುಂಬಾರ ಎಚ್ಚರಿಕೆ.
  • ಪೂಜೆಗೆ ತೆರಳುತ್ತಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರ ಮೇಲೆ ಪೊಲೀಸ್ ಪೇದೆ ಲಾಠಿ ಬೀಸಿದ್ದಾರೆ. ಹಲ್ಲೆಗೈದ ಸಿಬ್ಬಂದಿ ಶಂಕರ್ ಅವರನ್ನು ದ.ಕ. ಜಿಲ್ಲಾ ಎಸ್​ಪಿ ಅಮಾನತುಗೊಳಿಸಿದ್ದಾರೆ.
  • ಚಾ.ನಗರದಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ 20ಕ್ಕೂ ಹೆಚ್ಚು ಜನರನ್ನು ತಡೆದ ಪೊಲೀಸರು ಭುವನೇಶ್ವರಿ ವೃತ್ತದಲ್ಲಿ ಕೆಲ ಕಾಲ ಮಂಡಿಯೂರಿ ನಿಲ್ಲುವ ಶಿಕ್ಷೆ ನೀಡಿದರು.
  • ಹಾವೇರಿಯಲ್ಲಿ ಗೂಡ್ಸ್ ವಾಹನದಲ್ಲಿ ಕುರಿಗಳಂತೆ ತಾಡಪತ್ರೆಯಲ್ಲಿ ಮುಚ್ಚಿಕೊಂಡು ಕಾರ್ವಿುಕರನ್ನು ಕರೆದೊಯ್ಯುತ್ತಿರುವುದನ್ನು ಪೊಲೀಸರು ಪತ್ತೆಹಚ್ಚಿ, ಚಾಲಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ.
  • ಕಲಬುರಗಿಯಲ್ಲಿ ಕರೊನಾ ನಿಯಂತ್ರಣ ಮತ್ತು ರೈತರ ಸಮಸ್ಯೆ ಕುರಿತು ಮನವಿಪತ್ರ ಸಲ್ಲಿಸಲು ಬಂದಿದ್ದ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಅವರನ್ನು ಡಿಸಿ ಕಚೇರಿ ಸಭಾಂಗಣದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಸಮ್ಮುಖದಲ್ಲೇ ಪೊಲೀಸರು ಎಳೆದಾಡಿದರು. ಇದಕ್ಕೆ ಆಕ್ಷೇಪಿಸಿದ್ದಕ್ಕೆ ಸಭಾಂಗಣದಿಂದ ಹೊರಹಾಕಿದರು.
  • ವಿದೇಶದಿಂದ ಆಗಮಿಸಿ ಹೋಂ ಕ್ವಾರಂಟೈನ್​ನಲ್ಲಿದ್ದರೂ ಸಾರ್ವಜನಿಕವಾಗಿ ಬೇಕಾಬಿಟ್ಟಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆ ಸಿಪಿಐ ಬಿ.ಆರ್. ಗಡ್ಡೇಕರ ಖಡಕ್ ವಾರ್ನಿಂಗ್ ಕೊಟ್ಟು ಬಿಸಿ ಮುಟ್ಟಿಸಿದ್ದಾರೆ.
  • ರಾಣೆಬೆನ್ನೂರಲ್ಲಿ ಹೋಮ್ ಕ್ವಾರಂಟೈನ್​ಲ್ಲಿದ್ದ ಸಿದ್ಧೇಶ್ವರ ನಗರದ 30 ವರ್ಷದ ವ್ಯಕ್ತಿಗೆ ಏಕಾಏಕಿ ಜ್ವರ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
  • ಬೆಂಗಳೂರಿನಿಂದ ರಾಜಸ್ಥಾನಕ್ಕೆ ಕಂಟೈನರ್​ನಲ್ಲಿ ತೆರಳುವಾಗ ಸಿಕ್ಕಿಬಿದ್ದಿದ್ದ 2437 ಕೂಲಿ ಕಾರ್ವಿುಕರನ್ನು ಅನುಕಂಪದ ಮೇರೆಗೆ ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ 60 ಬಸ್​ಗಳ ಮೂಲಕ ರಾಜಸ್ಥಾನಕ್ಕೆ ಕಳಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
  • ಧಾರವಾಡ ಜಿಲ್ಲೆಯಲ್ಲಿ ಮತ್ತೋರ್ವ ಕರೊನಾ ಶಂಕಿತ ವ್ಯಕ್ತಿ ಪತ್ತೆಯಾಗಿದ್ದು, ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಶಿವಮೊಗ್ಗ ಕೇಂದ್ರಕ್ಕೆ ಕಳುಹಿಸಲಾಗಿದೆ.