ಸದಾಶಿವ ಮೊದಲಾದವರಿಗಿಂತ ಬೇರೆಯಲ್ಲದ ಪಿತೃಗಳಿಗೆ ಅಂದರೆ, ತಂದೆ, ಅಜ್ಜ, ಮುತ್ತಜ್ಜ ಮೊದಲಾದವರಿಗೆ ತತ್ವ ಸಂಯೋಜನ ವಿಧಿಯ ಮೂಲಕ ಕಲೆಗಳನ್ನು ಸಂಗ್ರಹಿಸಿ, ಅವುಗಳನ್ನು ಶಾಸ್ತ್ರೋಕ್ತ ರೀತಿಯಲ್ಲಿ ಪೂಜಿಸಿ, ಮೃತನಾದ ಲಿಂಗಧಾರಿಯ ಜೀವಭಾವದ ನಿವಾರಣೆಗೋಸ್ಕರ ಮೂರು ತಲೆಮಾರಿನ ಪೂರ್ವಜರೊಂದಿಗೆ (ತಂದೆ, ಅಜ್ಜ, ಮುತ್ತಜ್ಜ ಇವರೊಂದಿಗೆ) ಐಕ್ಯವನ್ನು ಹೊಂದುವುದಕ್ಕಾಗಿ ಮಗನು ತತ್ತ್ವ ಸಂಯೋಜನ ವಿಧಿಯನ್ನು ಪೂರೈಸಬೇಕು. ಅನಾರೋಪಿತಂ ರೂಪಂ ತತ್ತ್ವಂ ಎಂಬುದು ತತ್ತ್ವ ಶಬ್ದದ ವ್ಯುತ್ಪತ್ತಿಯಾಗಿದೆ.
ಆರೋಪಿತವಲ್ಲದ ಮೂಲ ರೂಪವನ್ನೇ ತತ್ತ್ವವೆಂದು ಕರೆಯಲಾಗುತ್ತದೆ. ಪ್ರತಿಯೊಬ್ಬರ ಮೂಲ ಸ್ವರೂಪ ಆತ್ಮತತ್ತ್ವವೇ ಆಗಿರುವುದರಿಂದ ದೇಹಕ್ಕೆ ಹೊಂದಿಕೊಂಡು ಬಂದಿರುವ ಯಾವುದೇ ರೂಪವು ನಮ್ಮ ಮೂಲರೂಪವಲ್ಲ. ಆದ್ದರಿಂದ ದೇಹ ಸಂಬಂಧದಿಂದ ಬಂದಿರುವ ಮತ್ತು ಆರೋಪಿತವಾದ ಎಲ್ಲ ರೂಪಗಳನ್ನು ಕಳಚಿ ಮೂಲ ಆತ್ಮತತ್ತ್ವದೊಂದಿಗೆ ಪೂರ್ವಜರ ಆತ್ಮಗಳನ್ನು ಸಂಯೋಜಿಸುವ ಒಂದು ವಿಶಿಷ್ಟವಾದ ವಿಧಿಯನ್ನು ತತ್ತ್ವಸಂಯೋಜನ ವಿಧಿ ಎಂದು ಕರೆಯಲಾಗುತ್ತದೆ.
| ಮುಕುಟಾಗಮ (ಚರ್ಯಾಪಾದ) -7. 5)/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.