ನ್ಯೂಸ್

ವೀರಶೈವಾಗಮ

ಸುದೀಪ್​ ವಿ.ಎನ್​
ನಿರ್ವತ್ತವಪನಃ ಸ್ನಾತ್ವಾಭೂತಿರುದ್ರಾಕ್ಷಭೂಷಿತಃ | ಗಣಾನುಜ್ಞಾಂ ಗೃಹೀತ್ವಾಥ ದಿವ್ಯರೂಪಾಪ್ತಯೇ ಪಿತುಃ || ಪಂಚಭಿರ್ನವಭಿರ್ವಾಥ ವೃಷಭೈರಭಿಶೋಭಿತಮ್ | ಪಿತೃನಾಮಾಂಕಿತಂ ಲಿಂಗಂ ಸಮಾಧೌ ಸ್ಥಾಪಯೇತ್ ಸುತಃ ||

ಭೂನಿಕ್ಷೇಪ ವಿಧಿಯ ಬಗ್ಗೆ ಕೇಳಿದ ನಂತರ ರುದ್ರನು ಶಿವನನ್ನು ಕುರಿತು ಭೂನಿಕ್ಷೇಪ ವಿಧಿಯ ನಂತರ ಆಚರಿಸಬೇಕಾದ ಕ್ರಿಯೆಗಳನ್ನು ಬೋಧಿಸು ಎಂದು ವಿನಂತಿಸುತ್ತಾನೆ. ಆಗ ಶಿವನು, ರುದ್ರನಿಗೆ ಸಮಾಧಿ ನೆರವೇರಿಸಿ ಕೇಶಮುಂಡನ ಮಾಡಿಕೊಂಡ ನಂತರ ಸ್ನಾನ ಮಾಡಿ, ವಿಭೂತಿ, ರುದ್ರಾಕ್ಷಗಳಿಂದ ಅಲಂಕೃತನಾಗಿ, ಅನಂತರ ಗಣಗಳ (ಜಂಗಮರ) ಅನುಮತಿ ಪಡೆದು ತಂದೆಗೆ ದಿವ್ಯರೂಪ ಪ್ರಾಪ್ತವಾಗಲು ಐದು ಅಥವಾ ಒಂಭತ್ತು ವೃಷಭಗಳಿಂದ ಶೋಭಿಸುತ್ತಿರುವ, ತನ್ನ ತಂದೆಯ ಹೆಸರು ಬರೆದಿರುವ ಲಿಂಗವನ್ನು ಮಗನು ಸಮಾಧಿಯ ಮೇಲೆ ಸ್ಥಾಪಿಸಬೇಕು ಎಂದು ಉಪದೇಶಿಸುತ್ತಾನೆ.

ವೀರಶೈವ ಧರ್ಮದ ಪ್ರಕಾರ ಪ್ರತಿಯೊಬ್ಬ ಶಿವಭಕ್ತನಿಗೆ ಲಿಂಗವೇ ಸರ್ವಸ್ವವಾಗಿರುವುದರಿಂದ ಮೃತ ವ್ಯಕ್ತಿಯ ದೇಹದ ಜೊತೆಗೆ ಅವನು ಪೂಜಿಸಿದ ಲಿಂಗವು ಅವನೊಂದಿಗೆ ಇದ್ದೇ ಇರುತ್ತದೆ. ಆದರೆ ಅವನು ಲಿಂಗಸ್ವರೂಪನಾಗಿದ್ದಾನೆ ಮತ್ತು ಅವನ ಹೆಸರಿಗೆ ಮಾಡುವ ಎಲ್ಲ ಪೂಜಾ ಕೈಂಕರ್ಯಗಳು ಶಿವನನ್ನೇ ಸೇರುತ್ತವೆ ಎಂಬುದರ ಪ್ರತಿಕವಾಗಿ ಸಮಾಧಿಯ ಮೇಲೆ ಲಿಂಗಸ್ಥಾಪನೆಯನ್ನು ಮಾಡಲಾಗುತ್ತದೆ.

| ಮುಕುಟಾಗಮ (ಚರ್ಯಾಪಾದ -5. 2-3/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.