ನ್ಯೂಸ್

ವೀರಶೈವಾಗಮ

ಸುದೀಪ್​ ವಿ.ಎನ್​
ಉಚ್ಚಿಕಿಮಿಷುರಾಶ್ವೇವ ಮಯ್ಯಾವೇಶಿತಚೇತನಃ | ಕರ್ತಂ ದಾನಾದಿಕಂ ಸ್ನಾನಮಾಗ್ನೇಯಾದಿಕಮಾಚರೇತ್||

ಸಮಾಧಿಯ ಮಹತ್ವವನ್ನು ಶ್ರದ್ಧೆಯಿಂದ ಆಲಿಸಿದ ರುದ್ರನು ಮುಂದುವರಿದು ಸಮಸ್ತ ಜಗತ್ತಿಗೆ ಆತ್ಮಸ್ವರೂಪಿಯಾದ, ಎಲ್ಲದಕ್ಕೂ ಕಾರಣನಾದ, ಶಾಶ್ವತನಾದ ಹೇ ಪರಮೇಶ್ವರನೆ! ‘ಉತ್ಕೃಮಣ’ ವಿಧಾನದ ಮೂಲಕ ಶರೀರವನ್ನು ತ್ಯಜಿಸಲು ಬಯಸುವ ವ್ಯಕ್ತಿಯು ಮೋಕ್ಷ ಪ್ರಾಪ್ತಿಗಾಗಿ ಕೂಡಲೇ ಮಾಡಬೇಕಾದ ಕ್ರಿಯೆಗಳೇನು ಎಂಬುದನ್ನು ನನಗೆ ಬೋಧಿಸು ಎಂದು ವಿನಂತಿಸಿಕೊಳ್ಳುತ್ತಾನೆ. ಆಗ ಶಿವನು ನನ್ನಲ್ಲಿ ನೆಟ್ಟ ಚಿತ್ತವುಳ್ಳ ಭಕ್ತನ ಪ್ರಾಣವೇನಾದರೂ ಹೋಗುವಂತಾದರೆ, ಆಗ ದಾನವೇ ಮುಂತಾದವುಗಳನ್ನು ಮಾಡಲು ಮತ್ತು ‘ಆಗ್ನೇಯ’ವೇ ಮುಂತಾದ ಸ್ನಾನವಿಧಿಗಳಲ್ಲಿ ಒಂದನ್ನು ಆಚರಿಸಬೇಕು. ‘ಯಾಂತೇ ಮತಿಃ ಸಾಂತೇ ಗತಿಃ’ ಎಂಬ ವೇದದ ಉಕ್ತಿಯಂತೆ ಪ್ರಾಣ ಬಿಡುವ ಸಮಯದಲ್ಲಿ ನಮ್ಮ ಬುದ್ಧಿಯಲ್ಲಿ ಯಾವುದು ಯಾವಾಗಲೂ ದೃಢವಾಗಿ ನೆಲೆಸಿರುತ್ತದೆಯೋ ಅದೇ ರೀತಿಯಾದ ಗತಿಯು ನಮಗೆ ಲಭಿಸುತ್ತದೆ. ಆದ್ದರಿಂದ ಪ್ರಾಣತ್ಯಾಗದ ನಂತರ ಸದ್ಗತಿಯು ಲಭಿಸಬೇಕಾದರೆ ನಮ್ಮ ಬುದ್ಧಿಯನ್ನು ಯಾವ ಮಾರ್ಗದಿಂದಾದರೂ ಸರಿ, ಶಿವಮಯಗೊಳಿಸಿಕೊಳ್ಳಬೇಕು.

| ಮುಕುಟಾಗಮ (ಚರ್ಯಾಪಾದ)2. 2/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.