ನ್ಯೂಸ್

ನಾಳೆಯಿಂದ ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್​ಕ್ಲೇವ್; ಯುವ ಉದ್ಯಮಿಗಳಿಗೆ ಉತ್ತಮ ವೇದಿಕೆ, ಮೈಸೂರಿನಲ್ಲಿ ಮೂರು ದಿನಗಳ ಕಾಲ ಸಮಾವೇಶ ಆಯೋಜನೆ

ಮೈಸೂರು: ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (ಐಎಲ್​ವೈಎಫ್)ಯಿಂದ ನಗರದಲ್ಲಿ ಮೂರು ದಿನ ಆಯೋಜಿಸಿರುವ ‘ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್​ಕ್ಲೇವ್ -2025’ ಯುವ ಉದ್ಯಮಿಗಳಿಗೆ ಉತ್ತಮ ವೇದಿಕೆಯಾಗಲಿದೆ.

ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಮಾಧ್ಯಮ ಸಹಯೋಗದಲ್ಲಿ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಜು.17, 18 ಮತ್ತು 19ರಂದು ನಡೆಯಲಿರುವ ಸಮಾವೇಶದಲ್ಲಿ 150ಕ್ಕೂ ಹೆಚ್ಚು ಮಳಿಗೆಗಳಿರಲಿದ್ದು, ಸಾರಿಗೆ, ಸಣ್ಣ, ಗುಡಿ ಕೈಗಾರಿಕೆ, ರಿಯಲ್ ಎಸ್ಟೇಟ್, ಕಟ್ಟಡ, ಬಂಡವಾಳ ಹೂಡಿಕೆ, ಆಹಾರ ಮಳಿಗೆ ಮೊದಲಾದ ಮಾಹಿತಿ ದೊರೆಯಲಿದೆ.

ರಾಜ್ಯ ಸೇರಿ ವಿವಿಧ ರಾಜ್ಯಗಳಿಂದ ಆಗಮಿಸುವ ತಜ್ಞರು, ನುರಿತ ಉದ್ಯಮಿಗಳು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಮೂರು ದಿನಗಳ ಈ ಕಾನ್​ಕ್ಲೇವ್​ನಲ್ಲಿ 30 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆ ಇದೆ. ಸಮಾವೇಶವು ಮುಖ್ಯವಾಗಿ ಮಹಿಳಾ ಉದ್ಯಮಶೀಲತೆ, ಸಣ್ಣ ಹಾಗೂ ಗುಡಿ (ಮೈಕ್ರೋ ಎಂಟರ್​ಪ್ರೖೆಸಸ್) ಕೈಗಾರಿಕೆ ಮತ್ತು ಮೈಸೂರಿನ ಸಾಂಸ್ಕೃತಿಯ ನೆಲೆಯ ಮೇಲೆ ಕೇಂದ್ರೀಕೃತವಾಗಿರುತ್ತದೆ.

ಈಗಾಗಲೇ 2023ರಲ್ಲಿ ಬೆಂಗಳೂರು, 2024ರಲ್ಲಿ ಹುಬ್ಬಳ್ಳಿ ಬಳಿಕ ಈಗ ಮೈಸೂರಿನಲ್ಲಿ ಸಮಾವೇಶ ಆಯೋಜಿಸಲಾಗುತ್ತಿದ್ದು, ಇಲ್ಲಿನ ಆರ್ಥಿಕ ಬೆಳವಣಿಗೆ, ಬ್ರ್ಯಾಂಡ್ ಮೈಸೂರಿಗೆ ಸಹಕಾರಿಯಾಗಲಿದೆ. ಸಮುದಾಯದ ಉದ್ಯಮಿಗಳನ್ನು, ವೃತ್ತಿಪರರನ್ನು ಒಂದೇ ವೇದಿಕೆಗೆ ತರುವ ಮತ್ತು ಆರ್ಥಿಕ, ಕೈಗಾರಿಕೆ, ವ್ಯಾಪಾರ ಚಟುವಟಿಕೆಗಳನ್ನು ಉತ್ತಮಗೊಳಿಸುವ ಉದ್ದೇಶ ಇದೆ. ಅನೇಕ ಉದ್ಯಮಿಗಳು, ಕಲಾವಿದರಿಗೆ ಪ್ರತಿಭೆ ಪ್ರದರ್ಶಿಸಲು ಅತ್ಯುತ್ತಮ ವೇದಿಕೆಯೂ ಇದಾಗಲಿದೆ.

ಸಾಮರ್ಥ್ಯ ಪ್ರದರ್ಶನ, ಉಪಯುಕ್ತ ಚರ್ಚೆ: ಕರ್ನಾಟಕ ಸರ್ಕಾರವು ಕಲ್ಪಿಸಿರುವ ಕ್ಲಸ್ಟರ್ ಆಧಾರಿತ ವಿಧಾನವನ್ನು ಕೈಗಾರಿಕೋದ್ಯಮಿಗಳು, ಉದ್ಯಮಿಗಳು ಹಾಗೂ ಕೃಷಿ ಸಮುದಾಯಕ್ಕೆ ಪ್ರಚಲಿತಗೊಳಿಸುವುದು, ಸ್ಟಾರ್ಟಪ್ ಬಲಪಡಿಸುವಿಕೆ, ಜಿಲ್ಲಾ ಮಟ್ಟದಲ್ಲಿ ಮಹಿಳಾ ಉದ್ಯಮಶೀಲತೆ ಹಾಗೂ ಯುವ ಉದ್ಯಮಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ಮಾರ್ಗದರ್ಶನ, ವಿವಿಧ ಉತ್ಪನ್ನಗಳು ಹಾಗೂ ಸೇವೆಗಳನ್ನು ಮಳಿಗೆಗಳಲ್ಲಿ ಪ್ರದರ್ಶಿಸುವ ಮೂಲಕ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಮೈಸೂರಿನ ಸಾಮರ್ಥ್ಯವನ್ನು ಪ್ರದರ್ಶಿಸುವುದು, ಅನುಭವಿ ಉದ್ಯಮಿಗಳು, ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಉದ್ಯಮಿಗಳು, ಅಧಿಕಾರಿಗಳು ಮತ್ತಿತರರನ್ನು ಒಳಗೊಂಡ ಉಪಯುಕ್ತ ಚರ್ಚೆಗಳು ನಡೆಯಲಿವೆ. ವೀರಶೈವ ಲಿಂಗಾಯತ ಸಮುದಾಯದ ಶಕ್ತಿ ಹಾಗೂ ಮೈಸೂರಿನ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸುವುದು, ಜಗತ್ತಿನಾದ್ಯಂತ ಇರುವ ಇತರ ವೀರಶೈವ ಲಿಂಗಾಯತ ಸಂಘಗಳ ಮೂಲಕ ಜಾಗತಿಕ ಪ್ರೇಕ್ಷಕರನ್ನು ತಲುಪುವುದು ಮುಖ್ಯ ಆಶಯವಾಗಿದೆ.

ಸುತ್ತೂರು ಶ್ರೀಗಳಿಂದ ಚಾಲನೆ: ಸಮಾವೇಶಕ್ಕೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಜ.17ರಂದು ಚಾಲನೆ ನೀಡಲಿದ್ದಾರೆ. ಸಚಿವ ಎಂ.ಬಿ.ಪಾಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಎಚ್.ಎಂ.ಗಣೇಶ್​ಪ್ರಸಾದ್, ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಎಂಟರ್​ಪ್ರೖೆಸಸ್ ನಿರ್ದೇಶಕ ನಿತೇಶ್ ಪಾಟೀಲ್, ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ (ಎಸ್​ಎಲ್​ಸಿ) ಅಧ್ಯಕ್ಷರಾದ ನ್ಯಾಯಮೂರ್ತಿ ಸುಭಾಷ ಬಿ. ಆಡಿ, ಫೆಡರೇಷನ್ ಆಫ್ ಇಂಡಸ್ಟ್ರೀಸ್ ಅಧ್ಯಕ್ಷ ಬಾಲಚಂದರ ರಾವ್ ರಾಣೆ, ಆದರ್ಶ್ ಗ್ರೂಪ್​ನ ಸಂಸ್ಥಾಪಕ ಬಿ.ಎಂ.ಜಯಶಂಕರ್, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಐಎಲ್​ಐಎಫ್ ಸಂಸ್ಥಾಪಕ ಅಧ್ಯಕ್ಷ ಎಂಎಲ್​ಸಿ ಕೆ.ಎಸ್.ನವೀನ್ ಇತರರು ಭಾಗವಹಿಸಲಿದ್ದಾರೆ. ಜ.19ರ ಸಂಜೆ 4.30ಕ್ಕೆ ಆಯೋಜಿಸಿರುವ ಸಮಾರೋಪದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಈಶ್ವರ ಖಂಡ್ರೆ, ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಇತರರು ಭಾಗವಹಿಸಲಿದ್ದಾರೆ. ಮೂರೂ ದಿನ ವಿವಿಧ ವಿಷಯಗಳ ಸಂಬಂಧ ವಿಚಾರಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಡಾ. ಆನಂದ ಸಂಕೇಶ್ವರ ಅವರಿಂದ ವಿಚಾರ ಮಂಡನೆ: ಕಾನ್​ಕ್ಲೇವ್​ನಲ್ಲಿ ಜ.18ರ ಸಂಜೆ 4ರಿಂದ ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಅವರು ಭಾಷಣ ಮಾಡಲಿದ್ದಾರೆ.ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ವಿಚಾರಗೋಷ್ಠಿಯಲ್ಲಿ ಅವರು ‘ತಮ್ಮ ದೃಷ್ಟಿಯಲ್ಲಿ ಕ್ರಾಂತಿಕಾರಿ ಭವಿಷ್ಯ’ ಕುರಿತು ವಿಷಯ ಮಂಡಿಸಲಿದ್ದಾರೆ.

ಲಾಭರಹಿತ ಸಾರ್ವಜನಿಕ ಸಾಮಾಜಿಕ ಟ್ರಸ್ಟ್ ಅಗಿರುವ ಐಲೈಫ್​ನಿಂದ ಯುವ ಉದ್ಯಮಿಗಳಿಗೆ ಮಾರ್ಗದರ್ಶನ ನೀಡಲು ಈ ಸಮಾವೇಶ ಸಹಕಾರಿಯಾಗಲಿದೆ. ಹೊರ ರಾಜ್ಯಗಳಿಂದಲೂ ತಜ್ಞರು ಭಾಗವಹಿಸಿ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. ಈ ಮೂಲಕ ಉದ್ಯಮಿದಾರರು, ಸಾರ್ವಜನಿಕರಿಗೂ ಅನುಕೂಲವಾಗುವುದಲ್ಲದೆ, ಬ್ರ್ಯಾಂಡ್ ಮೈಸೂರಿಗೆ ಸಹಕಾರಿಯಾಗಲಿದೆ. ಸಮಾವೇಶ ವೀಕ್ಷಣೆಗೆ ಎಲ್ಲರಿಗೂ ಮುಕ್ತ ಉಚಿತ ಪ್ರವೇಶ ಇರಲಿದೆ.

| ಬಿ.ಎಸ್. ಪ್ರಶಾಂತ್ ಅಧ್ಯಕ್ಷ, ಐಲೈಫ್ ಗ್ಲೋಬಲ್ ಬಿಜಿನೆಸ್ ಕಾನ್​ಕ್ಲೇವ್