ಪಂಚನಹಳ್ಳಿ: ಸಾಧಕರ ಅನುಭವದ ಮಾತುಗಳು ಮತ್ತು ಅವರ ಜೀವನದ ಆದರ್ಶಗಳು ಪ್ರತಿಯೊಬ್ಬರ ಜೀವನಕ್ಕೆ ದಾರಿದೀಪ ಎಂದು ಸಹಾಯಕ ಪ್ರಾಧ್ಯಾಪಕ ಎಸ್.ಎನ್.ಆನಂದ್ ಹೇಳಿದರು.
ಭಾನುವಾರ ಸಿಂಗಟಗೆರೆ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಅನುಭವಿಗಳಿಂದ ಬರುವ ಮಾತುಗಳು ಹೆಚ್ಚು ಪರಿಣಾಮಕಾರಿ. ಅವರ ಮಾತುಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಾಧನೆಗೆ ಬೇಕಾದ ಪೂರಕ ವಾತಾವರಣವನ್ನು ಕಲ್ಪಿಸುವ ಬಗ್ಗೆ ಚಿಂತನೆ ನಡೆಸಬೇಕು ಎಂದರು.
ಭಾರತದಲ್ಲಿ ಭವ್ಯ ಮತ್ತು ದಿವ್ಯವಾದ ಪರಂಪರೆಯನ್ನು ವೀರಶೈವ ಲಿಂಗಾಯತ ಸಮಾಜ ಹೊಂದಿದೆ. 12ನೇ ಶತಮಾನ ಇದಕ್ಕೆ ಉದಾಹರಣೆಯಾಗಿದೆ. ಸಮಾಜದ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪ್ರತಿ ತಾಲೂಕು ಕೇಂದ್ರದಲ್ಲಿ ವಿದ್ಯಾರ್ಥಿನಿಲಯಗಳನ್ನು ತೆರೆಯಬೇಕು. ಪ್ರತಿ ಗ್ರಾಮದಲ್ಲಿ ಗ್ರಂಥಾಲಯ ಸ್ಥಾಪನೆಯಾಗಬೇಕು ಎಂದು ಹೇಳಿದರು.
ಪ್ರಾಧ್ಯಾಪಕ ಬಿ.ಎಸ್.ಅಶೋಕ್ ಮಾತನಾಡಿ, ಎಲ್ಲರಲ್ಲೂ ಪ್ರತಿಭೆ ಅಡಗಿರುತ್ತದೆ. ವಿದ್ಯಾರ್ಥಿಗಳು ಸಾಧನೆ ಮಾಡಲು ಅನೇಕ ಅಡೆತಡೆಗಳು ಬರುತ್ತವೆ. ಸಲ್ಲದ ಅನೇಕ ವಿಚಾರಗಳು ನಮ್ಮನ್ನು ಸೆಳೆಯುತ್ತವೆ. ಅವೆಲ್ಲವನ್ನು ಮೀರಿ ಬೆಳೆದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದರು.
ಕಡೂರು ಯಾಳನಡು ಮಠದ ಶ್ರೀ ಜ್ಞಾನ ಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶೈಕ್ಷಣಿಕ ಹಂತದಲ್ಲಿ ಮಕ್ಕಳ ಪ್ರತಿಭೆ ಗುರುತಿಸಿ ಸೂಕ್ತ ಪುರಸ್ಕಾರ ನೀಡುವುದು ಪ್ರತಿಯೊಂದು ಸಮಾಜದ ಆದ್ಯ ಕರ್ತವ್ಯ ಎಂದರು.
ವೀರಶೈವ ಲಿಂಗಾಯತ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದರನ್ನು ಗೌರವಿಸಲಾಯಿತು. ಹುಲಿಕೆರೆ ದೊಡ್ಡಮಠದ ವಿರುಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ, ಕೆ.ಬಿದರೆ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಬೀರೂರು ರಂಭಾಪುರಿ ಶಾಖಾ ಮಠದ ರುದ್ರಮುನಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಕೆ.ಜೆ.ಚಂದ್ರಪ್ಪ, ಹೋಬಳಿ ಅಧ್ಯಕ್ಷ ಎಚ್.ಕೆ.ಜಗದೀಶ್,
ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ಧರ್ಮದರ್ಶಿ ಬಿ.ಕೆ. ನಾಗರಾಜಪ್ಪ, ಟಿ.ಕೆ.ಜಗದೀಶ್, ಕೆ.ಎನ್.ಜಯಣ್ಣ, ಕೆ.ಎನ್.ಬೊಮ್ಮಣ್ಣ, ಎಸ್.ಜಿ.ರಾಮಪ್ಪ, ಬಿ.ಪಿ.ದೇವಾನಂದ್, ಕಲ್ಲಪ್ಪ, ಬಿ.ಟಿ.ಪ್ರೇಮ್ ಕುಮಾರ್,ಎಸ್.ಮಲ್ಲಿಕಾರ್ಜುನ್,ಎಂ.ಆರ್.ಪ್ರಕಾಶ್, ಕೆ.ವಿರೂಪಾಕ್ಷಪ್ಪ, ಆನಂದಮೂರ್ತಿ ಇತರರಿದ್ದರು.