ಶಿಕಾರಿಪುರ: ಕಡೇನಂದಿಹಳ್ಳಿ ಹೊಳಿಹಂಪೇಶ್ವರ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ (78) ಬುಧವಾರ ಲಿಂಗೈಕ್ಯರಾದರು.
ಮೂಲತಃ ಕಡೇನಂದಿಹಳ್ಳಿಯವರೇ ಆದ ಶ್ರೀಗಳಿಗೆ 18ನೇ ವಯಸ್ಸಿನಲ್ಲೇ ಪಟ್ಟಾಧಿಕಾರವಾಗಿತ್ತು. ತಾಲೂಕಿನ ಹಾಗೂ ನಾಡಿನ ಮಠಾಧೀಶರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.
ತಮ್ಮ ದೈನಂದಿನ ಪೂಜೆ ಪುನಸ್ಕಾರಗಳೊಂದಿಗೆ ಕಾಯಕನಿಷ್ಠರಾಗಿದ್ದರು. ಕೃಷಿಪ್ರೇಮಿಯಾಗಿದ್ದ ಪೂಜ್ಯರು ಪಾರಂಪರಿಕ ಆಯುರ್ವೇದ ಪಂಡಿತರಾಗಿದ್ದರು. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ನಂಬಿಕೆ ಹೊಂದಿದ್ದ ಶ್ರೀಗಳು ಹಲವು ಪಾರಂಪರಿಕ ವೈದ್ಯರ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಪಾರಂಪರಿಕ ವೈದ್ಯ ಪದ್ಧತಿ ಮೂಲಕ ರೋಗಿಗಳಿಗೆ ಉಚಿತವಾಗಿ ಔಷಧ ನೀಡುತ್ತಿದ್ದರು.
ಧಾರ್ಮಿಕ ಮತ್ತು ಸಮಾಜಮುಖಿಯಾಗಿ ಧರ್ಮೋತ್ಥಾನ ಕೆಲಸ ಮಾಡುತ್ತಿದ್ದರು. ಕಾನೂನುಗಳ ಬಗ್ಗೆ ಸಾಕಷ್ಟು ತಿಳಿವಳಿಕೆ ಹೊಂದಿದ್ದ ಪೂಜ್ಯರು ಮಠಕ್ಕೆ ಬಂದ ಭಕ್ತರ ಜತೆಗೆ ಕಾನೂನು ವ್ಯಾಜ್ಯಗಳು ಮತ್ತು ಪರಿಹಾರದ ಬಗ್ಗೆ ಚರ್ಚಿಸುತ್ತಿದ್ದರು. ತಾಲೂಕಿನ ಮಠಾಧೀಶರು, ಗಣ್ಯರು ಮತ್ತು ಭಕ್ತರು ಆಗಮಿಸಿ ಪೂಜ್ಯರ ಅಂತಿಮ ದರ್ಶನ ಪಡೆದರು. ಅಂತ್ಯಕ್ರಿಯೆ ಸೆ.12ರಂದು ಮಧ್ಯಾಹ್ನ ನೆರವೇರಲಿದೆ ಎಂದು ಮಠದ ಮೂಲಗಳು ತಿಳಿಸಿವೆ.