ಪೇಸ್ ಪಿಯು ಕಾಲೇಜಿನಲ್ಲಿ ಪಿಯು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶ್ರೀ ನಿರ್ಭಯಾನಂದ ಸ್ವಾಮೀಜಿ, ಕೆ.ಎಸ್.ಈಶ್ವರಪ್ಪ, ಪ್ರೊ. ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ, ಜಯಲಕ್ಷ್ಮೀ, ಶಾಲಿನಿ ಇದ್ದರು.  
ನ್ಯೂಸ್

ಎಲ್ಲ ಸಿದ್ಧಾಂತಕ್ಕೂ ವೇದ, ಉಪನಿಷತ್ ಮೂಲ

ಶಿವಮೊಗ್ಗ: ಐನ್‌ಸ್ಟೈನ್ ಹೇಳಿದ ಸಾಪೇಕ್ಷತಾ ಸಿದ್ಧಾಂತ, ಸ್ಟೀಫನ್ ಹಾಕಿನ್ಸ್ ಮೊದಲಾದವರ ಎಲ್ಲ ಸಿದ್ಧಾಂತಗಳಿಗೂ ಭಾರತದ ವೇದ, ಉಪನಿಷತ್, ಅದ್ವೈತ ತತ್ವವೇ ಮೂಲ ಎಂದು ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ನಿರ್ಭಯಾನಂದ ಸ್ವಾಮೀಜಿ ಹೇಳಿದರು.

ನಗರದ ಪೇಸ್ ಪಿಯು ಕಾಲೇಜಿನಲ್ಲಿ ಪಿಯು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದ ಶ್ರೀಗಳು, ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯರು ಹೇಳಿದ್ದನ್ನು ಪಾಶ್ಚಾತ್ಯ ವಿಜ್ಞಾನಿಗಳು ಅಧ್ಯಯನ ಮಾಡಿ ಹೊಸದನ್ನು ಕಂಡು ಹಿಡಿದಿದ್ದಾರೆ ಎಂದು ತಿಳಿಸಿದರು.
ಜಗತ್ತಿಗೇ ಅರಿವಿನ ಬೆಳಕು ಬೇಕಿದ್ದು, ಅದು ಭಾರತದಲ್ಲಿ ಮಾತ್ರ ಇದೆ ಎಂದು ವಿವೇಕಾನಂದರು ಹೇಳಿದ್ದರು. ನಾವೆಲ್ಲರೂ ಭಾರತದಲ್ಲಿ ಜನ್ಮ ತಾಳಿದ್ದಕ್ಕೆ ಹೆಮ್ಮೆ ಪಡಬೇಕು. ಇಲ್ಲಿರುವಂತಹ ಜ್ಞಾನ ಸಂಪತ್ತು ಜಗತ್ತಿನ ಬೇರೆಲ್ಲೂ ಇಲ್ಲ. ಭಾರತದ ವಿದ್ಯಾರ್ಥಿಗಳಲ್ಲಿರುವ ಬುದ್ಧಿವಂತಿಕೆ ಅಸಾಮಾನ್ಯವಾದುದು ಎಂದರು.
ಮಕ್ಕಳಿಗೆ ವಿಜ್ಞಾನ, ಗಣಿತದಷ್ಟೇ ಪ್ರಮುಖವಾಗಿ ಇಡಿ ಭೂ ಗ್ರಹ ನಿನ್ನ ಸಾಮರ್ಥ್ಯಕ್ಕೆ ಚಿಕ್ಕದು ಎಂಬುದನ್ನು ತಿಳಿಸುವುದು ತಂದೆ, ತಾಯಿ ಹಾಗೂ ಶಿಕ್ಷಕರ ಜತೆ ಸಮಾಜದ ಎಲ್ಲರ ಕರ್ತವ್ಯವಾಗಿದೆ. ಬೌದ್ಧಿಕ, ಸಾಂಸ್ಕೃತಿಕ, ವೈಜ್ಞಾನಿಕವಾಗಿ ಭಾರತೀಯರು ಮುಂದಿದ್ದಾರೆ. ಭಾರತೀಯರಲ್ಲಿ ಎಲ್ಲ ಜ್ಞಾನವೂ ಅಡಗಿದೆ ಎಂದು ಅಭಿಪ್ರಾಯಪಟ್ಟರು.
ನಿಶ್ಚಿತವಾದ ಗುರಿ ಇಟ್ಟುಕೊಂಡು ಹಿರಿಯರ, ಜ್ಞಾನಿಗಳ ಮಾರ್ಗದರ್ಶನ ಪಡೆದು ಸಾಧನೆ ಮಾಡಬೇಕು. ಇದಕ್ಕಿಂತ ಮೊದಲು ವಿದ್ಯಾರ್ಥಿಗಳಲ್ಲಿ ಏನನ್ನಾದರೂ ಸಾಧಿಸುವ ಛಲ ಎಲ್ಲರಲ್ಲೂ ಇರಬೇಕು. ವಿವೇಕಾನಂದರ ಪುಸ್ತಕಗಳನ್ನು ಪ್ರತಿ ನಿತ್ಯ ಓದಬೇಕು. ವಿವೇಕಾನಂದರ ಪುಸ್ತಕಗಳನ್ನು ಓದಿ ಜೀವನವನ್ನೇ ಬದಲಾಯಿಸಿಕೊಂಡ ಅಣ್ಣಾ ಹಜಾರೆ, ಅಬ್ದುಲ್ ಕಲಾಂ ಅಂತಹವರು ಸಾಕಷ್ಟು ಜನರಿದ್ದಾರೆ ಎಂದು ಹೇಳಿದರು.
ಪುಸ್ತಕ ಓದುವಾಗ ವಿಮರ್ಶೆ ಮಾಡುವ ರೀತಿಯಲ್ಲೇ ಓದಬೇಕು. ಕೀಳರಿಮೆ ಸಲ್ಲದು. ಮುಂದಿನ ದಿನಗಳಲ್ಲಿ ಭೌತಶಾಸ್ತ್ರ ಉಳಿಯಬೇಕೆಂದರೆ ಭಾರತದ ವೇದಾಂತ ಓದಬೇಕು ಎಂದು ತಿಳಿಸಿದರು.
ಸಂಸ್ಥೆ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವಿನಯಾನಂದ ಸರಸ್ವತೀ ಸ್ವಾಮೀಜಿ, ರಾಣೆಬೆನ್ನೂರು ರಾಮಕೃಷ್ಣ ಆಶ್ರಮದ ಶ್ರೀ ಪ್ರಕಾಶಾನಂದ, ಸಂಸ್ಥೆ ಉಪಾಧ್ಯಕ್ಷ ಪ್ರೊ. ಎಚ್.ಆನಂದ್, ಕಾರ್ಯದರ್ಶಿ ಪ್ರೊ. ಬಿ.ಎನ್.ವಿಶ್ವನಾಥಯ್ಯ, ಟ್ರಸ್ಟಿಗಳಾದ ಪ್ರೊ. ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ, ಜಯಲಕ್ಷ್ಮೀ ಈಶ್ವರಪ್ಪ, ಶಾಲಿನಿ ಕಾಂತೇಶ್ ಉಪಸ್ಥಿತರಿದ್ದರು.