‘‘ವರುಣನು ಪಾಪಿಗಳನ್ನು ದಂಡಿಸುವುದಲ್ಲದೆ ನಿಜವಾಗಿಯೂ ಪಶ್ಚಾತ್ತಾಪಪಡುವವರನ್ನು ಪಾಪದಿಂದ ಮುಕ್ತರನ್ನಾಗಿ ಮಾಡುತ್ತಾನೆ’’ ಎಂಬ ವೇದಸೂಕ್ತಗಳ ದರ್ಶನವು ಹೆಚ್ಚು ಸಮಂಜಸವಾಗಿಯೇ ಇದೆ. ವರುಣನನ್ನು ಮಹಾಬಲಶಾಲಿ ಎಂಬ ಅರ್ಥದಲ್ಲಿ ‘‘ಅಸುರ’’ ಎಂದು ವೇದ ಮಂತ್ರಗಳಲ್ಲಿ ಸಂಬೋಧಿಸಿರುವುದನ್ನು ಪ್ರಸ್ತಾಪಿಸಿ ಈ ದೇವತೆಯು ಅಗ್ನಿಪೂಜಕರಾದ ಪಾರಸೀಕರ ಧರ್ಮದಲ್ಲಿಯೂ, ಅವರ ಗ್ರಂಥವಾದ ‘‘ಅವೆಸ್ತಾ’’ದಲ್ಲಿಯೂ ‘‘ಅಹುರ’’ ಎಂಬ ರೂಪಾಂತರದಿಂದ ಪರಮಾತ್ಮನೆಂಬುದಾಗಿ ವರ್ಣಿಸಲ್ಪಟ್ಟಿದ್ದಾನೆಂದು ಪಾಶ್ಚಾತ್ಯರ ಮತ. ಅಥರ್ವವೇದದಲ್ಲಿ (5-16) ಬರುವ ವರುಣ-ವಿಷಯಕ ಸೂಕ್ತವೊಂದು ಪಾಶ್ಚಾತ್ಯರಿಗೆ ಬಹಳ ಹಿಡಿಸಿದೆ. ವರುಣನ ಜೊತೆಯಲ್ಲಿ ಬರುವ ಋತತತ್ತ್ವದ ವಿಚಾರವನ್ನೂ ಅವರು ಬಹಳ ಮೆಚ್ಚಿಕೊಂಡಿದ್ದಾರೆ.
ಗ್ರೀಕರ ಯುರೇನೋಸ್ (Ouranos) ಎಂಬ ದೇವತೆಯೂ ಇವನ ರೂಪಾಂತರವಂತೆ. ಆದರೆ ವರುಣನಿಗೂ ‘‘ನೀರಿ’’ಗೂ ಇರುವ ಸಂಬಂಧವನ್ನು ಅವರು ಸರಿಯಾಗಿ ಅರ್ಥ ಮಾಡಿಕೊಂಡಂತೆ ಕಾಣುವುದಿಲ್ಲ. ‘‘ಸಮುದ್ರ’’ಕ್ಕೂ ಇವನು ಅಧಿಪತಿ ಎಂಬ ವೇದದ (ಋಕ್ಸಂಹಿತೆ 1-25-8, 7-41-5) ಭಾವವನ್ನು ತಪ್ಪಾಗಿಯೇ ಗ್ರಹಿಸಿರುವಂತೆ ಕಾಣುತ್ತದೆ. ವೇದದ ಭಾಷೆಯಲ್ಲಿ ‘‘ಸಮುದ್ರ’’ವೆಂದರೆ ಪಾಂಚಭೌತಿಕ ಸಮುದ್ರವಲ್ಲ. ಮನುಷ್ಯನ ಹೃದಯದ ಭಾವನೆಗಳೆಂಬ ಆಳವಾದ ಅಂತಸ್ಸಮುದ್ರ (ಅಂತಸ್ಸಮುದ್ರೇ ಕವಯೋ ವಯನ್ತಿ |). ವರುಣನು ಇದಕ್ಕೆ ಅಧಿಪತಿಯೆಂದರೆ, ನಾವು ಮತ್ತೊಬ್ಬರಿಗೆ ಗೊತ್ತಿಲ್ಲದಂತೆ ಗೂಢವಾಗಿ ಮನಸ್ಸಿನಲ್ಲಿಯೇ ಎಸಗುವ ಪಾಪಗಳನ್ನು ಗಮನಿಸಿ ದಂಡಿಸುವ ಭಗವಂತನ ಅಂಶ. ಅಲ್ಲದೆ ಇವನು ‘‘ರಾತ್ರಿ’’ಗೆ ಅಧಿಪತಿ ಎಂದದ್ದರಲ್ಲೂ ಅರ್ಥವಿದೆ.
‘‘ಹಗಲು’’ ಎಂದರೆ ಮಾನವನ ಎಚ್ಚರಾವಸ್ಥೆ. ಜಾಗ್ರತ ಸ್ಥಿತಿ. ಈ ಸ್ಥಿತಿಯಲ್ಲಿ ನಮ್ಮ ರಕ್ಷಕನೇ ಭಗವಂತನ ‘‘ಮಿತ್ರ’’ ಎಂಬ ಅಂಶದ ದೇವತೆ. ‘‘ರಾತ್ರಿ’’ ಎಂದರೆ ಸ್ವಪ್ನಾವಸ್ಥೆ, ನಿದ್ರೆಯ ಸ್ಥಿತಿ. ಮನುಷ್ಯನು ಒಂದು ವೇಳೆ ಎಚ್ಚರವಾಗಿದ್ದಾಗ ಇಂದ್ರಿಯನಿಗ್ರಹದಿಂದ ಪಾಪಗಳನ್ನು ಮಾಡದಿದ್ದರೂ, ಇಂದ್ರಿಯ ನಿಗ್ರಹವಾಗಲೀ, ತಾನು - ಎಂಬ ಪ್ರಜ್ಞೆಯಾಗಲೀ ಪ್ರಭಾವಶಾಲಿ ಆಗಿಲ್ಲದ ಸ್ವಪ್ನಾವಸ್ಥೆಯಲ್ಲಿ ಕಾಮಕ್ರೋಧವಶನಾಗುವುದು ಸರ್ವಸಾಧಾರಣ. ಮನುಷ್ಯನ ಅಹಂಕಾರವೂ, ಪಾಪಬುದ್ಧಿಯೂ, ಸರ್ವನಾಶದತ್ತ ಮಾನವನನ್ನು ಒಯ್ಯುವ ‘‘ಸುವರ್ಣಾವಕಾಶ’’ ಇಲ್ಲಿರುತ್ತದೆ. ಆದುದರಿಂದಲೇ ವರುಣನಿಗೆ ಮಿತ್ರನಿಗಿಂತ ಹೆಚ್ಚು ಹೊಣೆಗಾರಿಕೆ ಇದೆ. ಈ ವಿಷಯವನ್ನು ಸಾಂಕೇತಿಕಾರ್ಥದೊಡನೆ ಸೂಚಿಸುವ ಒಂದು ಕಥೆಯು ವೇದದಲ್ಲೇ ಬರುತ್ತದೆ.