ಇಲ್ಲಿ ವರ್ಣಿತವಾಗಿರುವ ರಥವು ನಚಿಕೇತನ ಮನೋರಥವೇ ಎಂಬುದರಲ್ಲಿ ಯಾರಿಗೂ ಸಂಶಯ ಬರದು. ಶ್ರದ್ಧಾಪೂರ್ಣವಾದ ಅವನ ಮನಸ್ಸಿಗೆ ಯಾವುದು ಅಸಾಧ್ಯ? ಚಕ್ರವೇ ಇಲ್ಲದ ರಥ ಇದೆಂದ ಮೇಲೆ ಮನೋರಥವಲ್ಲದೆ ಬೇರೆ ಅಲ್ಲ. ಒಂದೇ ಅಚ್ಚಿನ ಮರವುಳ್ಳದ್ದೆಂದರೆ, ಏಕಾಗ್ರತೆಯನ್ನುಳ್ಳ ಮನಸ್ಸೆಂದೂ, ಅವಿಚಲಿತ ನಿಶ್ಚಯ ಮನೋಭಾವದಿಂದ ಕೂಡಿದ್ದೆಂದೂ ತಿಳಿಯತಕ್ಕದ್ದು.
ಜಾಣನಾಗಿಯೇ ಯಮನಲ್ಲಿಗೆ ಬಂದ ನಚಿಕೇತನನ್ನು ಕುರಿತು ಯಮನು ಲೌಕಿಕ ದೃಷ್ಟಿಯಿಂದ ಅವನು ‘‘ಅವಿವೇಕಿ’’ ಎಂದು ಹೀಗಳೆಯುವಂತೆ, ಪರೀಕ್ಷಾರ್ಥವಾಗಿ ಈ ರೀತಿ ಪ್ರಲೋಭನೆ ಮಾಡುತ್ತಾನೆಂದು ಶ್ರೀ ಸಾಯಣರು ವಿವರಿಸಿದ್ದಾರೆ. ಲೌಕಿಕ ಸುಖವನ್ನೇ ಬಯಸಿ, ಇದನ್ನೇ ಶಾಶ್ವತವೆಂದು ಬಗೆದು, ತಮ್ಮನ್ನು ತಾವೇ ‘‘ವಿವೇಕಿ’’ ಗಳೆಂದು ಭಾವಿಸುವವರ ದೃಷ್ಟಿಯಲ್ಲಿ ನಚಿಕೇತನು ಪರಮ ‘‘ಅವಿವೇಕಿ’’ಯೇ ಸರಿ!
ಮುಂದುವರೆದು ಯಮನು ಕೇಳುತ್ತಾನೆ: ‘‘ಕುಮಾರ! ಭೂಮಿಯ ಮೇಲೆ ‘ವಿಪ್ರ’ರೆಂದೆನಿಸಿಕೊಳ್ಳುವ, ಬುದ್ಧಿವಂತರಾದ, ಮೇಧಾವಿಗಳ ತಲೆಯ ಮೇಲೆ, ಅಂತರಿಕ್ಷದಲ್ಲಿ ಹಾರಿಬಂದು, ಕೇವಲ ನಿನ್ನ (ವಿಚಿತ್ರ) ರಥದೊಡನೆಯೇ ಬಂದಿರುವೆ! ಅಲ್ಲಿಂದ ಬರುವಾಗ ನಿನ್ನ ತಂದೆಯು ನಿನಗೆ ಸಾಂತ್ವನರೂಪವಾಗಿ ಉಪದೇಶಿಸಿದ ಪಥ್ಯವಾಕ್ಯಗಳೂ ನಿನೊಡನೆಯೇ ಬಂದಿವೆಯಷ್ಟೆ!’’ ಇಲ್ಲಿ ನಚಿಕೇತನನ್ನು ಭೂಮಿಯ ಮೇಲಿರುವ ‘‘ವಿಪ್ರ’’ರಿಗಿಂತಲೂ ವಿಲಕ್ಷಣ ಜ್ಞಾನಿಯನ್ನಾಗಿ ಯಮನು ಕೊಂಡಾಡಿರುವುದು ಗಮನೀಯ. ಲೌಕಿಕವಾಗಿ ಮಹಾಮೇಧಾವಿಗಳ ಬುದ್ಧಿಯೂ ಐಶ್ವರ್ಯವನ್ನೇ ಬಯಸುತ್ತದೆ; ಇದು ಆ ಕಾಲದಲ್ಲೂ ‘‘ವಿಪ್ರ’’ರ ಪಾಡಾಗಿದ್ದಿತೆಂದೂ, ಯಮನು ವ್ಯಂಗ್ಯವಾಗಿ ಸೂಚಿಸಿ ನಚಿಕೇತನನ್ನು ಆ ಗುಂಪಿಗೆ ಸೇರದವನೆಂದೂ, ಹೇಳಿರುವುದು ಬ್ರಹ್ಮಜಿಜ್ಞಾಸುವಿಗೆ ಅವಶ್ಯವಾಗಿ ಇರಬೇಕಾದ ಮುಖ್ಯ ಲಕ್ಷಣ ಹೇಳಿದಂತಾಗಿದೆ.
ನಿಃಸ್ಪತೆ, ಭೋಗದ ಆಶಾಶೂನ್ಯತೆ, ಬ್ರಹ್ಮಜ್ಞಾನದಲ್ಲಿ ದೃಢ ಜಿಜ್ಞಾಸೆ, ತೃಷೆ ಇಲ್ಲದಿದ್ದವನು ಅಮರನಾಗಲಾರನೆಂದು ಭಾವ. ಅಲ್ಲದೆ ನಚಿಕೇತನು ಯಮಸದನಕ್ಕೆ ಹೊರಟೇ ನಿಂತ ವೇಳೆಗೆ ತಂದೆಯೂ ಶಾಂತನಾಗಿ ತನ್ನ ಕೋಪಕ್ಕೆ ಪಶ್ಚಾತ್ತಪಿಸಿ ಮಗನಿಗೆ ಶಾಂತಸ್ವರೂಪವಾದ ಕೆಲವು ಪಥ್ಯವಾಕ್ಯಗಳನ್ನು ಉಪದೇಶ ಮಾಡಿದುದಾಗಿಯೂ ಇಲ್ಲಿ ಹೇಳಿದೆ. ಅಂದರೆ, ತನ್ನ ಯಜ್ಞಭೂಮಿಯಲ್ಲಿ ಆ ದಿನ ನಡೆದ ವಿಚಿತ್ರ ಪ್ರಸಂಗದಲ್ಲಿ ತನ್ನ ಕೈಮೀರಿದ ದಿವ್ಯ ಶಕ್ತಿಗಳ ಕೈವಾಡ ಹೇಗೋ ಸೇರಿದೆ ಎಂದು ಅವನು ಮನಗಂಡಿರಬೇಕು.
ಯಮಲೋಕಕ್ಕೆ ತನ್ನ ಮಗನು ಹೋಗುವುದರಲ್ಲಿ ಏನೋ ಲೋಕಕಲ್ಯಾಣ ಅಡಗಿದೆ ಎಂದು ಅನಿಸಿರಬೇಕು. ಆದ್ದರಿಂದ ಯಮನೊಡನೆ ವಿನಯದಿಂದ ನಡೆದುಕೊಳ್ಳುವಂತೆಯೂ, ಅವನ ಅನುಗ್ರಹವನ್ನು ಸಂಪಾದಿಸಿಕೊಳ್ಳುವಂತೆಯೂ ಅವಕಾಶವಾದರೆ, ಅವನಿಂದ ಉಪದೇಶವನ್ನು ಪಡೆದುಕೊಳ್ಳುವಂತೆಯೂ, ಬುದ್ಧಿ ಹೇಳಿದನೆಂದು ಕಾಣುತ್ತದೆ. ಹೀಗೆ ಹಿತಬುದ್ಧಿಯನ್ನು ಪಡೆದುಕೊಂಡು ಬಂದ ಇವನನ್ನು ‘‘ನಾವೆಯಲ್ಲಿ ಕುಳಿತು ಬಂದ ಪಯಣಿಗನಿಗೆ’’ ಯಮನು ಹೋಲಿಸಿದ್ದಾನೆ. ‘‘ಯಾವುದು ಘೊರವಾದ ಸಂಸಾರ ಪ್ರವಾಹದಿಂದ ದಡ ಸೇರಲು ನಮಗೆ ಸಾಧನವಾಗುವುದೋ, ಅದೇ ಬುದ್ಧಿ ಎಂಬ ನಾವೆ’’ ಎಂದು ಇಲ್ಲಿ ಶ್ರೀ ಸಾಯಣರು ಬರೆದಿದ್ದಾರೆ.