ನ್ಯೂಸ್

ವೇದ ದರ್ಶನ 103: ಶಾಶ್ವತಧರ್ಮದ ಗುಟ್ಟಿನ ಅನ್ವೇಷಣೆ

ಡಾ. ನಾರಾಯಣಾಚಾರ್ಯ ಕೆ.ಎಸ್

ನಚಿಕೇತನ ಈ ಮಾತಿಗೆ (‘‘ಅನುಪಶ್ಯ ಯಥಾಪೂರ್ವೆ...’’: 1.6) ಇನ್ನೊಂದು ರೀತಿಯಲ್ಲೂ ಅರ್ಥವಿದೆಯೆಂದು ಸಾರಜ್ಞರು ತೋರಿಸಿದ್ದಾರೆ: ಕೋಪದಲ್ಲಿ ಮಗನನ್ನು ಕೊಟ್ಟದ್ದಾಯಿತು, ಯಮನಿಗೆ. ಯಜ್ಞಭೂಮಿಯಲ್ಲಿ ಆಡಿದ ಮಾತು ಸುಳ್ಳಾಗುವಂತಿಲ್ಲ. ಮಗನಾದರೋ ತಂದೆಯ ಮಾತನ್ನು ನಡೆಸಲು ಬದ್ಧಸಂಕಲ್ಪನಾಗಿ, ಶರೀರತ್ಯಾಗಪೂರ್ವಕ, ಮೃತ್ಯುಗಮನಕ್ಕೆ ಸಿದ್ಧನಾಗಿದ್ದಾನೆ. ಆಗ ತಂದೆಗೆ ತನ್ನ ಅವಿವೇಕದ ಅರಿವಾಯಿತೆನ್ನಲು ವೇದಪ್ರಮಾಣವಿದೆ. (ಋ.ಸಂ.10.135.4) ಪಶ್ಚಾತ್ತಾಪದಿಂದ ಕಣ್ಣೀರು ಹಾಕಿರಬೇಕು. ತನ್ನ ಮಾತು ಸುಳ್ಳಾದರೂ ಸರಿ, ತನ್ನ ಯಾಗ ಮುಗಿಯದಿದ್ದರೂ ಸರಿ, ಮಗನು ‘‘ಮೃತ್ಯುಮುಖ’’ಕ್ಕೆ ಹೋಗದಿರಲೆಂದು, ಅವನ ದೃಢಸಂಕಲ್ಪವನ್ನು ಕದಲಿಸುವಂತೆ ಪರಿಪರಿಯಿಂದ ಮಾತಾಡಿರಬೇಕು. ಆಗ ತಂದೆಗೆ ಮಗನು

ಈ ಮಾತನ್ನಾಡಿದನು ಎಂದು ಒಂದು ವ್ಯಾಖ್ಯಾನ:

‘‘ತಂದೆಯೇ, ನನ್ನ ಮರಣಕ್ಕೆ ಏಕೆ ಶೋಕಿಸುವೆ? ಹಿಂದಿನವರೆಲ್ಲ ಹೇಗೆ ಈ ಧರ್ಮಕ್ಕೆ ಒಳಪಟ್ಟಿರುವರೆಂಬುದನ್ನೂ, ಮುಂದೆ ಬರುವವರೂ ಹಾಗೇ ಇರುವವರು ಎಂಬುದನ್ನೂ, ಕೊಂಚ ನೋಡು. ಅಲ್ಲದೆ ಸತ್ಯಮಾರ್ಗದಲ್ಲಿಯೇ ಇದ್ದು, ಅಶಾಶ್ವತ ಜೀವನದ ಮೂಲಕವೂ ಅಜರಾಮರ ಕೀರ್ತಿವಂತರಾದ ಪೂರ್ವಿಕರನ್ನೂ, ಇದು ಮುಗಿದುಹೋದ ಮಾರ್ಗವಲ್ಲದೆ, ಮುಂದೆಯೂ ಹಲವರಾದರೂ ಈ ಮಾರ್ಗದಲ್ಲಿ ನಡೆದಾರೆಂಬುದನ್ನೂ ಕಂಡು ಸಮಾಧಾನಪಟ್ಟುಕೋ. ಗಿಡದಂತೆ ಹುಟ್ಟಿ, ಬೆಳೆದು, ಬಿದ್ದರೆ, ಮಾನವಜೀವಕ್ಕೆ ಏನು ವಿಶೇಷ ಅರ್ಥ? ಆದ್ದರಿಂದ ಶಾಶ್ವತಧರ್ಮದ ಗುಟ್ಟಿಗಾಗಿ ಮಾನವನು ಅನ್ವೇಷಣೆ ನಡೆಸಬೇಕು. ಇದಕ್ಕಾಗಿಯೇ ನನ್ನ ಮೃತ್ಯುಗಮನ’’ ಎಂದೂ ಭಾವವಿದೆ ಎನ್ನಬಹುದು.

ಋಕ್ಸಂಹಿತೆಯ ವಿಶೇಷ ವಿವರಣೆ: ಋಕ್ಸಂಹಿತೆಯಲ್ಲಿ ಈ ಪ್ರಕರಣದ ವಿವರಣೆಗೆ ಸಂಬಂಧಿಸಿದಂತೆ ಕೆಲವು ವಿಶೇಷ ವಿಷಯಗಳಿವೆ. ಯಮಲೋಕಕ್ಕೆ ಹೋಗುತ್ತ ನಚಿಕೇತ ತನ್ನೊಳಗೇ ಹೇಳಿಕೊಳ್ಳುತ್ತಾನೆ: ‘‘ಯಮಲೋಕವು ಉತ್ತಮವಾದ ಎಲೆಗಳಿಂದ ಕೂಡಿದ ದೊಡ್ಡ ಮರದಂತೆ. ಅನೇಕರಿಗೆ ನೆರಳನ್ನೊದಗಿಸುವ ವಿಶ್ರಾಂತಿ ಸ್ಥಾನ. ಸತ್ಕರ್ವಚರಣೆಗಳಿಂದ ಬಾಳಿದ ಪಿತೃಗಳು ಇಲ್ಲಿ ವಾಸಿಸುವರು, ಮರಣವು ಜೀವನವನ್ನು ಕತ್ತರಿಸುವುದರಿಂದ, ಜೀವಿಗಳು ಎಲೆಗಳಂತೆ ಉದುರುವರಾದುದರಿಂದ ಯಮನು ಅನ್ವರ್ಥವಾಗಿ ‘‘ವೃಕ್ಷ’’ವೇ. (‘‘ವೃಶ್ಚನ’’ ಎಂದರೆ ಕತ್ತರಿಸುವುದು.) ಇಲ್ಲಿ ಯಮನು ಪರಿವಾರದೊಡನೆ ಸುಖವಾಗಿದ್ದಾನೆ. ಇಂತಹ ಪುರಾತನರ, ಚಿರಕಾಲ ವಾಸಸ್ಥಾನದಲ್ಲಿ, ಪಿತೃಗಳೊಡನೆ ನಾನು ವಾಸಿಸುವಂತೆ ಆಗಬೇಕೆಂದು ನಮ್ಮ ತಂದೆಯ ಬಯಕೆ! ಜನರಲ್ಲಿ ಶ್ರೇಷ್ಠನಾದವನು ನನ್ನ ತಂದೆ. (ಹಾಗಾದರೆ, ಇದರರ್ಥವೇನು?)’’

‘‘ಪುರಾತನರು ಹೋಗಿ ಸೇರಿದ ಮಾರ್ಗವೇ ಇದು. ನಾನೂ ಇದೇ ರೀತಿ ಹೋದರೆ ತಪ್ಪೇನು? ನನ್ನ ತಂದೆಯು ಈ ಬಯಕೆಯಿಂದ ಅನ್ಯಾಯವಾದದ್ದೇನನ್ನೂ ಮಾಡಿದಂತಾಗಲಿಲ್ಲ. ಆದರೂ ಇದು ತಂದೆಯ ದುರ್ಬುದ್ಧಿಯೆಂದು ಬಗೆದು ನನ್ನ ಮನಸ್ಸಿನಲ್ಲಿ ಉದ್ವೇಗವಾಗಿ, ತಂದೆಯ ಬಗೆಗೆ ಸ್ವಲ್ಪ ಕೋಪವೇ ನನಗೆ ಬಂದಿತು. ಕೋಪ ಇಳಿದಮೇಲೆ ಪಿತೃವಾಕ್ಯ ಪರಿಪಾಲನವೆಂಬ ಕರ್ತವ್ಯಭಾರದಿಂದ ನಾನಾಗಿಯೇ ಇಲ್ಲಿಗೆ ಬರಲು ಇಷ್ಟಪಟ್ಟೆನು.’’ (ಋ.ಸಂ. 10.135.1-2) ನಚಿಕೇತನು ಎಂಥ ವಿಚಾರವಂತನೆಂದೂ, ವಿವೇಕಿಯೆಂದೂ, ಮೇಧಾಸಂಪನ್ನನೆಂದೂ ಇದರಿಂದ ತಿಳಿಯಬಹುದಲ್ಲವೇ? ಇಲ್ಲಿ ತೈತ್ತಿರೀಯ ಬ್ರಾಹ್ಮಣದಲ್ಲಿ ಮತ್ತೂ ವಿಶೇಷವಾದ ಮಾರ್ವಿುಕ ವಿವರಣೆ ಇದೆ (3.2.8.1ರಿಂದ 5).