ತಿ.ನರಸೀಪುರ : ವರುಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ 620 ಕೋಟಿ ರೂ. ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಅನುದಾನ ಬಿಡುಗಡೆ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಆಶ್ರಯ ಯೋಜನೆ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ವರುಣ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿ, ಶಂಕುಸ್ಥಾಪನೆ, ಕಾರ್ಮಿಕ ಇಲಾಖೆಯಿಂದ ಲ್ಯಾಪ್ ಟಾಪ್ ವಿತರಣೆ, ಅಂಗವಿಕಲರಿಗೆ ಎಲೆಕ್ಟ್ರಿಕ್ ಸ್ಕೂಟರ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಅವರು ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ ವರುಣ ಕ್ಷೇತ್ರಕ್ಕೆ 1,800 ಕೋಟಿ ರೂ. ನುದಾನ ನೀಡಿದ್ದರಿಂದ ಹೆಚ್ಚಿನ ಅಭಿವೃದ್ಧಿ ಕೆಲಸ ನಡೆದಿತ್ತು. ಈಗ ಮತ್ತೆ 620 ಕೋಟಿ ರೂ. ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಪ್ರಸ್ತಾವನೆ ಮಂಜೂರಾತಿ ದೊರಕುವ ಹಂತದಲ್ಲಿದ್ದು ಶೀಘ್ರವೇ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದರು.
ಈ ಬಾರಿ ವರುಣ ಕ್ಷೇತ್ರಕ್ಕೆ ಮುಜರಾಯಿ ಇಲಾಖೆಯಿಂದ ವಿವಿಧ ದೇವಸ್ಥಾನದ ಕಾಮಗಾರಿ ಕೈಗೊಳ್ಳಲು 3.31 ಕೋಟಿ ರೂ., ಅಲ್ಪ ಸಂಖ್ಯಾತ ಇಲಾಖೆಯಿಂದ 10 ಕೋಟಿ ರೂ., ನೀರಾವರಿ ಇಲಾಖೆಯಿಂದ ಕಾಲುವೆ, ಸೇತುವೆ ದುರಸ್ತಿ, ರಸ್ತೆ, ಚರಂಡಿ ನಿರ್ಮಾಣಕ್ಕೆ 1.16 ಕೋಟಿ ರೂ.ಗಳು ಮಂಜೂರಾಗಿದೆ. ಲೋಕೋಪಯೋಗಿ ಇಲಾಖೆಯಿಂದ ರಾಜ್ಯ ಹೆದ್ದಾರಿ, ಸೇತುವೆ ಅಭಿವೃದ್ಧಿಗೆ 50 ಕೋಟಿ, ಆರ್‌ಡಿಪಿಆರ್‌ನಿಂದ ಗರ್ಗೇಶ್ವರಿ ಗ್ರಾಮದಲ್ಲಿ ಬಂಡಿ ಬಚ್ಚಲು ಕಾರ್ಯಕ್ರಮಕ್ಕೆ 1.25 ಕೋಟಿ, ಪ್ರಾಚ್ಯವಸ್ತು ಇಲಾಖೆಯಿಂದ 1.71 ಕೋಟಿ, ಪೌರಾಡಳಿತ ಇಲಾಖೆಯಿಂದ ಉತ್ತನಹಳ್ಳಿ ಗ್ರಾಮದಲ್ಲಿ ಸ್ಮಶಾನ ಅಭಿವೃದ್ಧಿಗೆ 19.30 ಲಕ್ಷ, ಶಿಕ್ಷಣ ಇಲಾಖೆಯಿಂದ ಸರ್ಕಾರಿ ಶಾಲೆಗಳ ದುರಸ್ತಿಗಾಗಿ 1.87 ಕೋಟಿ, ಸಿಎಸ್‌ಆರ್ ಚಟುವವಟಿಕೆಯಡಿ 7 ಕೋಟಿ, ಶಾಸಕರ ನಿಧಿಯಿಂದ 2 ಕೋಟಿ ರೂ.ಗಳನ್ನು ವಿವಿಧ ಅಭಿವೃದ್ಧಿ ಯೋಜನೆಗೆ ಬಳಸಿಕೊಳ್ಳಲು ನೀಡಲಾಗಿದೆ. ಮುಡಾ ವತಿಯಿಂದ ಸುಮಾರು 90 ಕೋಟಿ ರೂ.ಗಳನ್ನು ಯುಜಿಡಿ ಮತ್ತು ರಸ್ತೆ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದೆ, ವಸತಿ ಇಲಾಖೆಯಿಂದ ವರುಣ ಕ್ಷೇತ್ರಕ್ಕೆ 3 ಸಾವಿರ ಮನೆಗಳನ್ನು ಹೆಚ್ಚುವರಿಯಾಗಿ ನೀಡಲಾಗಿದ್ದು, ಗ್ರಾ.ಪಂ.ಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಕೇವಲ ಧರ್ಮ, ದೇವಸ್ಥಾನ, ಪಾಕಿಸ್ತಾನ, ಭಯೋತ್ಪಾದನೆ ಬಗ್ಗೆ ಮಾತನಾಡುವವರ ಪರವಾಗಿ ಜನತೆ ನಿಂತರೆ, ಜನಪರವಾಗಿ ಕೆಲಸ ಮಾಡುತ್ತಿರುವ ನಾಯಕರು ತಮ್ಮ ನಿಲುವು ಬದಲಿಸಿಕೊಳ್ಳುವ ಪರಿಸ್ಥಿತಿ ಎದುರಾಗುತ್ತೆ. ಧರ್ಮದ ಹೆಸರಲ್ಲಿ ಮತ ಪಡೆಯೋದು ಬಹು ಸುಲಭ. ಧರ್ಮ ಎಂಬುದು ಭಾವನಾತ್ಮಕ ವಿಷಯ. ಎಲ್ಲರಿಗೂ ಅವರವರ ಧರ್ಮ ಶ್ರೇಷ್ಠ ಎಂಬ ಭಾವನೆ ಇರುತ್ತದೆ. ಆದರೆ ಎಂದಿಗೂ ಧರ್ಮವನ್ನು ರಾಜಕಾರಣಕ್ಕೆ ತರಬಾರದು ಎಂದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ವರುಣ ಮಹೇಶ್ ಮಾತನಾಡಿ, ಯತೀಂದ್ರ ಸಿದ್ದರಾಮಯ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ತಂದೆ ಸಿದ್ದರಾಮಯ್ಯ ಅವರೊಂದಿಗೆ ಕಟಿಬದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ವರುಣ ನಾಲೆಯ ಹರಿಕಾರರಾಗಿ ನಾಲೆಯಲ್ಲಿ ನೀರು ಹರಿಸಿ ರೈತರು ಬೆಳೆ ಬೆಳೆಯಲು ಕಾರಣೀಭೂತರಾಗಿದ್ದಾರೆ. ಕ್ಷೇತ್ರದ ಸಣ್ಣ ಸಣ್ಣ ಗ್ರಾಮಗಳ ರಸ್ತೆಗಳು ಅಭಿವೃದ್ಧಿ ಕಾಣಲು ಯತೀಂದ್ರ ಅವರ ಕೊಡುಗೆ ಅಪಾರ ಎಂದರು.
ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ತಾ.ಪಂ. ಮಾಜಿ ಅಧ್ಯಕ್ಷೆ ಮಂಜುಳಾ, ಮಾಜಿ ಸದಸ್ಯ ಮುದ್ದರಾಮೇಗೌಡ, ತಾ.ಪಂ. ಮಾಜಿ ಅಧ್ಯಕ್ಷ ಚಿಕ್ಕಹಳ್ಳಿ ಕೃಷ್ಣಮೂರ್ತಿ, ಚಿಕ್ಕದೇವಯ್ಯ, ಗ್ರಾ.ಪಂ. ಸದಸ್ಯರಾದ ದೇವರಾಜು, ವೆಂಕಟೇಶ್, ಶಿವಕುಮಾರ್, ಕಾರ್ಮಿಕ ಇಲಾಖೆಯ ಎಂಡಿ ರಾಜೇಶ್ ಕೆ.ಜಾಧವ್,ಕ್ಷೇತ್ರ ಶಿಕ್ಷಣಾಧಿಕಾರಿ ವಿವೇಕಾನಂದ ಸೇರಿದಂತೆ ಮತ್ತಿತರರಿದ್ದರು.