ಸೇಂಟ್ ಆಗ್ನೇಸ್ ಜನವಸತಿ ಪ್ರದೇಶದ ಬಳಿ ವಿದ್ಯುತ್ ಪರಿವರ್ತಕ (ಟ್ರಾನ್ಸ್‌ಫಾರ್ಮರ್) ಸಂಪೂರ್ಣವಾಗಿ ನೆಲಕ್ಕುರುಳಿದ್ದು, ರಸ್ತೆಯಲ್ಲಿ ಯಾರೂ ಇಲ್ಲದ ಕಾರಣ ಭಾರೀ ಪ್ರಾಣಾಪಾಯವೊಂದು ತಪ್ಪಿದೆ.
ಮಂಗಳೂರು: ಮಂಗಳೂರು ನಗರದಲ್ಲಿ ಗುರುವಾರ ರಾತ್ರಿಯಿಂದಲೇ ವರುಣದೇವ ಅಬ್ಬರಿಸಲಾರಂಭಿಸಿದ್ದು, ಶುಕ್ರವಾರವೂ ಮಳೆಯ ಆರ್ಭಟ ಮುಂದುವರಿದಿದೆ. ಧಾರಾಕಾರವಾಗಿ ಸುರಿದ ಮಳೆಗೆ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡು ಕೃತಕ ನೆರೆ ಸೃಷ್ಟಿಯಾಗಿದ್ದರೆ, ಹಲವೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿ ಸಾರ್ವಜನಿಕ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಗುರುವಾರ ರಾತ್ರಿಯಿಂದ ಆರಂಭವಾದ ಮಳೆ ಶುಕ್ರವಾರ ಬೆಳಗಿನ ಜಾವದ ವೇಳೆಗೆ ತೀವ್ರಗೊಂಡಿತು. ಪರಿಣಾಮವಾಗಿ ನಗರದ ಹೃದಯಭಾಗಗಳಾದ ಜ್ಯೋತಿ ವೃತ್ತ, ಕೊಡಿಯಾಲಬೈಲ್, ಕೊಟ್ಟಾರ ಸೇರಿದಂತೆ ತಗ್ಗು ಪ್ರದೇಶಗಳು ಅಲ್ಪಕಾಲ ಜಲಾವೃತಗೊಂಡವು. ಸಮರ್ಪಕವಾಗಿ ಮಳೆನೀರು ಹರಿದುಹೋಗದ ಕಾರಣ ರಸ್ತೆಗಳ ಮೇಲೆ ಮೊಣಕಾಲುದ್ದ ನೀರು ನಿಂತು ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸಿದರು. ಜ್ಯೋತಿ ಹಾಗೂ ಕೊಡಿಯಾಲಬೈಲ್ ಸುತ್ತಮುತ್ತಲಿನ ಚರಂಡಿಗಳು ಬ್ಲಾಕ್ ಆಗಿದ್ದರಿಂದ ಕೊಳಚೆ ನೀರು ರಸ್ತೆಯ ಮೇಲೆಯೇ ಹರಿಯುವಂತಾಗಿತ್ತು.
*ಮ್ಯಾನ್‌ಹೋಲ್‌ಗಳಿಂದ ಚಿಮ್ಮಿದ ನೀರು!
ನಗರದ ಬಹುತೇಕ ಜನವಸತಿ ಪ್ರದೇಶಗಳಲ್ಲಿ ಮಳೆನೀರು ಹರಿದುಹೋಗುವ ಪೈಪ್‌ಲೈನ್‌ಗಳನ್ನು ಒಳಚರಂಡಿ (ಮ್ಯಾನ್‌ಹೋಲ್) ವ್ಯವಸ್ಥೆಗೆ ಕಾನೂನುಬಾಹಿರವಾಗಿ ಸಂಪರ್ಕಿಸಿರುವುದು ಈ ಬಾರಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು. ಮಳೆಯ ನೀರು ಮ್ಯಾನ್‌ಹೋಲ್‌ಗೆ ನುಗ್ಗಿದ ತಕ್ಷಣ, ಒತ್ತಡ ತಡೆಯಲಾರದೆ ನಗರದ ಹಲವೆಡೆ ರಸ್ತೆ ಮಧ್ಯದಲ್ಲಿದ್ದ ಮ್ಯಾನ್‌ಹೋಲ್‌ಗಳಿಂದ ಕಾರಂಜಿಯಂತೆ ನೀರು ಹೊರಚೆಲ್ಲುವ ದೃಶ್ಯಗಳು ಸಾಮಾನ್ಯವಾಗಿದ್ದವು.
*ದರೆಗುರುಳಿದ ಮರಗಳು: ವಿದ್ಯುತ್ ಕಂಬಗಳು ಧರಾಶಾಯಿ!
ಕೊಡಿಯಾಲಬೈಲ್ ಸಮೀಪ ಮುಖ್ಯ ವಿದ್ಯುತ್ ಲೇನ್ ಮೇಲೆಯೇ ಬೃಹತ್ ಮರ ಕಡಿದು ಬಿದ್ದ ಪರಿಣಾಮ, ಸಾಲು ಸಾಲು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಇದರೊಂದಿಗೆ ನಗರದ ವಿವಿಧೆಡೆ ಮರದ ಗೆಲ್ಲುಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮೆಸ್ಕಾಂ ಸಿಬ್ಬಂದಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರೂ, ಹಲವು ವಾರ್ಡ್‌ಗಳು ಶುಕ್ರವಾರವಿಡೀ ಕತ್ತಲಲ್ಲಿ ಕಳೆಯುವಂತಾಯಿತು. ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಸೇಂಟ್ ಆಗ್ನೇಸ್ ಜನವಸತಿ ಪ್ರದೇಶದ ಬಳಿ ವಿದ್ಯುತ್ ಪರಿವರ್ತಕ (ಟ್ರಾನ್ಸ್‌ಫಾರ್ಮರ್) ಸಂಪೂರ್ಣವಾಗಿ ನೆಲಕ್ಕುರುಳಿದೆ. ಅದೃಷ್ಟವಶಾತ್ ಈ ವೇಳೆ ರಸ್ತೆಯಲ್ಲಿ ಯಾರೂ ಇಲ್ಲದ ಕಾರಣ ಭಾರೀ ಪ್ರಾಣಾಪಾಯವೊಂದು ತಪ್ಪಿದೆ.
*ಹೆದ್ದಾರಿಯುದ್ದಕ್ಕೂ ಟ್ರಾಫಿಕ್ ಜಾಮ್!
ಶುಕ್ರವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರ ಸಂಚಾರ ವ್ಯವಸ್ಥೆ ಸಂಪೂರ್ಣ ಹಳಿ ತಪ್ಪಿತು. ನಂತೂರು, ಕೊಟ್ಟಾರ, ಪದುವಾ, ಕೆಪಿಟಿ ಮತ್ತು ಪಂಪ್‌ವೆಲ್ ಜಂಕ್ಷನ್‌ಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮಳೆ ನೀರು ಹೆದ್ದಾರಿಯಲ್ಲೇ ಕೆರೆಯಂತೆ ನಿಂತಿದ್ದರಿಂದ ವಾಹನಗಳು ಅತ್ಯಂತ ನಿಧಾನಗತಿಯಲ್ಲಿ ಚಲಿಸುವಂತಾಗಿ, ಕಚೇರಿ ಹಾಗೂ ಶಾಲೆ-ಕಾಲೇಜುಗಳಿಗೆ ತೆರಳುವ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ತೀವ್ರ ಪರದಾಡಿದರು.