ನ್ಯೂಸ್

ಕೈ ವರಿಷ್ಠರ ಕಣ್ಣು ಕೋಲಾರಕ್ಕೆ ತಿರುಗಿಸೋಣ: ಮಾಜಿ ಶಾಸಕ ವರ್ತೂರು ಪ್ರಕಾಶ್ ಕರೆ

Kolar

ಕೋಲಾರ: ಜಿಪಂ ಕ್ಷೇತ್ರವಾರು ಸಭೆ ಮುಗಿಸಿದ ನಂತರ 30,000ಕ್ಕೂ ಅಧಿಕ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಿ ಕಾಂಗ್ರೆಸ್ ವರಿಷ್ಠರ ಕಣ್ಣನ್ನು ಕೋಲಾರದ ಕಡೆ ತಿರುಗಿಸೋಣ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್ ಹೇಳಿದರು.

ನಗರದ ಎಎಫ್ ಕನ್ವೆನ್ಷನ್ ಹಾಲ್‌ನಲ್ಲಿ ಶುಕ್ರವಾರ ಕ್ಯಾಲನೂರು ಜಿಪಂ, ತಾಪಂ ಕ್ಷೇತ್ರದ ಆಕಾಂಕ್ಷಿಗಳ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸೇರ್ಪಡೆ ಸಂಬಂಧ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಜತೆ ಚರ್ಚಿಸಿದ್ದರೂ ತೀರ್ಮಾನವಾಗಿಲ್ಲ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ರಮೇಶ್‌ಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ನನಗೆ ಬೇರೆ ಪಕ್ಷದ ಮೇಲೆ ನಂಬಿಕೆ ಇಲ್ಲ. ಇದ್ದರೆ ಕಾಂಗ್ರೆಸ್‌ನಲ್ಲಿ, ಇಲ್ಲವೇ ಪಕ್ಷೇತರರಾಗಿ ನಿಲ್ಲುತ್ತೇನೆ ಎಂದರು.

ಕೋಲಾರ ಕ್ಷೇತ್ರದಲ್ಲಿ 3ನೇ ಶಕ್ತಿ ಉದಯಿಸಲು ಸಾಧ್ಯವೇ ಇಲ್ಲ. ಶ್ರೀನಿವಾಸಗೌಡ ಕಾಂಗ್ರೆಸ್ ಬಾಗಿಲಿನಲ್ಲಿ ನಿಂತಿದ್ದಾರೆ. ಜೆಡಿಎಸ್ ಖಾಲಿಯಾಗಿದೆ. ಟೊಮ್ಯಾಟೊ, ಕೋಳಿಮೊಟ್ಟೆ ಹಣದಿಂದ ಜನರನ್ನು ಯಾಮಾರಿಸಲು ಆಗಲ್ಲ. ನನ್ನ ವಿರುದ್ಧ ಶ್ರೀನಿವಾಸಗೌಡ ಸ್ಪರ್ಧಿಸಿದರೆ ೈಟ್, ಬೇರೆ ಯಾರೇ ನಿಂತರೂ ಪೈಪೋಟಿ ಇರಲ್ಲ ಎಂದರು.

ಮುಖಂಡ ಬೆಗ್ಲಿ ಸೂರ್ಯಪ್ರಕಾಶ್ ಮಾತನಾಡಿ, ವರ್ತೂರು ಪ್ರಕಾಶ್ ಕಾಂಗ್ರೆಸ್ ಸೇರಬೇಕೆಂಬ ಒತ್ತಾಯ ಬಂದಿದ್ದರಿಂದ ನಾನೇ ಕೆಎಚ್ ಮನೆಗೆ ಹೋಗಿ ಮಾತನಾಡಿದಾಗ ಸಿದ್ದರಾಮಯ್ಯ ಒಪ್ಪಿದರೆ ಓಕೆ, ಪಕ್ಷಕ್ಕೆ ಬರಮಾಡಿಕೊಳ್ಳುತ್ತೇವೆ ಎಂದಿದ್ದರು. ಸಿದ್ದರಾಮಯ್ಯ ಕೂಡ ಒಪ್ಪಿಗೆ ಸೂಚಿಸಿ ಸೇರ್ಪಡೆಗೆ ದಿನಾಂಕ ಹೇಳುವುದಾಗಿ ತಿಳಿಸಿದ ನಂತರ ಈಗ ಕೆಎಚ್ ಒಪ್ಪುತ್ತಿಲ್ಲ ಎಂದರು.

ಆ.2ರಂದು ನರಸಾಪುರ, ನಂತರ ವಕ್ಕಲೇರಿ ಖಾದರೀಪುರ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಸಭೆ ನಡೆಸಲಾಗುವುದು, ವೇಮಗಲ್ ಚೌಡದೇನಹಳ್ಳಿ ಕುರುಗಲ್, ಶೆಟ್ಟಿಹಳ್ಳಿ ಗ್ರಾಪಂ ಚುನಾವಣೆ ನಡೆದಿಲ್ಲ, ಪಟ್ಟಣ ಪಂಚಾಯಿತಿ ಘೋಷಣೆಯನ್ನು ಹೈಕೋಟ್ ಅನೂರ್ಜಿತಗೊಳಿಸಿರುವುದರಿಂದ ಈ 4 ಗ್ರಾಪಂಗಳಿಗೆ ಚುನಾವಣೆ ನಡೆಯಬೇಕಿದೆ, ಜಿಪಂ, ತಾಪಂ ಚುನಾವಣೆಗೆ ಆ ಗ್ರಾಮವನ್ನೂ ಸೇರಿಸಬೇಕಿದೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್. ವೆಂಕಟೇಶ್, ತಾಪಂ ಮಾಜಿ ಅಧ್ಯಕ್ಷ ಸೂಲೂರು ಆಂಜಿನಪ್ಪ, ಜಿಪಂ ಮಾಜಿ ಸದಸ್ಯ ಅರುಣ್ ಪ್ರಸಾದ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕೃಷ್ಣೇಗೌಡ, ಮುಖಂಡರಾದ ಬಂಕ್ ಮಂಜುನಾಥ್, ತಂಬಿಹಳ್ಳಿ ಮುನಿಯಪ್ಪ, ವೆಂಕಟೇಶಗೌಡ, ತಿಪ್ಪೇನಹಳ್ಳಿ ಸುಬ್ಬಾರೆಡ್ಡಿ, ನಂಜಪ್ಪ, ಮಡೇರಹಳ್ಳಿ ರಾಜಣ್ಣ, ಚೋಳಘಟ್ಟ ಚಲಪತಿ, ಜಂಷೀರ್ ಪಾಷಾ ಇದ್ದರು