ನ್ಯೂಸ್

ತನಿಖಾಧಿಕಾರಿಯ ಎದುರು ವರ್ತೂರ್ ಸೋಮವಾರ ಹಾಜರ್!

ಬೆಂಗಳೂರು: ಚಿನ್ನಾಭರಣ ಮಳಿಗೆಯಲ್ಲಿ ಗಣ್ಯರ ಹೆಸರು ಬಳಸಿಕೊಂಡು ಕೋಟ್ಯಂತರ ಮೌಲ್ಯದ ಆಭರಣ ಖರೀದಿಸಿ ಹಣ ಪಾವತಿಸದೆ ವಂಚಿಸಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶ್ವೇತಾಗೌಡ ವಿಚಾರಣೆ ಮುಂದುವರಿಸಿರುವ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಗೊಳಿಸಿದ್ದಾರೆ.

ಈ ಸಂಬಂಧ ಮಾಜಿ ಸಚಿವ ಹಾಗೂ ಕೋಲಾರ ಜಿಲ್ಲಾ ಬಿಜೆಪಿ ಮುಖಂಡ ವರ್ತೂರು ಪ್ರಕಾಶ್‌ಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದು, ವರ್ತೂರ್ ಪ್ರಕಾಶ್ ಸೋಮವಾರ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಕೆಲ ದಿನಗಳ ಹಿಂದೆ ಅವಿನ್ಯೂ ರಸ್ತೆಯ ನವರತ್ನ ಜ್ಯುವೆಲರ್ಸ್ ಮಳಿಗೆಯಲ್ಲಿ ಸುಮಾರು ೨.೪೨ ಕೋಟಿ ರೂ. ಮೌಲ್ಯದ ಆಭರಣವನ್ನು ಖರೀದಿಸಿ ಶ್ವೇತಾ ವಂಚಿಸಿದ್ದಳು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಎಸಿಪಿ ಗೀತಾ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಮೈಸೂರಿನಲ್ಲಿ ಆಕೆಯನ್ನು ಬಂಧಿಸಿ ನಗರಕ್ಕೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದ ಶ್ವೇತಾಗೌಡ, ಸುಲಭವಾಗಿ ಹಣ ಸಂಪಾದಿಸಲು ಅಡ್ಡದಾರಿ ತುಳಿದಿದ್ದರು. ಹಾಗಾಗಿ ತಾನು ಚಿನ್ನಾಭರಣ ವ್ಯಾಪಾರ ಮಾಡುವುದಾಗಿ ಎಂದೇಳಿ ಕೆಲ ಚಿನ್ನ ವ್ಯಾಪಾರಿಗಳಿಂದ ಸಗಟು ದರದಲ್ಲಿ ಆಭರಣ ಖರೀದಿಸಿ ಆಕೆ ವಂಚಿಸುತ್ತಿದ್ದಳು. ಈ ಮೊದಲು ಇದೇ ರೀತಿ ಚಿನ್ನದ ವ್ಯಾಪಾರಿಗೆ ಮೋಸಗೊಳಿಸಿದ ಪ್ರಕರಣದಲ್ಲಿ ಶ್ವೇತಾಗೌಡಳನ್ನು ಯಲಹಂಕ ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನು ಪಡೆದ ಆಕೆ ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿದ್ದಳು.

ಸೋಮವಾರ ವಿಚಾರಣೆ ಹಾಜರಾಗುವೆ:

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ವರ್ತೂರು ಪ್ರಕಾಶ್, ಶ್ವೇತಾ ಅವರನ್ನು ಬಂಧಿಸಿರುವ ಬಗ್ಗೆ ನನಗೆ ಶುಕ್ರವಾರ ಪೊಲೀಸರಿಂದ ಮಾಹಿತಿ ಬಂದಿದೆ. ನನ್ನ ವಿರುದ್ಧ ಕೇಳಿ ಬಂದಿರುವ ಆರೋಪ ನೂರಕ್ಕೆ ನೂರರಷ್ಟು ಸುಳ್ಳು. ಸೋಮವಾರ ತನಿಖಾಧಿಕಾರಿಗಳ ಮುಂದೆ ಹಾಜರಾಜರಾಗುತ್ತೇನೆ. ೩-೪ ತಿಂಗಳ ಹಿಂದೆ ನಮ್ಮ ಮನೆಗೆ ಬಂದು ಸಮಾಜ ಸೇವಕಿ ಅಂತಾ ಶ್ವೇತಾ ಪರಿಚಯ ಮಾಡಿಕೊಂಡಿದ್ದಳು. ಆ ನಂತರ ಎರಡ್ಮೂರು ಬಾರಿ ಮನೆಗೆ ಬಂದಿದ್ದರು. ಚಿನ್ನಾಭರಣಗಳ ವಂಚಿಸಿರುವ ಬಗ್ಗೆ ನನಗೆ ಗೊತ್ತಿಲ್ಲ. ಆಭರಣ ಮಳಿಗೆ ಅವರು ಆಕೆಗೆ ಚಿನ್ನಾಭರಣ ನೀಡಿರುವ ವಿಷಯ ನನಗೆ ಹೇಳಿಲ್ಲ. ಆಕೆ ಗಣ್ಯರ ಹೆಸರು ದುರ್ಬಳಕೆ ಮಾಡಿಕೊಂಡು ವಂಚಿಸಿರುವುದು ನನಗೆ ಗೊತ್ತಾಗಿದೆ. ವಿಚಾರಣೆಗೆ ಹಾಜರಾಗಿ ಈ ಬಗ್ಗೆ ಪೊಲೀಸರಿಗೆ ವಿವರಿಸುತ್ತೇನೆ ಎಂದು ತಿಳಿಸಿದ್ದಾರೆ.