| ತೈರೊಳ್ಳಿ ಮಂಜುನಾಥ ಉಡುಪ
ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ ವಾಸುಕಿಯ ಸಹಾಯದೊಂದಿಗೆ ಮಂದರ ಪರ್ವತವನ್ನು ಕಡೆಯುತ್ತಿರುವಾಗ ಕ್ಷೀರಸಾಗರದಲ್ಲಿ ಪರಿಶುದ್ಧವಾಗಿ ಶ್ವೇತವರ್ಣದಲ್ಲಿ ಉದ್ಭವಿಸುತ್ತಾಳೆ ಲಕ್ಷ್ಮೀ. ಹಾಗಾಗಿ ಈ ವರಮಹಾಲಕ್ಷ್ಮೀ ವ್ರತದ ದಿನ ತಾಯಿಗೆ ಶ್ವೇತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸುತ್ತಾರೆ. ಲಕ್ಷ್ಮೀ ಎಂದರೆ ಶುದ್ಧತೆಯ ಸಂಕೇತವಾಗಿರುವುದರಿಂದ ಹಬ್ಬದ ದಿನದಂದು ಮುಂಜಾನೆ ಎದ್ದು, ಮನೆಯನ್ನು ರಂಗೋಲಿ, ತಳಿರುತೋರಣಗಳಿಂದ ಅಲಂಕರಿಸಿ, ಅಭ್ಯಂಜನವನ್ನು ಮಾಡಿ ಶುಭ್ರವಾದ ಬಟ್ಟೆಯನ್ನು ತೊಟ್ಟು ಮಡಿಯಲ್ಲಿ ನೈವೇದ್ಯವನ್ನು ತಯಾರಿಸಲಾಗುತ್ತದೆ.
ಸಣ್ಣ ಉಕ್ಕಿನ ಬಿಂದಿಗೆ ಅಥವಾ ಬೆಳ್ಳಿ ಚೊಂಬನ್ನು ಕಳಶದ ರೂಪದಲ್ಲಿ ಇಟ್ಟು ಅದರಲ್ಲಿ ನೀರನ್ನು ತುಂಬಿಸಿ ಅದಕ್ಕೆ ಸ್ವಲ್ಪ ಖರ್ಜೂರ ಹಾಗೂ ದ್ರಾಕ್ಷಿಯನ್ನು ಹಾಕಿ ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರಲ್ಲಿ ಕಳಶವನ್ನು ಇಡಲಾಗುತ್ತದೆ. ಮಾವಿನ ಎಲೆ ಹಾಗೂ ವೀಳ್ಯೆದೆಲೆಯನ್ನು ಕಳಶದ ಸುತ್ತ ಜೋಡಿಸಿ, ಅದರ ಮೇಲೆ ಅರಿಶಿಣ ಹಚ್ಚಿದ ತೆಂಗಿನಕಾಯಿಯನ್ನು ಇಟ್ಟು ಅದಕ್ಕೆ ಸೀರೆ, ಒಡವೆಗಳೊಂದಿಗೆ ಅಲಂಕರಿಸುತ್ತಾರೆ. ಅವರವರ ಯಥಾಶಕ್ತಿಯಂತೆ ಲಕ್ಷ್ಮೀಯನ್ನು ಚಿನ್ನ, ಬೆಳ್ಳಿ, ಹೂವುಗಳೊಂದಿಗೆ ಅಲಂಕರಿಸಿ ಪೂಜಿಸುತ್ತಾರೆ. ತಾಯಿಗೆ ಹೂವುಗಳೆಂದರೆ ಬಹಳ ಪ್ರೀತಿ. ಅದರಲ್ಲೂ ಕಮಲದ ಹೂವು ಹಾಗೂ ಬಿಲ್ವಪತ್ರೆ ಎಂದರೆ ತಾಯಿಗೆ ತುಂಬ ಪ್ರೀತಿ.
ಬಿಲ್ವವೃಕ್ಷದಲ್ಲಿ ಲಕ್ಷ್ಮೀ ನೆಲೆಸಿದ್ದಾಳೆಂದು, ಬಿಲ್ವಪತ್ರೆಯಿಂದ ಪೂಜೆ ಮಾಡಿದರೆ ತಾಯಿ ಒಲಿಯುವಳೆಂಬ ನಂಬಿಕೆಯೂ ಇದೆ. ವರಲಕ್ಷ್ಮೀ ಎಂದರೆ ವರಗಳನ್ನು ಕೊಡುವವಳು ಎಂದು ಕೂಡ ಹೇಳುತ್ತಾರೆ. ಸಾಮಾನ್ಯವಾಗಿ ಲಕ್ಷ್ಮೀಪೂಜೆಯನ್ನು ಗೋಧೂಳಿ ಸಮಯದಲ್ಲಿ ಮಾಡಿದರೆ ಶ್ರೇಷ್ಠ ಎನ್ನುವುದು ನಂಬಿಕೆ. ಆದರೆ ಈ ಆಧುನಿಕ ಜೀವನದ ಒತ್ತಡದಲ್ಲಿ ಉಪವಾಸ ಮಾಡಲು ಸಾಧ್ಯವಾಗದಿರುವವರು ಮುಂಜಾನೆಯಲ್ಲಿ ಯಾವುದೇ ಘನಹಾರ ಸೇವಿಸದೆ ವ್ರತವನ್ನಾಚರಿಸುತ್ತಾರೆ.
ಈ ವ್ರತವನ್ನು ಯಾರು ನಿಷ್ಠೆಯಿಂದ ಮಾಡುತ್ತಾರೋ ಅವರಿಗೆ ಹಾಗೂ ಅವರ ಮನೆಯವರಿಗೆಲ್ಲರಿಗೂ ಒಳ್ಳೆಯದಾಗುತ್ತದೆಂದೂ ಹಾಗೂ ಎಲ್ಲ ಕೆಲಸದಲ್ಲಿ ಏಳಿಗೆ ಆಗುತ್ತದೆಂಬ ನಂಬಿಕೆಯೂ ಇದೆ. ಹೀಗಾಗಿ ನಮ್ಮ ಪೂರ್ವಿಕರು ಹೇಳುವ ಮಾತೆಂದರೆ, ಎಲ್ಲಿ ತನು, ಮನ, ಮನೆ ಶುದ್ಧವಾಗಿರುತ್ತದೋ ಅಲ್ಲಿ ಲಕ್ಷ್ಮೀಯು ತಾಂಡವ ವಾಡುತ್ತಾಳೆ. ಎಲ್ಲದಕ್ಕಿಂತ ಇಲ್ಲಿ ಭಕ್ತಿ ಹಾಗೂ ಶ್ರದ್ಧೆ ಮುಖ್ಯ.
ಇನ್ನು ವ್ರತದ ಬಗ್ಗೆ ಹೇಳಬೇಕೆಂದರೆ, ಒಮ್ಮೆ ವರಲಕ್ಷ್ಮೀ ವ್ರತ ಮಾಡಿದರೆ ಅಷ್ಟಲಕ್ಷ್ಮೀಯರಿಗೆ ಪೂಜೆ ಸಲ್ಲಿಸಿದಷ್ಟು ಫಲ ಸಿಗುತ್ತದೆಂದು ಹೇಳುತ್ತಾರೆ. ಲಕ್ಷ್ಮೀಗೆ ಪ್ರಿಯವಾದ ಧಾನ್ಯವೆಂದರೆ ಕಡಲೆಬೇಳೆ. ಆದ್ದರಿಂದ ವರಮಹಾಲಕ್ಷ್ಮೀ ಹಬ್ಬದ ದಿನದಂದು ನೈವ್ಯೇದ್ಯಕ್ಕೆ ಕಡಲೆಬೇಳೆಯಿಂದ ತಯಾರಿಸಿದ ಹಯಗ್ರೀವ, ಪಾಯಸ, ಹೋಳಿಗೆ ಇತ್ಯಾದಿ ಸಿಹಿ ತಿನಿಸುಗಳನ್ನು ದೇವರಿಗೆ ಅರ್ಪಿಸುತ್ತಾರೆ.
ವ್ರತದ ನೇಮದ ಪ್ರಕಾರ ಪೂಜೆಯ ಸಿದ್ಧತೆಗಳೆಲ್ಲ ಆದ ನಂತರ ಮೊದಲು ಗಣಪತಿ ಯನ್ನು ಪೂಜಿಸಿ ನಂತರ ಯಮುನಾ ಪೂಜೆ ಅಂದರೆ ಶ್ರೇಷ್ಠವಾದ ನದಿಯ ನೀರನ್ನು ತಂದು ಪೂಜೆ ಮಾಡುತ್ತಾರೆ. ಇದಾದ ಮೇಲೆ ವರಲಕ್ಷ್ಮೀವ್ರತವನ್ನು ಆರಂಭಿಸುತ್ತಾರೆ. ಕುಂಕು ಮಾರ್ಚನೆ ಮಾಡು ವುದರೊಂದಿಗೆ ಲಕ್ಷ್ಮೀ ದೇವಿಯನ್ನು ಆವಾಹನೆ ಮಾಡುತ್ತಾರೆ. ನಂತರ ಹನ್ನೆರಡು ಗಂಟಿನ ದಾರವನ್ನು ದೇವರ ಮುಂದೆ ಇಟ್ಟು ಪೂಜೆಯನ್ನು ಮಾಡಿ ಸುಮಂಗಲಿಯರು ಅವರ ಕೈಗೆ ಕಟ್ಟಿಕೊಳ್ಳುತ್ತಾರೆ.
ಕಟ್ಟಿದ ದಾರವನ್ನು ಗೌರಿಹಬ್ಬದ ದಿನ ಗೌರಿವ್ರತ ಮಾಡಿ ಹಳೇ ದಾರವನ್ನು ವಿಸರ್ಜಿಸಿ ಹೊಸ ದಾರವನ್ನು ಕಟ್ಟಿಕೊಳ್ಳುತ್ತಾರೆ. ಹೀಗೆ ಮದುವೆಯಾದ ಹೆಣ್ಣುಮಕ್ಕಳು ಮೊದಲನೇ ವರ್ಷದಿಂದ ಒಂಬತ್ತು ವರ್ಷದವರೆಗೆ ಶ್ರದ್ಧೆಯಿಂದ ವ್ರತವನ್ನಾಚರಿಸಿ ಒಂಬತ್ತನೇ ವರ್ಷ ಉದ್ಯಾಪನೆಯೊಂದಿಗೆ ವ್ರತವನ್ನು ಮುಗಿಸುತ್ತಾರೆ.
(ಲೇಖಕಕರು ಹವ್ಯಾಸಿ ಬರಹಗಾರರು)