ನ್ಯೂಸ್

ಜಿಲ್ಲಾದ್ಯಂತ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ

ಶಿವಮೊಗ್ಗ: ಅಗತ್ಯ ವಸ್ತುಗಳ ದುಬಾರಿ ಬೆಲೆ ನಡುವೆ ಜನರು ವರಮಹಾಲಕ್ಷ್ಮೀ ಹಬ್ಬವನ್ನು ಶುಕ್ರವಾರ ಸಡಗರ, ಸಂಭ್ರಮದಿಂದ ಆಚರಿಸಿದರು. ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಮನೆಗಳಲ್ಲಿ ವರಮಹಾಲಕ್ಷ್ಮೀ ಮೂರ್ತಿಗೆ ಸೀರೆ, ತಾಳಿ, ಬಂಗಾರದ ಆಭರಣ, ಹೂಗಳಿಂದ ಅಲಂಕರಿಸಿ ನೈವೇದ್ಯ ಮಾಡಿ ಮುತ್ತೈದೆಯರನ್ನು ಆಮಂತ್ರಿಸಿ ವಿಶೇಷ ಪೂಜೆ ಸಲ್ಲಿಸಿದರು.

ಅರಿಶಿಣ, ಕುಂಕುಮ, ಹೂವು, ಹಣ್ಣು ಕೊಟ್ಟು ಮುತ್ತೈದೆಯರಲ್ಲಿ ಲಕ್ಷ್ಮೀ ರೂಪ ಕಂಡರು. ವಿಶೇಷವಾಗಿ ಮಹಿಳೆಯರಿಗೆ ಪ್ರಮುಖ ಹಬ್ಬ ಇದಾಗಿದ್ದು, ವರಮಹಾಲಕ್ಷ್ಮೀಗೆ ಪೂಜೆ ಸಲ್ಲಿಸುವ ಮೂಲಕ ಇಷ್ಟಾರ್ಥಕ್ಕೆ ಪ್ರಾರ್ಥನೆ ಸಲ್ಲಿಸಿದರು.

ಲಕ್ಷ್ಮೀ ದೇವಿಗೆ ಪ್ರಾರ್ಥನೆ ಸಲ್ಲಿಸಲು ಮತ್ತು ದೇವಿ ಆಶೀರ್ವಾದ ಪಡೆಯಲು ಮಹಿಳೆಯರು ವ್ರತ ಹಾಗೂ ಉಪವಾಸ ಮಾಡಿದ್ದರು. ಸಂಪತ್ತು ಮತ್ತು ಅದೃಷ್ಟ ದೇವತೆಯಾಗಿರುವ ಲಕ್ಷ್ಮೀ ದೇವಿಯನ್ನು ಆರಾಧಿಸಿದರು. ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮೀ ಹಬ್ಬಕ್ಕೆ ವೈಶಿಷ್ಠೃವಿರುವ ಹಿನ್ನೆಲೆಯಲ್ಲಿ ಸಿರಿ ಸಂಪತ್ತು ದಯಪಾಲಿಸುವಂತೆ ಪ್ರಾರ್ಥಿಸಿದರು.

ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಇದ್ದ ಕಾರಣ ಮಕ್ಕಳು, ಕುಟುಂಬಸ್ಥರು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಹಣ್ಣು, ತರಕಾರಿ, ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗಿದ್ದರೂ ಸಂಪ್ರದಾಯದಂತೆ ವರಮಹಾಲಕ್ಷ್ಮೀ ಪೂಜೆ ನಡೆಸಿದರು. ಮನೆಗಳಲ್ಲಿ ಮಾತ್ರವಲ್ಲದೇ ಹಲವು ದೇವಸ್ಥಾನಗಳಲ್ಲಿ ಸಾಮೂಹಿಕ ಪೂಜೆ ಸಲ್ಲಿಸಿದರು. ಸಂಬಂಧಿಕರು, ಪರಿಚಯಸ್ಥರನ್ನು ಆಹ್ವಾನಿಸಿ ಊಟೋಪಚಾರ ನೆರವೇರಿಸಿ ಸಂಭ್ರಮಿಸಿದರು.