ವರಮಹಾಲಕ್ಷ್ಮೀ ಹಬ್ಬದ ಮುನ್ನಾ ದಿನ ಶಿವಮೊಗ್ಗದಲ್ಲಿ ಹೂವಿನ ಖರೀದಿಯಲ್ಲಿ ನಿರತರಾಗಿದ್ದ ಮಹಿಳೆಯರು. 
ನ್ಯೂಸ್

ವರಮಹಾಲಕ್ಷ್ಮೀ ಹಬ್ಬದ ವ್ಯಾಪಾರ ಜೋರು: ತಾವರೆ ಹೂವಿಗೆ ಡಿಮಾಂಡ್

ಶಿವಮೊಗ್ಗ:ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿಯೇ ಸಾಗಿತ್ತು. ಸಂಭ್ರಮದ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲು ಸಾರ್ವಜನಿಕರು ಹೂ-ಹಣ್ಣು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಹೂ, ಹಣ್ಣುಗಳ ದರ ದುಬಾರಿ ಅಲ್ಲದಿದ್ದರೂ ಹಬ್ಬದ ಹಿನ್ನೆಲೆಯಲ್ಲಿ ತುಸು ಹೆಚ್ಚಿನ ಹಣವನ್ನೇ ವ್ಯಾಪಾರಸ್ಥರು ತೆಗೆದುಕೊಳ್ಳುತ್ತಿದ್ದರು. ಶ್ರದ್ಧಾಭಕ್ತಿಯಿಂದ ಹಬ್ಬ ಆಚರಿಸಲು ಮಹಿಳೆಯರು ವಿವಿಧ ರೀತಿಯ ಪೂಜಾ ಸಾಮಗ್ರಿಗಳನ್ನು ಖರೀದಿಸಿದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವಲ್ಪ ದರ ಹೆಚ್ಚಳವಾಗಿಯೇ ಇತ್ತು. ಆದರೂ ಹಬ್ಬಕ್ಕೆ ಬೇಕಾಗಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲು ಜನರು ತಮಗೆ ಅಗತ್ಯವಿರುವಷ್ಟು ವಸ್ತುಗಳ ಖರೀದಿಸುವಲ್ಲಿ ನಿರತರಾಗಿದ್ದರು. ವರಮಹಾಲಕ್ಷ್ಮೀ ಹಬ್ಬಕ್ಕೆ ಆಭರಣ, ಹೊಸ ಬಟ್ಟೆ ಖರೀದಿಯೂ ಜೋರಾಗಿದ್ದರಿಂದ ಗಾಂಧಿಬಜಾರ್‌ನ ರಸ್ತೆಗಳಲ್ಲಿ ಜನರ ಓಡಾಟ ಅಧಿಕವಾಗಿತ್ತು.
ಪ್ರಮುಖ ವಾಣಿಜ್ಯ ಕೇಂದ್ರಗಳಾದ ಗಾಂಧಿ ಬಜಾರ್, ಶಿವಪ್ಪನಾಯಕ ಹೂವಿನ ಮಾರುಕಟ್ಟೆ, ಲಕ್ಷ್ಮೀ ಟಾಕೀಸ್ ವೃತ್ತ ಸೇರಿದಂತೆ ವಿವಿಧೆಡೆ ಹೂವು, ಹಣ್ಣು, ಬಾಳೆ ಕಂದುಗಳನ್ನು ಮಾರಾಟ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ವರ ಮಹಾಲಕ್ಷ್ಮೀ ವೃತಕ್ಕೆ ತಾವರೆ ಹೂ ವಿಶೇಷ. ಮಾರುಕಟ್ಟೆಯಲ್ಲಿ ತಾವರೆ ಹೂಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದರು. ತಾವರೆ ಬೇಡಿಕೆ ಹೆಚ್ಚಿದ್ದ ಕಾರಣ ವ್ಯಾಪಾರಸ್ಥರು 20 ರಿಂದ 30 ರೂ.ಗಳಿಗೆ ಒಂದು ತಾವರೆ ಹೂ ಮಾರಾಟ ಮಾಡುತ್ತಿದ್ದರು. ಮಹಿಳೆಯರು ಎಲ್ಲ ವಸ್ತುಗಳ ಜತೆ ತಾವರೆಯನ್ನು ತಪ್ಪದೇ ಕೊಳ್ಳುತ್ತಿದ್ದರು.
ವರಮಹಾಲಕ್ಷ್ಮೀ ಹಬ್ಬಕ್ಕೆ ಪ್ರಮುಖವಾಗಿ ಬೇಕಾಗಿರುವ ಲಕ್ಷ್ಮೀ ಮುಖವಾಡ, ಬಳೆ ಖರೀದಿ ಭರಾಟೆ ಜೋರಾಗಿತ್ತು. ಜನರು ತಮ್ಮ ಶಕ್ತ್ಯಾನುಸಾರ ಚಿನ್ನ, ಬೆಳ್ಳಿ, ಮೆಟಲ್ ಲಕ್ಷ್ಮೀ ಮುಖವಾಡ ಖರೀದಿಸಿದರು. ಮುತ್ತೈದೆಯರಿಗೆ ನೀಡಲು ಬಳೆಗಳ ಖರೀದಿಯೂ ಜೋರಾಗಿತ್ತು.
ತುಸು ದುಬಾರಿ:ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ವೀಳ್ಯದೆಲೆ, ಹೂವು, ನಿಂಬೆಹಣ್ಣು, ವಿವಿಧ ಹಣ್ಣುಗಳ ಬೆಲೆ ಏರಿಕೆಯಾಗಿತ್ತು. ಸೇವಂತಿಗೆ ಮಾರೊಂದಕ್ಕೆ 100-120ರೂ.ನಂತೆ ವ್ಯಾಪಾರವಾಯಿತು. ಕನಕಾಂಬರ 100 ರೂ., ಮಲ್ಲಿಗೆ ಕೆಜಿಗೆ 120-150 ರೂ. ಗುಲಾಬಿ 400 ರೂ.ಗೆ ಏರಿಕೆಯಾಗಿತ್ತು. ವೀಳ್ಯದೆಲೆ, ನಿಂಬೆ ಹಣ್ಣುಗಳ ಧಾರಣೆಯೂ ಹೆಚ್ಚಾಗಿತ್ತು. ದಾಳಿಂಬೆ, ಸೇಬು, ಬಾಳೆಹಣ್ಣು, ಮೋಸಂಬಿ ಕಿತ್ತಳೆ ಸೇರಿದಂತೆ ವಿವಿಧ ಹಣ್ಣುಗಳ ಬೆಲೆಯೂ ಏರಿಕೆಯಾಗಿತ್ತು. ಆದರೂ ಜನರು ಉತ್ಸಾಹದಿಂದ ಹಬ್ಬದ ಸಿದ್ದತೆ ಮಾಡಿಕೊಂಡರು.