ಮೇಷ: ರವಿವಾರ ಪುಬ್ಬ ನಕ್ಷತ್ರವು ಇದ್ದು, ಗಾಣಗಾಪುರದಲ್ಲಿ ಗುರುಗಳನ್ನು ಪೂಜಿಸಿ ಸಾಯಂಕಾಲದಲ್ಲಿ ಯತಿ ಪೂಜೆ ಸಂಪ್ರದಾಯವು ನಡೆದು ಅದೇ ದಿನ ಗುರುಗಳು ಪಾದುಕೆ ಬಿಟ್ಟು ಶ್ರೀಶೈಲದ ಕದಳೀವನದಲ್ಲಿ ಕಂಡೂಕಾಣದಂತೆ ಅದೃಶ್ಯರಾಗಿದ್ದ್ದಾರೆ. ಆದರೆ ನಾನು ಗಾಣಗಾಪುರದಲ್ಲಿ ಇರುತ್ತೇನೆ ಎಂಬ ವಚನವನ್ನು ನೀಡಿದ್ದಾರೆ. ಅದರಂತೆ ಲಗ್ನದಲ್ಲಿ ಗುರು ಇರುವುದರಿಂದ ಸಂಕಷ್ಟ ಪರಿಹಾರಕ್ಕೆ 14ನೇ ಅಧ್ಯಾಯ ಪಾರಾಯಣ ಮಾಡಿ.
ವೃಷಭ: ‘ಬಂದದ್ದೆಲ್ಲಾ ಬರಲಿ, ಗೋವಿಂದನ ದಯೆ ಇರಲಿ’ ಎಂಬಂತೆ ಈಶ್ವರನನ್ನು ಅರ್ಚಿಸಿದರೆ ಸಿಗದ ವಸ್ತುವೇ ಇಲ್ಲ. ನೀವು ನಂದಿಯಂತೆ ಶಿವನನ್ನು ನಂಬಿದರೆ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು. ಸರ್ಕಾರದ ಉದ್ಯೋಗದಲ್ಲಿ ಇರುವವರು ತಮ್ಮ ವರ್ಚಸ್ಸು ಅಧಃಪತನಕ್ಕೆ ಇಳಿಯುವಂತೆ ಮಾಡದೆ ತಾಳ್ಮೆಯಿಂದ ಇರುವುದೇ ಧ್ಯೇಯವಾಗಿರಲಿ.
ಮಿಥುನ: ಕೊಡುವ ದೈವವು ಒಬ್ಬನೇ. ಧನವು ಬಂದಾಗ ಕೊಡದೇ ಇರುವವರು ಬಹಳ. ಇದೆಲ್ಲವನ್ನೂ ಭಗವಂತನು ನೋಡುತ್ತಿರುತ್ತಾನೆ. ಈ ಒಂದು ವಾರ ಕಾಲ ಗುರು ದತ್ತಾತ್ರೇಯ ಮಹೋತ್ಸವವು ಎಲ್ಲ ಗುರುಪೀಠಗಳಲ್ಲಿ ನಡೆದು ದೇವರು ಜಾಗೃತರಾಗಿರುತ್ತಾರೆ. 18ನೇ ಅಧ್ಯಾಯ ಪಾರಾಯಣ ಮಾಡಿ, ಧನವು ಬರುತ್ತದೆ. ಇಷ್ಟಾರ್ಥ ಸಿದ್ಧಿಯೂ ಆಗುತ್ತದೆ.
ಕಟಕ: ಸದ ಕಾಲ ಕರ್ತವ್ಯ ನಿಷ್ಠೆ ಇರಬೇಕು. ಆರೋಗ್ಯವೇ ಮಹಾಭಾಗ್ಯವೆಂದು ಅರಿತು ಮಿತಿಯಾಗಿ ಕೆಲಸ ಮಾಡಿ. ಸಾಕಷ್ಟು ನಿದ್ದೆಯನ್ನು ಮಾಡಿ. ದೇವರು ಕೊಟ್ಟ ಅನ್ನವನ್ನು ತೃಪ್ತಿಯಿಂದ ಉಂಡು ಸಂತಸ ಪಡೆಯಿರಿ. ಉಮಾಮಹೇಶ್ವರನನ್ನು ಪೂಜಿಸಿ.
ಸಿಂಹ: ಕಾಲವು ಬಹಳ ಚೆನ್ನಾಗಿದ್ದು, ನಿಮ್ಮ ಪೂರ್ವ ಪುಣ್ಯವು ಕೈ ಹಿಡಿದು ನಡೆಸಿ ಧನ ದ್ರವ್ಯ ಲಾಭ, ಸತ್ಕೀರ್ತಿ, ಮಂಗಳ ಕಾರ್ಯ ನಡೆದು ನಿಮ್ಮನ್ನು ಉತ್ತುಂಗದಲ್ಲಿ ಇಡುತ್ತದೆ. ಸ್ಕಂದನನ್ನು ಗಣೇಶನನ್ನು ಪ್ರತ್ಯಕ್ಷ ದೇವರಾದ ಸೂರ್ಯನಾರಾಯಣವನ್ನು ಪೂಜಿಸಿ.
ಕನ್ಯಾ: ಆಕಸ್ಮಿಕ ಧನ ಲಾಭ. ವಂಶ ವೃದ್ಧಿಯಾಗುವುದು. ಹಣದ ಕೊರತೆ ಇಲ್ಲದೆ ಜೀವನ ಸಾಗಿಸುವ ಸಮಯ. ಶನಿ ಷಷ್ಟದಲ್ಲಿ ಇದ್ದು, ಮಾಡುವ ಕೆಲಸಕ್ಕೆ ದೈವ ಬಲ ಅತ್ಯಗತ್ಯ. ಲಕ್ಷ್ಮೀನರಸಿಂಹನನ್ನು ಪೂಜಿಸಿ. ಸಾಲಿಗ್ರಾಮದ ನರಸಿಂಹನ ದರ್ಶನವನ್ನೂ ಮಾಡಿ ಬನ್ನಿ. ಎಲ್ಲವೂ ನಿಮ್ಮ ಇಚ್ಛೆಯಂತೆ ಸಾಗುತ್ತದೆ.
ತುಲಾ: ಪಂಚಮದಲ್ಲಿ ಶನಿ ಇದ್ದು ಸ್ವಕ್ಷೇತ್ರನಾಗಿದ್ದಾನೆ. ಪಂಚಮಶನಿ ಕೆಡುಕೆಂದು ತಿಳಿಯದೆ ಸಪ್ತಮದಲ್ಲಿ ಇರುವ ಗುರುವಿಗೆ ಈಶ್ವರನನ್ನು ಪೂಜಿಸಿ ಗುರು ಅಷ್ಟೋತ್ತರ ಪಠಿಸಿ. ಶನಿ ಸ್ತೋತ್ರ, ಅಷ್ಟೋತ್ತರ ಮಾಡಿದರೆ ಸುಖ ಸಂತೋಷ ಸಿಗುವ ಸಮಯ ಇದು. ಒಳ್ಳೆಯ ದಾರಿಯಲ್ಲಿ ನಡೆಯಿರಿ. ಜಗನ್ಮಾತೆಯಾದ ದುರ್ಗೆಯನ್ನೂ ಪೂಜಿಸಿ. ದುರ್ಗಾ ಸಹಸ್ರನಾಮ ಪಾರಾಯಣ ಮಾಡಿ.
ವೃಶ್ಚಿಕ: ಪಂಚಮದಲ್ಲಿ ರಾಹು ಇದ್ದು ನಿಮ್ಮ ಕಣ್ಣಿಗೆ ಕಾಣದ, ಯೋಚಿಸಲೂ ಆಗದ ಧನವು ಬಂದು ಕೈ ಸೇರುವ ಸಮಯ. ಬಂದ ಹಣದಲ್ಲಿ ಸಾಲವನ್ನು ತೀರಿಸಿ ಋಣ ಮುಕ್ತರಾಗಿರಿ. ರಾಹು ಕೇತುವಿಗಾಗಿ ನಾಗರಾಜನನ್ನು, ಗಣಪತಿಯನ್ನು ಪೂಜಿಸಿ ಅರ್ಚಿಸಿ.
ಧನಸ್ಸು: ಸೌಮ್ಯ ಸ್ವಭಾವದಿಂದ ಸುಖ ವೃದ್ಧಿ ಆಗುತ್ತದೆ. ಧೈರ್ಯ ಇದ್ದರೆ ಕೆಲಸ ಆಗುತ್ತದೆ. ಜಗತ್ತಿನಲ್ಲಿ ಏಕೈಕ ದೇವರೆಂದರೆ ಜನ್ಮದಾತರಾದ ಮಾತಾಪಿತರು. ಇಷ್ಟಾರ್ಥ ಸಿದ್ಧಿಗಾಗಿ ತಂದೆ ತಾಯಿಯನ್ನು ಅರ್ಚಿಸಿ ಪೂಜಿಸಿ. ಅಕ್ಷಯ ಧನವನ್ನು, ಆನಂದವನ್ನು ಪಡೆಯುತ್ತೀರಿ.
ಮಕರ: ಆಕಸ್ಮಿಕ ಲಾಭಗಳು ಬಂದು ನಿಮ್ಮ ಆಸೆಗಳು, ಆಲೋಚನೆಗಳು ಕೈಗೂಡುವ ಸಮಯ. ಅದೃಷ್ಟ, ಅಧಿಕಾರ ದಿನನಿತ್ಯ ಬರುವುದಿಲ್ಲ. ಅದಕ್ಕಾಗಿ ಕಾಯಬೇಕು. ನಿಮ್ಮ ಕಷ್ಟ ದೂರವಾಗಿ ನೀವು ಸುಖವನ್ನು ಕಾಣುವ ಸಮಯ. ಕಾಶಿ ವಿಶ್ವೇಶ್ವರನನ್ನು ಪೂಜಿಸಿ. ಗಂಗಾ ಸ್ನಾನ ಮಾಡಿ. ನಿಮ್ಮ ಕಾಲ ಒದಗಿ ಬಂದು ಇಷ್ಟಾರ್ಥಗಳು ನೆರವೇರುತ್ತವೆ.
ಕುಂಭ: ಮನುಷ್ಯನು ತನ್ನ ಸ್ವಂತ ಮನೆಯಲ್ಲಿ ವಾಸಿಸಿದರೆ ಬಾಡಿಗೆಯನ್ನು ಕಟ್ಟಬೇಕಾಗಿಲ್ಲ. ಅನ್ಯರ ಮನೆಯಲ್ಲಿ ವಾಸಿಸಿದರೆ ಬಾಡಿಗೆ ಕೊಡಬೇಕು. ಅಂದರೆ ಈ ಸಮಯದಲ್ಲಿ ಶನಿಯು ಜನ್ಮದಲ್ಲೇ ಇದ್ದು ನಿಮ್ಮ ಕಷ್ಟ ಕೊನೆಗೊಳಿಸಿ ದಾರಿಯನ್ನು ತೋರಿಸುತ್ತಾನೆ. ಇಷ್ಟಾರ್ಥ ನೇರವೇರುತ್ತದೆ. ಊಟಕ್ಕೆ ಮೊದಲು ಶನಿವಾರದಂದು ಗೋಗ್ರಾಸವನ್ನು ಕೊಟ್ಟು ಪುಣ್ಯವನ್ನು ಪಡೆದುಕೊಳ್ಳಿ. ಈಶ್ವರನನ್ನು ಪ್ರಾರ್ಥಿಸಿ. ತಿಲಾ ದಾನ ಮಾಡಿ.
ಮೀನ: ಯಾವ ಗ್ರಹಗಳು ಯಾವ ರಾಶಿಯಲ್ಲಿ ಬೇಕಾದರೂ ಇರಲಿ; ದುರಹಂಕಾರ, ದುರಭಿಮಾನ ಬಿಟ್ಟು ಬಂದರೆ ಸೀತಾ ಮಾತೆಯ ಕಾಡಿನ ಕಷ್ಟವನ್ನೇ ಕಳೆದು ರಾಜ್ಯ ಮರಳಿ ಪಟ್ಟಾಭಿಷೇಕವನ್ನೇ ಮಾಡಿಸಿಕೊಂಡ ಶ್ರೀರಾಮಚಂದ್ರನು ಈಗ ಅಯೋಧ್ಯೆಯಲ್ಲಿ ಬಾಲ ರಾಮನಾಗಿ ನೆಲೆಸಿದ್ದಾನೆ. ಶ್ರೀರಾಮನನ್ನು ಪೂಜಿಸಿ. ಅಧ್ಯಾತ್ಮ ರಾಮಾಯಣದ 1ನೇ ಸರ್ಗ ಪಾರಾಯಣ ಮಾಡಿ. 2ರಲ್ಲಿ ಗುರು ಕೊಡುವ ಲಾಭವನ್ನೂ ಪಡೆಯಿರಿ. ಸತ್ಚಿಂತನೆ ಮಾಡಿರಿ.