ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಳೆಗಳ 1ರಿಮದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ಅಥವಾ ಎರಡು ತರಗತಿಗಳ ‘ಮೌಲ್ಯ ಶಿಕ್ಷಣ’ವನ್ನು ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಮೌಲ್ಯ ಶಿಕ್ಷಣವನ್ನು ಅಳವಡಿಸಿಕೊಳ್ಳುವ ಸಂಬಂಧ 10 ವಿದ್ಯಾರ್ಥಿ ಚಟುವಟಿಕಾ ಪುಸ್ತಕಗಳನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ (ಡಿಎಸ್‌ಇಆರ್‌ಟಿ) ವತಿಯಿಂದ ರಚಿಸಲಾಗಿದೆ ಎಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಯಾವೆಲ್ಲ ಮೌಲ್ಯಗಳು?
ಮೌಲ್ಯಗಳು ಮತ್ತು ಅದಕ್ಕೆ ಸಂಬಂಧಿಸಿದ ಉಪ ಮೌಲ್ಯಗಳಿಗೆ ಅನುಗುಣವಾಗಿ ಚಟುವಟಿಕೆಗಳನ್ನು ರೂಪಿಸಲಾಗಿದೆ. ಅನುಭೂತಿ ಮತ್ತು ದಯೆ, ಗೌರವ, ಪ್ರಾಮಾಣಿಕತೆ ಮತ್ತು ಬದ್ಧತೆ, ಸುಸ್ಥಿರ ಜೀವನ ಮತ್ತು ಪರಿಸರ ಜಾಗೃತಿ, ನಾಗರಿಕ ಜವಾಬ್ದಾರಿಗಳು, ವೈವಿಧ್ಯತೆ, ಸಮತೆ ಮತ್ತು ಒಳಗೊಳ್ಳುವಿಕೆ, ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಸ್ಥಿತಿಸ್ಥಾಪಕತ್ವ, ವೈಜ್ಞಾನಿಕ ಮನೋಭಾವ ಮತ್ತು ಸೃಜನಶೀಲ ಕಲ್ಪನೆ, ಸುರಕ್ಷತೆ, ಲಿಂಗ ಸಮಾನತೆ ಸೇರಿ ಒಟ್ಟು 10 ಮೌಲ್ಯಗಳನ್ನು ತಿಳಿಸಿಕೊಡಲಾಗುತ್ತಿದೆ ಎಂದು ಹೇಳಿದರು.
ಮೌಲ್ಯ ಶಿಕ್ಷಣವನ್ನು ನೀಡಲು 1984 ಸಂಪನ್ಮೂಲ ವ್ಯಕ್ತಿಗಳಿಗೆ ಡಿಎಸ್‌ಇಆರ್‌ಟಿ ವತ್ತು ಜಿಲ್ಲಾ ಶಿಕ್ಷಣ ತರಬೇತಿ (ಡಯಟ್) ಸಂಸ್ಥೆಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಈ ತಿಂಗಳೊಳಗೆ ತರಬೇತಿ ಕಾರ್ಯ ಪೂರ್ಣಗೊಳ್ಳಲಿದೆ. ರಾಜ್ಯದ 96 ಸಾವಿರ ಶಿಕ್ಷಕರಿಗೆ ಒಂದು ದಿನದ ತರಬೇತಿಯನ್ನು ಜಿಲ್ಲಾ ಮತ್ತು ಬ್ಲಾಕ್ ಹಂತದಲ್ಲಿ ನೀಡಲು ಡಿಎಸ್‌ಇಆರ್‌ಟಿ ಚಿಂತನೆ ನಡೆಸುತ್ತಿದೆ ಎಂದರು.
ನ.1ರಂದು ಕಾರ್ಯಕ್ರಮಕ್ಕೆ ಸಿಎಂ ಚಾಲನೆ
ವಿದ್ಯಾರ್ಥಿ ಚಟುವಟಿಕಾ ಪುಸ್ತಕಗಳನ್ನು ಡಿಜಿಟಲ್ ಅವತರಿಕೆಯನ್ನು ನ.1ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಲಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ವಿದ್ಯಾರ್ಥಿ ಚಟುವಟಿಕಾ ಪುಸ್ತಕಗಳನ್ನು ಮುದ್ರಿಸಿ ಪ್ರತಿ ವಿದ್ಯಾರ್ಥಿಗೆ ಒಂದು ಚಟುವಟಿಕಾ ಪುಸ್ತಕದಂತೆ ಶಾಲೆಗಳಿಗೆ ಸರಬರಾಜು ಮಾಡಲು ಕರ್ನಾಟಕ ಪಠ್ಯಪುಸ್ತಕ ಸಂಘ (ಕೆಟಿಬಿಎಸ್) ವತಿಯಿಂದ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದರು.