ಮಲೆನಾಡು ಗಿಡ್ಡ ರೈತ ಉತ್ಪಾದಕರ ಸಂಘದಿಂದ ಏರ್ಪಡಿಸಿದ್ದ ತಾಂಬೂಲ ಸಂಭ್ರಮ ಕಾರ್ಯಕ್ರಮದಲ್ಲಿ ಚಿಂತಕ ದೇವೆಂದ್ರ ಬೆಳೆಯೂರು ಮಾತನಾಡಿದರು. ಕೆ.ವಿ.ಅಕ್ಷರ ಇದ್ದರು. 
ನ್ಯೂಸ್

ಮೌಲ್ಯವರ್ಧನೆ ಕೃಷಿ ಉತ್ಪನ್ನಗಳಿಗೆ ಸೀಮಿತವಾಗದಿರಲಿ

ಸಾಗರ: ಮೌಲ್ಯವರ್ಧನೆ ಕೇವಲ ಕೃಷಿ ಉತ್ಪನ್ನಗಳಿಗೆ ಸೀಮಿತವಾಗದೆ ಇಡೀ ಬದುಕಿನ ಕ್ರಮದ ಮೌಲ್ಯವರ್ಧನೆ ಆಗುವ ಕುರಿತು ಚಿಂತನ-ಮಂಥನ ಅಗತ್ಯವಿದೆ ಎಂದು ರಂಗಕರ್ಮಿ ಕೆ.ವಿ.ಅಕ್ಷರ ಹೇಳಿದರು.

ಸಾಗರದ ಮಲೆನಾಡು ಗಿಡ್ಡ ರೈತ ಉತ್ಪಾದಕರ ಸಂಘದಿಂದ ಬುಧವಾರ ಆಯೋಜಿಸಿದ್ದ ತಾಂಬೂಲ ಸಂಭ್ರಮ ಕಾರ್ಯಕ್ರಮದಲ್ಲಿ ವೀಳ್ಯದೆಲೆ ಮತ್ತು ಅಡಕೆ ಮಹತ್ವ ಕುರಿತ ಚರ್ಚೆಯಲ್ಲಿ ಮಾತನಾಡಿದರು.
ಇಂದು ಸಹಕಾರ ಸಂಘಗಳ ಕಾಲ ನಿಧಾನವಾಗಿ ಮರೆಯಾಗುತ್ತಿದ್ದು, ಕಂಪನಿಗಳ ಕಾಲ ಆರಂಭವಾಗುತ್ತಿರುವಂತೆ ಕಾಣುತ್ತಿದೆ. ಮೌಲ್ಯವರ್ಧನೆ ಎಂಬುದು ಕಾಲಧರ್ಮಕ್ಕೆ ಅನುಗುಣವಾಗಿ ಎಷ್ಟರ ಮಟ್ಟಿಗೆ ಅದು ಬದಲಾವಣೆ ಕಾಣಬೇಕು ಎಂಬುದು ಅವರವರ ಚರ್ಚೆಗೆ ಬಿಟ್ಟ ವಿಷಯ. ಕೃಷಿ ಭೂಮಿ ಮಾರಿ ಬೆಂಗಳೂರಿನಲ್ಲಿ ಮನೆ ಖರೀದಿಸಿ ಬದುಕುವ ಮನೋಪ್ರವೃತ್ತಿ ನೋಡುತ್ತಿದ್ದೇವೆ. ಅಲ್ಲಿ ನಾವು ಬದುಕಿಬಿಡಬಹುದು. ಆದರೆ ನಮ್ಮ ಜೀವನ ಕ್ರಮವನ್ನು ಅದು ತಂದುಕೊಡಲಾಗದು ಎಂದರು.
ಸಹ್ಯಾದ್ರಿ ತಪ್ಪಲಿನ ಅಡಕೆ ತೋಟಗಳ ಬಗ್ಗೆ ಪುರಾಣದಲ್ಲಿ, ವೀಳ್ಯದೆಲೆ ಬಳ್ಳಿ ಹುಟ್ಟಿನ ಬಗ್ಗೆ ಸ್ಕಂದಪುರಾಣದಲ್ಲಿ ಉಲ್ಲೇಖವಿದೆ. ತಾಂಬೂಲವನ್ನು ವಿವಿಧ ಆಚರಣೆಗಳಲ್ಲಿ ತಮ್ಮದೇ ಆದ ಶೈಲಿಗಳಲ್ಲಿ ಅದನ್ನು ಬಳಸುತ್ತ ಬಂದಿದ್ದಾರೆ. ತಾಂಬೂಲ ಎಂಬುದು ಜೀವನ ಕ್ರಮದಲ್ಲಿ ಸೇರಿದೆ ಎಂದು ಹೇಳಿದರು.
ಚಿಂತಕ ದೇವೇಂದ್ರ ಬೆಳೆಯೂರು ಮಾತನಾಡಿ, ಸಾಗರ ಭಾಗದಲ್ಲಿ ಲಕ್ಕವಳ್ಳಿ ವೀಳ್ಯದೆಲೆಗೆ ಬಹುಬೇಡಿಕೆ ಇದೆ. ಸಾಗರ, ಹೊಸನಗರ, ಸೊರಬ ದಾಟಿದರೆ ಉಳಿದೆಡೆ ಅಂಬಾಡೆ ಎಲೆಗೆ ಬೇಡಿಕೆ ಇದೆ. ನಮ್ಮ ಭಾಗದಲ್ಲಿ ಮಂಕಳಲೆಯ ವೀಳ್ಯದೆಲೆಗೆ ಬಹುಬೇಡಿಕೆ ಇದೆ ಎಂದರು.
ಮಣಿಪುರದ ಕಪ್ಪು ಅಕ್ಕಿ ಕುರಿತು ಮಾತನಾಡಿದ ಸಂಸ್ಥೆಯ ನಾಗೇಂದ್ರ ಸಾಗರ್, ಮಣಿಪುರದ ಕಪ್ಪು ಅಕ್ಕಿ ವಾಸನೆಯಿಂದಲೇ ಹೆಸರಾಗಿದೆ. ಇದನ್ನು ನಮ್ಮ ಭಾಗದಲ್ಲಿ ಬೆಳೆಯುವುದು ಕಷ್ಟ ಸಾಧ್ಯ. ಆದರೂ ತೀರ್ಥಹಳ್ಳಿ ರೈತರ ಮೂಲಕ ಒಂದು ಪ್ರಯತ್ನ ಮಾಡಿ ಮಾರುಕಟ್ಟೆಗೆ ತರುತ್ತಿದ್ದೇವೆ. ಜನರ ಆರೋಗ್ಯದ ದೃಷ್ಟಿಯಿಂದಲೂ ಬಹುಮುಖ್ಯ ಎನಿಸಿರುವ ಕಪ್ಪು ಅಕ್ಕಿಯನ್ನು ಮಾರುಕಟ್ಟೆಗೆ ತಂದು ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಮಲೆನಾಡುಗಿಡ್ಡ ರೈತ ಉತ್ಪಾದಕರ ಸಂಸ್ಥೆ ತಾಂಬೂಲವನ್ನು ಎದುರಿಗಿಟ್ಟುಕೊಂಡು ಅದನ್ನು ಸವಿಯುತ್ತಲೇ ಮಹತ್ವ ಪರಿಚಯಿಸುವ ತಾಂಬೂಲ ಸಂಭ್ರಮ ಎನ್ನುವ ವಿಶಿಷ್ಟ ಚರ್ಚೆಯನ್ನು ಆಯೋಜಿಸಿತ್ತು. ಕಪ್ಪು ಅಕ್ಕಿಯನ್ನು ಕೂಡ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ರಾಧಾಕೃಷ್ಣ ಬಂದಗದ್ದೆ, ಕೆ.ಎನ್.ವೆಂಕಟಗಿರಿ, ಪ್ರಕಾಶ್ ಕುಗ್ವೆ, ಯೋಗೀಶ್ ಭಟ್ ಇತರರಿದ್ದರು.