ರಿಪ್ಪನ್‌ಪೇಟೆ ಹಾರಂಬಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಶ್ರೀ ರೇಣುಕಾನಂದ ಸ್ವಾಮೀಜಿ, ವಿಜಯೇಂದ್ರ ಹಿರಗ್ಗಿ, ಸವಿತಾ ಇತರರಿದ್ದರು.  
ನ್ಯೂಸ್

ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯ

ರಿಪ್ಪನ್‌ಪೇಟೆ: ಭಾರತೀಯ ಪರಂಪರೆಯ ಸಂಸ್ಕಾರವನ್ನು ಉತ್ತೇಜಿಸುವ ಸಲುವಾಗಿ ಇಂದಿನ ಮಕ್ಕಳಿಗೆ ಮೌಲ್ಯಯುತ ಶಿಕ್ಷಣದ ಅಗತ್ಯವಿದೆ ಎಂದು ನಿಟ್ಟೂರು ಶ್ರೀ ನಾರಾಯಣಗುರು ಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿ ಹೇಳಿದರು.

ಹೆದ್ದಾರಿಪುರ ಗ್ರಾಪಂನ ಹಾರಂಬಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುನ್ನುಗ್ಗುತ್ತಿರುವ ಜನತೆ ತಮ್ಮ ಮಕ್ಕಳಿಗೆ ವೃತ್ತಿ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದರಿಂದ ನಿಧಾನವಾಗಿ ನಮ್ಮ ಸಂಸ್ಕೃತಿ ಸಮಾಜದಿಂದ ಕಣ್ಮರೆಯಾಗುವ ಅಪಾಯವಿದೆ ಎಂದರು.

ಶಿಕ್ಷಣ ಮಕ್ಕಳಲ್ಲಿ ನೈತಿಕ ಮೌಲ್ಯ ಹೆಚ್ಚಿಸುವಂತಿರಬೇಕು. ಗುರುಹಿರಿಯರಿಗೆ, ತಂದೆ, ತಾಯಿಗಳಿಗೆ ಗೌರವ ನೀಡುತ್ತ ವಿದ್ಯಾವಂತರಾದರೆ ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ. ವಿದ್ಯೆ ಎಂಬುದು ಮಾನವನ ಸಮಗ್ರ ಅಭಿವೃದ್ಧಿಗೆ ಸಹಕಾರಿ. ಸಂಸ್ಕಾರಯುತ ಶಿಕ್ಷಣ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದರು.

ಕಳೆದ 20 ವರ್ಷಗಳಿಂದ ಶಾಲೆಯ ಅಭಿವದ್ಧಿಗಾಗಿ ಶ್ರಮಿಸಿ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮದ ಗಣ್ಯವ್ಯಕ್ತಿಗಳು, ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳು ಹಾಗೂ ಸಹಕರಿಸಿದ ದಾನಿ ಹಾಗೂ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು. ಜಾನಪದ ಕಲಾವಿದರಾದ ಜಿ. ನಾಗರಾಜ ತೊಂಬ್ರಿ ಅವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಎಸ್‌ಡಿಎಂಸಿ ಅಧ್ಯಕ್ಷ ವಿಜಯೇಂದ್ರ ಹಿರಗ್ಗಿ, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಬಿಇಒ ಎಚ್.ಆರ್.ಕೃಷ್ಣಮೂರ್ತಿ, ಗ್ರಾಪಂ ಸದಸ್ಯರಾದ ಸವಿತಾ, ಉಮಾಕರ್, ಮುಖ್ಯ ಶಿಕ್ಷಕ ಮೋಹನ್‌ಕುಮಾರ್ ಇತರರಿದ್ದರು.