ಬೆಂಗಳೂರು: ಮಹರ್ಷಿ ವಾಲ್ಮಿಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಹಗರಣ ಪ್ರಕರಣವನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಗೆ ವಹಿಸಬೇಕು ಎಂದು ಕೋರಿ ಯೂನಿಯನ್ ಬ್ಯಾಂಕ್ ಆ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ತೀರ್ಪು ಕಾಯ್ದಿರಿಸಿದೆ.
ಪ್ರಕರಣ ಸಂಬಂಧ ಯೂನಿಯನ್ ಬ್ಯಾಂಕ್ ಆ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗರಪ್ರಸನ್ನ ಅವರಿದ್ದ ನ್ಯಾಯಪೀಠ, ಅ.14 ಇಲ್ಲವೇ 15ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ.
ವಿಚಾರಣೆ ವೇಳೆ, ಬ್ಯಾಂಕ್ ಪರ ಹಿರಿಯ ವಕೀಲ ಆರ್. ವೆಂಕಟರಮಣಿ ವಾದ ಮಂಡಿಸಿ, ಪ್ರಕರಣದಲ್ಲಿ ಕೇಂದ್ರ ಸರ್ಕಾರ ನೇರ ಮತ್ತು ಪರೋಕ್ಷವಾಗಿ ಪಕ್ಷಗಾರರಾಗುವುದಿಲ್ಲ. ಒಮ್ಮೆ ಬ್ಯಾಂಕಿನಿಂದ ಸಿಬಿಐಗೆ ದೂರು ಸಲ್ಲಿಕೆಯಾಗಿದ್ದು, ಪ್ರಕರಣ ದಾಖಲಿಸಿದ ಬಳಿಕ ಸಿಬಿಐ ತನಿಖೆ ಮುಂದುವರಿಸಬಹುದಾಗಿದೆ. ಬ್ಯಾಂಕುಗಳ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವುದಕ್ಕೆ ಸಿಬಿಐಗೆ ಅಧಿಕಾರವಿದೆ ಎಂದರು.
ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಬಿ.ವಿ.ಆಚಾರ್ಯ, ಪ್ರಕರಣ ರಾಜ್ಯ ಸರ್ಕಾರದ ವ್ಯಾಪ್ತಿಗೊಳಪಡುತ್ತದೆ. ಹೀಗಾಗಿ ರಾಜ್ಯ ಪೊಲೀಸರು ಪ್ರಕರಣ ಸಂಬಂಧ ತನಿಖೆ ನಡೆಸುವುದಕ್ಕೆ ಸಂಪೂರ್ಣ ಅಧಿಕಾರ ಹೊಂದಿದ್ದಾರೆ. ರಾಜ್ಯ ಸರ್ಕಾರ ತನಿಖೆ ನಡೆಸುತ್ತಿರುವ ವೇಳೆ ಕೇಂದ್ರ ಸರ್ಕಾರ ತನಿಖೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದಕ್ಕೆ ಅಧಿಕಾರವಿಲ್ಲ. ಬ್ಯಾಂಕ್‌ನ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿರುವ ರಾಜ್ಯ ಸರ್ಕಾರವನ್ನೇ ಆರೋಪಿಯನ್ನಾಗಿಸಿದ್ದಾರೆ.
ಜತೆಗೆ ಬ್ಯಾಂಕಿಂಗ್ ನಿಯಂತ್ರಕರು ಹೊರಡಿಸಿರುವ ಸುತ್ತೋಲೆಯ ಅನುಸಾರ ರಾಜ್ಯ ಪೊಲೀಸರನ್ನು ತನಿಖೆ ನಡೆಸುವ ಅಧಿಕಾರದಿಂದ ದೂರವಿಡಲಾಗಿಲ್ಲ. ರಾಜ್ಯ ಸರ್ಕಾರ ಈ ಪ್ರಕರಣದಲ್ಲಿ ತನಿಖೆ ನಡೆಸುವುದು ಬ್ಯಾಂಕ್ ಮೇಲಿನ ದಾಳಿ ಮಾಡಿದಂತಲ್ಲ. ಇದನ್ನು ಕಾನೂನು ಬಾಹಿರ ಎಂದು ಹೇಳಲಾಗಿಲ್ಲ. ಅಷ್ಟಕ್ಕೂ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಕೋರಿ ಬ್ಯಾಂಕ್ ಹೈಕೋರ್ಟ್ ಮೆಟ್ಟಿಲೇರುವುದಕ್ಕೆ ಅಧಿಕಾರವಿಲ್ಲ ಎಂದು ಪೀಠಕ್ಕೆ ವಿವರಿಸಿದರು.
ಈ ವೇಳೆ ನ್ಯಾಯಪೀಠ, ಪ್ರಸ್ತುತ ಪ್ರಕರಣದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ವಿವಾದ ಎಲ್ಲಿದೆ ಎಂದು ಪ್ರಶ್ನಿಸಿತು. ಇದಕ್ಕೆ ಆಚಾರ್ಯ, ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ, ಯೂನಿಯನ್ ಬ್ಯಾಂಕ್‌ನ್ನು ಪ್ರಸ್ಥಾಪಿಸಿ ಕೇಂದ್ರ ಸರ್ಕಾರದ ಅಂಗವಾಗಿರುವ ಸಂಸ್ಥೆಯಾಗಿದೆ. ಅಲ್ಲದೆ, ಅಟಾರ್ನಿ ಜನರಲ್ ಅವರು ಬ್ಯಾಂಕನ್ನು ಪ್ರತಿನಿಧಿಸಿದ್ದಾರೆ ಎಂದು ತಿಳಿಸಿದರು.ಇದಕ್ಕೆ ಪೀಠ, ಅಟಾರ್ನಿ ಜನರಲ್ ಅವರು, ಬ್ಯಾಂಕನ್ನು ಪ್ರತಿನಿಧಿಸುತ್ತಿದ್ದಾರೆ, ಪೀಠವನ್ನಲ್ಲ ಎಂದು ತಿಳಿಸಿತು.
ನಿಗಮದ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ. ರವಿವರ್ಮಕುಮಾರ್ ಸಿಬಿಐ ಕಾಯ್ದೆಯ ಮೂಲಕ ರಚನೆ ಮಾಡಿ, ಪೊಲೀಸ್ ಠಾಣೆ ಅಧಿಕಾರ ನೀಡಿದ್ದರೂ, ಅಧಿಸೂಚನೆ ಹೊರಡಿಸಿದ ಪ್ರಕರಣಗಳನ್ನು ಮಾತ್ರ ಸಿಬಿಐ ತನಿಖೆ ನಡೆಸುವುದಕ್ಕೆ ಅವಕಾಶವಿದೆ. ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಿಲ್ಲ. ಸಿಬಿಐನ್ನು ಮಾತ್ರ ಪ್ರತಿವಾದಿಯನ್ನಾಗಿಸಿದ್ದು, ಸಿಬಿಐ ಎಂದರೆ ಕೇಂದ್ರ ಸರ್ಕಾರವೇ ಆಗಿದೆ. ಹೀಗಿರುವಾಗ ಬ್ಯಾಂಕ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡಬೇಕು ಎಂದು ಕೋರುವುದಕ್ಕೆ ಅವಕಾಶವಿಲ್ಲ.
ಅಲ್ಲದೆ, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯಡಿಯಲ್ಲಿ ಆರ್‌ಬಿಐ ಕೇಂದ್ರ ಪಟ್ಟಿಯಲ್ಲಿ ಬರಲಿದೆ. ಆರ್‌ಬಿಐ ಹೊರಡಿಸಿರುವ ನಿರ್ದೇಶನವು ಕೇಂದ್ರ ಮತ್ತು ರಾಜ್ಯ ಸರ್ಕಾರ ಬದ್ಧರಾಗಿರಬೇಕಾಗಿಲ್ಲ. ಹೀಗಾಗಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಬೇಕಾಗಿದೆ ಎಂದು ಪೀಠಕ್ಕೆ ವಿವರಿಸಿದರು. ವಾದ-ಪ್ರತಿವಾದ ಆಲಿಸಿದ ಪೀಠ ತೀರ್ಪು ಕಾಯ್ದಿರಿಸಿತು.
ಶೀಘ್ರ ವಿಚಾರಣೆ ಆಗಲಿ
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಬಿ.ವಿ.ಆಚಾರ್ಯ ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಪರಿಗಣಿಸಬೇಕಾಗಿದೆ. ಸಿಬಿಐ ವಿಶೇಷ ತನಿಖಾ ಸಂಸ್ಥೆಯಾಗಿದ್ದು, ಅದೇ ಸಂಸ್ಥೆಯಿಂದ ತನಿಖೆ ನಡೆಯಬೇಕು ಎಂಬುದು ಬ್ಯಾಂಕ್ ವಾದ. ಆದರೆ, ಸಿಬಿಐಗೆ ವಹಿಸಿರುವ ಪ್ರಕರಣಗಳ ವಿಚಾರಣೆ 2-3 ವರ್ಷ ವಿಳಂಬವಾಗುತ್ತಿದೆ. ಶೀಘ್ರ ವಿಚಾರಣೆ ನಡೆಸಬೇಕು ಎಂಬುದು ಬ್ಯಾಂಕ್ ಅಧಿಕಾರಿಗಳ ಮನವಿಯಾಗಿದೆ. ಈ ಸಂಬಂಧ ನಾವು ಸಲ್ಲಿಸಿರುವ ಆಕ್ಷೇಪಣೆಯನ್ನು ಪರಿಗಣಿಸಬೇಕಾಗಿದೆ. ಅಲ್ಲದೆ, ಪ್ರಕರಣ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ವಿವಾದವಾಗಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಈ ಸಂಬಂಧ ಪ್ರಕರಣಗಳ ವಿಚಾರಣೆ ನಡೆಸುವುದಕ್ಕೆ ಅಧಿಕಾರವಿಲ್ಲ. ಹೀಗಾಗಿ ಸುಪ್ರೀಂಕೋರ್ಟ್ ವಿಚಾರಣೆ ನಡೆಸಬೇಕಾಗಿದೆ ಎಂದು ಕೋರಿದರು.